ಶುಕ್ರವಾರ, ಫೆಬ್ರವರಿ 21, 2020
26 °C

ದೇಶ ಕಟ್ಟಲು ಪೆನ್ ಬೇಕೇ ಹೊರತು ಗನ್ ಅಲ್ಲ: ಡಾ.ಪ್ರಭು ಖಾನಾಪುರೆ

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎಸ್. ಲಠ್ಠೆ ವೇದಿಕೆ (ಕಲಬುರ್ಗಿ): ‘ಸೌಹಾರ್ದ ಮತ್ತು ಸಹಬಾಳ್ವೆಯ ದೇಶವನ್ನು ಪೆನ್‌ಗಳ ಮೂಲಕ ಕಟ್ಟಬೇಕೇ ಹೊರತು ಗನ್‌ಗಳ ಮೂಲಕ ಒಡೆಯಬಾರದು. ಸಾಹಿತ್ಯದ ಮೂಲಕ ಬಹುಸಂಸ್ಕೃತಿ ಬೆಸೆಯಬೇಕೇ ಹೊರತು ದ್ವೇಷ ಭಾವನೆಯಿಂದ ಏಕಾಧಿಪತ್ಯ ಸ್ಥಾಪನೆಗೆ ಆಸ್ಪದ ನೀಡಬಾರದು' ಎಂದು ಹಿರಿಯ ಸಾಹಿತಿ ಡಾ.ಪ್ರಭು ಖಾನಾಪುರೆ ಹೇಳಿದರು.

ಶುಕ್ರವಾರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಶತಮಾನಗಳಿಂದ ಎಲ್ಲರೂ ಜೊತೆಗೂಡಿ ಬದುಕುತ್ತಿರುವ ಶಾಂತಿಪ್ರಿಯ ದೇಶದಲ್ಲಿ, ಜಾತಿ-ಧರ್ಮದ ವಿಷ ಬೀಜ ಬಿತ್ತಿ ಪರಸ್ಪರರ ನಡುವೆ ಅಪನಂಬಿಕೆ ಮತ್ತು ಅಸಹನೆ ಮೂಡಿಸಲಾಗುತ್ತಿದೆ’ ಎಂದರು.

‘ಪ್ರಭುತ್ವವು ಒಪ್ಪದ ಕವನವಾಚಿಸಿದರೆ ಅಥವಾ ನಾಟಕ ಪ್ರದರ್ಶಿಸಿದರೆ ಜೈಲಿಗೆ ಹೋಗಬೇಕಾದಪರಿಸ್ಥಿತಿ ಒಂದೆಡೆ ನಿರ್ಮಿಸಿದರೆ, ಮತ್ತೊಂದೆಡೆ ಈ ದೇಶದಲ್ಲಿ ಹುಟ್ಟಿರುವುದರ ಬಗ್ಗೆ ಪುರಾವೆ ನೀಡದಿದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗುತ್ತಿದೆ. ತುರ್ತು ಪರಿಸ್ಥಿತಿಗಿಂತ ಭಯಾನಕ ವಾತಾವರಣವನ್ನು ವ್ಯವಸ್ಥಿತವಾಗಿ ಸೃಷ್ಟಿಸಲಾಗುತ್ತಿದೆ' ಎಂದು ಕಳವಳ
ವ್ಯಕ್ತಪಡಿಸಿದರು.

‘ಸಹನೆ, ಸಂವಾದ ಮತ್ತು ಚರ್ಚೆಗೆ ಆದ್ಯತೆ ನೀಡುವ ಬದಲುಕ್ರೌರ್ಯ, ಹಿಂಸೆ ಮತ್ತು ದಾಳಿಪ್ರಚೋದಿಸಲಾಗುತ್ತಿದೆ. ಮಾನವೀಯತೆಯ ತತ್ವ, ಚಿಂತನೆಗಿಂತ ಅಮಾನವೀಯ ಕೃತ್ಯಗಳನ್ನು ಮಾಡುವುದರತ್ತ ಯುವಜನರನ್ನು ಹೆಚ್ಚು ಸೆಳೆಯಲಾಗುತ್ತಿದೆ. ದೇಶದ
ಹಿತದೃಷ್ಟಿಯಿಂದ ಇದು ಅಪಾಯಕಾರಿ ಬೆಳವಣಿಗೆ. ಸಾಧ್ಯವಾದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕಿದೆ' ಎಂದರು.

‘ದೇಶದಲ್ಲಿ ತಲೆದೋರಿರುವ ಭಯಗ್ರಸ್ತ ವಾತಾವರಣವನ್ನು ಶೀಘ್ರವೇ ಕೊನೆಗಾಣಿಸದಿದ್ದರೆ, ಯಾರೂ ಸಹ ನೆಮ್ಮದಿಯಿಂದ ಬಾಳಲು ಸಾಧ್ಯವಾಗುವುದಿಲ್ಲ. ಸ್ವಾತಂತ್ರ್ಯ ಕಳೆದುಕೊಂಡು, ಪ್ರಭುತ್ವ ಹೇಳಿದಂತೆ ಕೇಳಿಕೊಂಡು ಗುಲಾಮರಾಗಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳೂ ಸಹ ನಶಿಸುತ್ತವೆ’ ಎಂದು ಕಳವಳ ವ್ಯಕ್ತಪಡಿಸಿದರು.

45 ಮಂದಿ ಕವಿಗಳು, ನಾಡು-ನುಡಿ, ಪೌರತ್ವ, ದೇಶಭಕ್ತಿ, ಬದುಕು, ಪರಿಸರ, ಮೂಢನಂಬಿಕೆ, ಸಂಸ್ಕೃತಿ ಮುಂತಾದ ವಿಷಯಗಳ ಕುರಿತು ಕವನ ವಾಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು