ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾರೋಗ್ಯಕ್ಕೆ ಔಷಧಗಳೇ ಪರಿಹಾರವಲ್ಲ

ಮಧುಮೇಹ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೀಮಾ ಲಾಟ್ಕರ್‌ ಅಭಿಪ್ರಾಯ
Last Updated 17 ಮೇ 2018, 4:41 IST
ಅಕ್ಷರ ಗಾತ್ರ

ಬೆಳಗಾವಿ: ‘ಉತ್ತಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಕಾಯಿಲೆರಹಿತ ಜೀವನ ಸಾಗಿಸಬಹುದು’ ಎಂದು ಡಿಸಿಪಿ ಸೀಮಾ ಲಾಟ್ಕರ್‌ ತಿಳಿಸಿದರು.

‌ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಮಧುಮೇಹ
ಪೀಡಿತ ಮಕ್ಕಳಿಗಾಗಿ ಬುಧವಾರ ಏರ್ಪಡಿಸಿದ್ದ ಬೇಸಿಗೆಯ ವಿಶೇಷ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಆರೋಗ್ಯಯುತ ಜೀವನಕ್ಕೆ ಔಷಧಿಗಳೇ ಪರಿಹಾರವಲ್ಲ. ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಧೋರಣೆ ಇದ್ದರೆ ಕಾಯಿಲೆ
ಗಳಿಂದ ದೂರವಿದ್ದು, ಒಳ್ಳೆಯ ಜೀವನ ಸಾಗಿಸಬಹುದು. ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವವಾಗಿದೆ. ಗಡಿಬಿಡಿಯ ಜೀವನದಿಂದ ಹೊರ ಬಂದು ಮಕ್ಕಳೊಂದಿಗೆ ನಲಿದಾಡಬೇಕು’ ಎಂದು ಸಲಹೆ ನೀಡಿದರು.

‘ಮಕ್ಕಳ ಆರೋಗ್ಯ ಕಾಳಜಿ ಕುರಿತು ಪೋಷಕರು ನಿಗಾ ವಹಿಸಬೇಕು. ರ‍್ಯಾಂಕ್‌ ತೆಗೆದುಕೊಳ್ಳಬೇಕು ಎಂದು ಒತ್ತಡ ಹಾಕದೇ ಅವರಲ್ಲಿ ಜೀವನದ ಕಲೆಯ ಅರಿವು ಮೂಡಿಸಬೇಕು. ಮಧುಮೇಹ ಸಮಸ್ಯೆ ಇರುವ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವ ಬೆಳೆಸಬೇಕು’ ಎಂದು ಹೇಳಿದರು.

ಉಚಿತವಾಗಿ ಸೌಲಭ್ಯ: ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಮಧುಮೇಹ ಕೇಂದ್ರದ ಮುಖ್ಯಸ್ಥ ಡಾ.ಎಂ.ವಿ. ಜಾಲಿ, ‘ಮಧುಮೇಹ ಕೇಂದ್ರ ಇಂದು ಮಕ್ಕಳ ಮಧುಮೇಹ ಚಿಕಿತ್ಸೆ ಮತ್ತು ಕಾಳಜಿಯನ್ನು ಸಂಪೂರ್ಣವಾಗಿ ವಹಿಸುತ್ತಿದೆ. ದಿನದಿಂದ ದಿನಕ್ಕೆ ಮಧುಮೇಹಕ್ಕೆ ಒಳಗಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸದಾಗಿ ಪ್ರತಿ ವರ್ಷ 40ಸಾವಿರ ಮಕ್ಕಳು ಮಧುಮೇಹ (ಟೈಪ್ 1) ಗುಂಪಿಗೆ ಸೇರುತ್ತಿದ್ದಾರೆ. ಈ ಕೇಂದ್ರದಲ್ಲಿ ಸದ್ಯಕ್ಕೆ 320 ಮಕ್ಕಳು ದಾಖಲಾಗಿದ್ದು, ಇದರಲ್ಲಿ 150 ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ಹಾಗೂ ಇನ್ಸುಲಿನ್ ನೀಡಲಾಗುತ್ತಿದೆ. ದೇಶದಲ್ಲಿಯೇ ಅತ್ಯಧಿಕ ಮಧು
ಮೇಹ ಸಮಸ್ಯೆಯ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ಕೇಂದ್ರವಿದು’ ಎಂದು ಮಾಹಿತಿ ನೀಡಿದರು.

ಮಕ್ಕಳ ಮಧುಮೇಹ ತಜ್ಞ ವೈದ್ಯೆ ಡಾ.ಸುಜಾತಾ ಜಾಲಿ ಮಾತನಾಡಿ, ‘ಮಧುಮೇಹಕ್ಕೆ ಒಳಗಾದ ಮಕ್ಕಳ ವೈದ್ಯಕೀಯ ವೆಚ್ಚ ಕುಟುಂಬಕ್ಕೆ ಆರ್ಥಿಕವಾಗಿ ದೊಡ್ಡ ಹೊರೆ. ಪ್ರತಿ ವರ್ಷ ಇನ್ಸುಲಿನ್‌ಗೆ ₹ 4000ದಿಂದ ₹ 5000 ಹಾಗೂ ಇನ್ನಿತರ ವೈದ್ಯಕೀಯ ವೆಚ್ಚಗಳಿಗಾಗಿ ಅಂದಾಜು ₹ 30ಸಾವಿರ ಬೇಕಾಗುತ್ತದೆ. ವೆಚ್ಚ ಭರಿಸಲಾಗದ ಬಡ ಕುಟುಂಬಗಳು ಕೈಚೆಲ್ಲಿ ಕುಳಿತುಕೊಳ್ಳುತ್ತವೆ. ಇದನ್ನು ಮನಗಂಡ ಮಧುಮೇಹ ಕೇಂದ್ರವು ಅನೇಕ ಸಂಸ್ಥೆಗಳ ಸಹಯೋಗದಲ್ಲಿ, ಮಕ್ಕಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ನೋಡಿಕೊಳ್ಳುತ್ತಿದೆ. ಅಲ್ಲದೇ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ವಿದ್ಯಾರ್ಥಿ ವೇತನ ನೀಡುತ್ತಿದೆ’ ಎಂದು ತಿಳಿಸಿದರು.

ಬಹುಮಾನ ವಿತರಣೆ: ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಾ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಬಾಲಕ ಸಂಪತ್‌ ಬುಲ್ಲಾ ಎಂಬ ಬಾಲಕಿ ಸಬಾ ಮಕಾನದಾರ ಎಂಬ ಬಾಲಕಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಬಹುಮಾನ ನೀಡಲಾಯಿತು.

ಚಿತ್ರಕಲೆ, ಸಂಗೀತ, ನೃತ್ಯ, ರಸಪ್ರಶ್ನೆ, ಯೋಗ ಮತ್ತು ಧ್ಯಾನ ಕಾರ್ಯಕ್ರಮಗಳು ನಡೆದವು. ಆಹಾರ ಸೇವನೆ ಪದ್ಧತಿ, ಮಧುಮೇಹ ಶಿಕ್ಷಣ ಕುರಿತು ತಿಳಿಸಲಾಯಿತು. 160 ಮಕ್ಕಳು ಭಾಗವಹಿಸಿದ್ದರು.

ಜವಾಹರಲಾಲ್‌ ನೆಹರೂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ಎನ್.ಎಸ್. ಮಹಾಂತಶೆಟ್ಟಿ ಮಾತನಾಡಿದರು. ಕೆಎಲ್‌ಇ ವಿಶ್ವವಿದ್ಯಾಲಯ ಕುಲಪತಿ ಡಾ.ವಿವೇಕ ಸಾವಜಿ, ಡಾ.ಜ್ಯೋತಿ ವಸೆದಾರ ಉಪಸ್ಥಿತರಿದ್ದರು. ಡಾ.ನಂದಿತಾ ಪವಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT