ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು ಮಳೆ ಅಭಾವ: 156 ತಾಲ್ಲೂಕುಗಳಿಗೆ ವಿಸ್ತರಿಸಿದ ಬರ

ಮಲೆನಾಡು, ಕರಾವಳಿಯ ತಾಲ್ಲೂಕುಗಳು ಸೇರ್ಪಡೆ
Last Updated 26 ಡಿಸೆಂಬರ್ 2018, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹಿಂಗಾರಿನ ಮಳೆ ಅಭಾವದ ಆಧಾರದಲ್ಲಿ 156 ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಇದರಲ್ಲಿ 95 ತಾಲ್ಲೂಕುಗಳು ತೀವ್ರ ಬರಪೀಡಿತವಾಗಿದ್ದರೆ, 61 ತಾಲ್ಲೂಕುಗಳು ಸಾಧಾರಣ ಬರಪೀಡಿತವಾಗಿವೆ. ಜುಲೈ ತಿಂಗಳಲ್ಲಿ ಪ್ರವಾಹದಿಂದ ತತ್ತರಿಸಿದ್ದ ಕರಾವಳಿ ಹಾಗೂ ಮಲೆನಾಡಿನ ಎಂಟು ಜಿಲ್ಲೆಗಳ ತಾಲ್ಲೂಕುಗಳ ಸಹ ಬರ ಪಟ್ಟಿಗೆ ಸೇರ್ಪಡೆಯಾಗಿವೆ. ಪ್ರವಾಹ, ಭೂಕುಸಿತ ಹಾಗೂ ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯಿಂದಾಗಿ ₹20 ಸಾವಿರ ಕೋಟಿ ನಷ್ಟ ಉಂಟಾಗಿದೆ.

ವಿಧಾನಸೌಧದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಉಪಸಮಿತಿಯ ಸಭೆಯ ಬಳಿಕ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಮುಂಗಾರಿನ ಮಳೆ ಕೊರತೆ ಗಮನಿಸಿ ಆರಂಭದಲ್ಲಿ 86 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಮತ್ತೆ 16 ತಾಲ್ಲೂಕುಗಳನ್ನು ಸೇರ್ಪಡೆ ಮಾಡಲಾಗಿತ್ತು. ಇದೀಗ, ಹಿಂಗಾರು ಮಳೆ ಕೊರತೆ ಆಧಾರದಲ್ಲಿ 156 ತಾಲ್ಲೂಕುಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ.

ಹಿಂಗಾರಿನಲ್ಲಿ ಮಳೆ ಪ್ರಮಾಣ ಕೊರತೆ ಶೇ 49ರಷ್ಟಿದೆ. ಅದರಲ್ಲೂ ರಾಜ್ಯದಲ್ಲಿ ಬೆಳೆಯಲಾಗುವ ಒಟ್ಟು ಹಿಂಗಾರು ಬೆಳೆಗಳ ಪೈಕಿ ಶೇ 90ರಷ್ಟು ಬಿತ್ತನೆಯಾಗುವ ಉತ್ತರ ಒಳನಾಡಿನಲ್ಲಿ ಶೇ 66ರಷ್ಟು ಮಳೆ ಅಭಾವ ಉಂಟಾಗಿದೆ. 156 ತಾಲ್ಲೂಕುಗಳಲ್ಲಿ ಬೆಳೆ ಹಾನಿ ಹಾಗೂ ಕ್ಷೇತ್ರ ತಪಾಸಣೆ ಕೈಗೊಂಡ ಬಳಿಕ ಈ ತಾಲ್ಲೂಕುಗಳನ್ನು ತೀವ್ರ ಹಾಗೂ ಸಾಧಾರಣ ಬರಪೀಡಿತ ಪ್ರತ್ಯೇಕಿಸಲಾಗುವುದು ಎಂದು ದೇಶಪಾಂಡೆ ತಿಳಿಸಿದರು.

ಹಿಂಗಾರು ಬಿತ್ತನೆ: ಹಿಂಗಾರಿನಲ್ಲಿ 31.80 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇರಿಸಿಕೊಳ್ಳಲಾಗಿತ್ತು. ಡಿಸೆಂಬರ್‌ 21ರ ವರೆಗೆ 26.03 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಗೆ 29.09 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು ಎಂದರು.

25,983 ರೈತರಿಗೆ ಇನ್‌ಪುಟ್‌ ಸಬ್ಸಿಡಿ

ಪ್ರವಾಹ ಪರಿಸ್ಥಿತಿಯಿಂದಾಗಿ ಬೆಳೆ ಹಾನಿಗೊಳಗಾಗಿರುವ 25,983 ರೈತರಿಗೆ ಒಟ್ಟು ₹22.24 ಕೋಟಿ ಇನ್‌ಪುಟ್‌ ಸಬ್ಸಿಡಿ ನೀಡಲಾಗಿದೆ ಎಂದು ದೇಶಪಾಂಡೆ ತಿಳಿಸಿದರು. ಗರಿಷ್ಠ ಒಂದು ತಿಂಗಳಲ್ಲಿ ಅರ್ಹರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಮೊತ್ತ ಹಾಕಲಾಗುವುದು. ಇದಲ್ಲದೆ, ಮೂಲಸೌಲಭ್ಯಗಳಿಗೆ ಆಗಿರುವ ಹಾನಿಗೆ ₹214 ಕೋಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಸರ್ಕಾರ ಏನು ಮಾಡಿದೆ

* 100 ಬರಪೀಡಿತ ತಾಲ್ಲೂಕುಗಳಿಗೆ ತಲಾ ₹1 ಕೋಟಿ ಬಿಡುಗಡೆ

* ಹಿಂಗಾರಿನಲ್ಲಿ ಸೇರ್ಪಡೆಯಾದ 56 ತಾಲ್ಲೂಕುಗಳಿಗೆ ತಲಾ ₹50 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT