ಮತದಾರರ ಪಟ್ಟಿಗೆ ಅರ್ಹ ವಿದ್ಯಾರ್ಥಿಗಳ ಸೇರ್ಪಡೆ

7
ಕಾಲೇಜು ಪ್ರಾಂಶುಪಾಲರಿಗೆ ಹೊಣೆ

ಮತದಾರರ ಪಟ್ಟಿಗೆ ಅರ್ಹ ವಿದ್ಯಾರ್ಥಿಗಳ ಸೇರ್ಪಡೆ

Published:
Updated:

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಪ್ರಾಂಶುಪಾಲರು ತಕ್ಷಣವೇ ತಮ್ಮ ಕಾಲೇಜುಗಳಲ್ಲಿರುವ ಮತದಾನಕ್ಕೆ ಅರ್ಹರಿರುವ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು.

ಈ ಸಂಬಂಧ ಮಂಗಳವಾರ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ನಿರೀಕ್ಷಿತ ಮಟ್ಟದಲ್ಲಿ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಉತ್ಸಾಹ ತೋರಿಸುತ್ತಿಲ್ಲ. ಆದ್ದರಿಂದ ಚುನಾವಣಾ ಆಯೋಗ ಕಾಲೇಜು ಶಿಕ್ಷಣ ಇಲಾಖೆಯ ನೆರವು ಕೋರಿದೆ. 2019 ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈವರೆಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗದೇ ಇರುವ ಅರ್ಹ ಯುವ ವಿದ್ಯಾರ್ಥಿ ಮತದಾರರರನ್ನು ಮತದಾರರ ಪಟ್ಟಿಗೆ ಸೇರಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

‘ಇಲಾಖೆ ವ್ಯಾಪ್ತಿಯ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು ಅರ್ಹ ವಿದ್ಯಾರ್ಥಿ ಮತದಾರರನ್ನು ನೋಂದಾಯಿಸುವುದು ಕಡ್ಡಾಯ’ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಹೇಳಿದ್ದಾರೆ.

ಎಲ್ಲ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜು ವ್ಯಾಪ್ತಿಯ ಸ್ಥಳೀಯ ಬಿಇಒ(ಬೂತ್‌ ಲೆವೆಲ್ ಆಫೀಸರ್‌)ಗಳನ್ನು ಸಂಪರ್ಕಿಸಿ, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಭರ್ತಿ ಮಾಡಿಸಿ, ಬಿಇಒಗಳಿಗೆ ಸಲ್ಲಿಸಬೇಕು ಎಂದಿದ್ದಾರೆ.

ಅಲ್ಲದೆ, ಜಿಲ್ಲಾ ಲೀಡ್‌ ಕಾಲೇಜು ಪ್ರಾಂಶುಪಾಲರು ಪ್ರತಿ ಶುಕ್ರವಾರ ಬೆಳಿಗ್ಗೆ 11 ರೊಳಗೆ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಹಾಗೂ ಕೇಂದ್ರ ಕಚೇರಿಗೆ ಎಕ್ಸೆಲ್‌ ಫಾರ್ಮೆಟ್‌ ಇ–ಮೇಲ್‌ ಮಾಡಬೇಕು ಎಂದೂ ಸೂಚಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !