ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ಒತ್ತಡ ?

ಮತ್ತೆ ವನ್ಯಜೀವಿ ಮಂಡಳಿ ಸಭೆ * ಪಶ್ಚಿಮ ಘಟ್ಟ ಸರಣಿ ಭೂಕುಸಿತದಿಂದ ಪಾಠ ಕಲಿಯದ ಸರ್ಕಾರ– ಪರಿಸರ ತಜ್ಞರ ಕಳವಳ
Last Updated 19 ಮಾರ್ಚ್ 2020, 16:15 IST
ಅಕ್ಷರ ಗಾತ್ರ

ಬೆಂಗಳೂರು: ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಹಾದುಹೋಗಲಿರುವ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ರಾಜ್ಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಪಡೆಯಲು ಶತಾಯ ಗತಾಯ ಪ್ರಯತ್ನ ಮುಂದುವರಿದಿದೆ.

ಮಂಡಳಿಯ ಮಾರ್ಚ್ 9 ರಂದು ನಡೆಸಿದ್ದ 13 ನೇ ಸಭೆಯಲ್ಲಿ ಬಹುತೇಕ ಸದಸ್ಯರು ಈ ರೈಲು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಈ ಪ್ರಸ್ತಾವಕ್ಕೆ ಮಂಡಳಿ ಅನುಮೋದನೆ ನೀಡಿರಲಿಲ್ಲ. ಇದರ ಹೊರತಾಗಿಯೂ ಮತ್ತೆ ಇದೇ ವಿಷಯ ಚರ್ಚಿಸಲು ಮಂಡಳಿಯ 14 ನೇ ಸಭೆಯನ್ನು ಇದೇ 20ರಂದು ಕರೆಯಲಾಗಿದೆ.

ಸದಸ್ಯರ ಒಮ್ಮತದ ತೀರ್ಮಾನವನ್ನು ಕಡೆಗಣಿಸಿ, ರಾಜಕಿಯ ಒತ್ತಡಕ್ಕೆ ಮಣಿದು ಮತ್ತೆ ಸಭೆ ಕರೆದಿರುವುದು ಮಂಡಳಿ ಸದಸ್ಯರ ಹಾಗೂ ವನ್ಯಜೀವಿ ಕಾರ್ಯಕರ್ತರ ಹುಬ್ಬೇರುವಂತೆ ಮಾಡಿದೆ.

ಐಐಎಸ್ಸಿ ವರದಿಗೂ ಖಂಡನೆ:

ಉಪಶಮನ ಕ್ರಮಗಳನ್ನು ಕೈಗೊಂಡು ಯೋಜನೆಯನ್ನು ಜಾರಿಗೊಳಿಸಬಹುದೆಂಬ ಭಾರತೀಯ ವಿಜ್ಞಾನ ಸಂಸ್ಥೆಯ ಸಲಹೆಗಳನ್ನು ಒಪ್ಪಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿರುವ ಅಂದಿನ ಮುಖ್ಯ ವನ್ಯಜೀವಿ ಪರಿಪಾಲಕರ ನಡೆಗೂ ವನ್ಯಜೀವಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಐಎಸ್ಸಿಯ ಸಲಹೆ ಕೋರಿದ್ದು ರೈಲು ಯೋಜನೆ ಜಾರಿಗೆ ಪ್ರಯತ್ನಿಸಿರುವ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯೇ ಹೊರತು ಅರಣ್ಯ ಇಲಾಖೆಯಲ್ಲ. ಪಶ್ಚಿಮ ಘಟ್ಟಗಳ ಸೂಕ್ಷ್ಮ ಅರಣ್ಯ ಪ್ರದೇಶಗಳ ಮೂಲಕ ರೈಲು ಮಾರ್ಗವು ಹಾದುಹೋಗಲಿದ್ದು ಯಾವುದೇ ಉಪಶಮನ ಕ್ರಮಗಳನ್ನು ಕೈಗೊಂಡು ಇಂತಹ ಪರಿಸರವನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂದುವನ್ಯಜೀವಿ ಕಾರ್ಯಕರ್ತರು ಸ್ಪಷ್ಟಪಡಿಸಿದ್ದಾರೆ.

ಅರಣ್ಯ ನಾಶಕ್ಕೆ ಪ್ರತಿಯಾಗಿ ನೆಡುತೋಪುಗಳನ್ನು ಅಭಿವೃದ್ಧಿಪಡಿಸುವುದರ ಮೂಲಕ ಅರಣ್ಯೀಕರಣ ಕಾರ್ಯ ಕೈಗೊಳ್ಳಬಹುದೆಂದು ಯೋಜನೆಯ ಪರಿಸರ ನಿರ್ವಹಣಾ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ. ಹಿಮಾಲಯ ಪರ್ವತಗಳಿಗಿಂತಲೂ ಹಳೆಯದಾದ ಹಾಗೂ ಹಲವಾರು ನದಿ, ಹಳ್ಳ-ಕೊಳ್ಳಗಳ ಮೂಲಕ ಲಕ್ಷಾಂತರ ಜನರ ಕುಡಿಯುವ ನೀರಿನ ಮೂಲವಾದ ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಗಳಲ್ಲಿ ಹೊಸ ರೈಲ್ವೆ ಮಾರ್ಗ ಬಂದರೆ ಇಂತಹ ಅರಣ್ಯ ಪ್ರದೇಶಗಳ ಹಾನಿಯನ್ನು ನೆಡುತೋಪು ಬೆಳೆಸಿ ಸರಿಪಡಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.

ಅರಣ್ಯ ಇಲಾಖೆ ಹಾಗೂ ರೈಲ್ವೆಯವರು ಜಂಟಿಯಾಗಿ ಗಸ್ತು ಕಾರ್ಯ ಮಾಡಬೇಕೆಂಬ ಸಲಹೆ ನೀಡಲಾಗಿದೆ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿರುವುದು ಹೊಸದೇನಲ್ಲ. ಅರಣ್ಯ ಪ್ರದೇಶಗಳಲ್ಲಿ ಸಿಬ್ಬಂದಿ ತಮ್ಮ ದೈನಂದಿನ ಕೆಲಸಗಳ ಜೊತೆಗೆ ರೈಲ್ವೆ ಮಾರ್ಗದ ಗಸ್ತು ನಡೆಸಲು ಪ್ರಾಯೋಗಿಕವಾಗಿ ಸಾಧ್ಯವೇ ಎಂದು ವಿವರಣೆ ಕೇಳಿದ್ದಾರೆ.

ವನ್ಯಜೀವಿಗಳಿಗೆ ಮೇವಿನ ಮೀಸಲು ಪ್ರದೇಶಗಳ ನಿರ್ಮಾಣ, ಜಲಮೂಲಗಳ ನಿರ್ಮಾಣ, ಪಕ್ಷಿಗಳಿಗಾಗಿ ಆಹಾರ ಸಸ್ಯಗಳ ಬೆಳೆಸುವಿಕೆ, ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ರೈಲ್ವೆಗಳಲ್ಲಿ ತ್ಯಾಜ್ಯ ನಿರ್ವಹಣೆ ಕುರಿತ ಸಲಹೆಗಳು ಹಾಸ್ಯಾಸ್ಪದ. ಆಹಾರ ಹಾಗೂ ನೀರಿನ ಮೂಲಗಳನ್ನು ಹುಡುಕುವುದು ಹೇಗೆಂದುವನ್ಯಜೀವಿಗಳಿಗೆ ಗೊತ್ತಿದೆ. ಅವುಗಳ ಆವಾಸಸ್ಥಾನಗಳನ್ನು ಹಾಳು ಮಾಡದಿದ್ದರೆ ಸಾಕು ಹಾಗೂ ಇಂತಹ ಪ್ರದೇಶದಲ್ಲಿ ಇಂತಹ ಯಾವುದೇ ಕ್ರಮಗಳು ನಿಷ್ಪ್ರಯೋಜಕ ಎಂದು ವನ್ಯಜೀವಿ ಕಾರ್ಯಕರ್ತ ಗುರುಪ್ರಸಾದ್ ಟೀಕಿಸಿದ್ದಾರೆ.

ರೈಲುಗಳ ವೇಗ ನಿಯಂತ್ರಣದಿಂದ ಹಾಗೂ ಮೇಲ್ಸೇತುವೆ/ ಕೆಳಸೇತುವೆಗಳನ್ನು ನಿರ್ಮಿಸುವುದರಿಂದ ರೈಲು ಅಪಘಾತಕ್ಕೆ ಕಾಡು ಪ್ರಾಣಿಗಳು ಬಲಿಯಾಗುವುದನ್ನು ತಪ್ಪಿಸಲಾಗದು. ಬೆಳಗಾವಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಾದುಹೋಗುವ ಹೊಸಪೇಟೆ-ಅಳ್ನಾವರ್-ಲೋಂಡಾ-ವಾಸ್ಕೊ ಹಾಗೂ ಲೋಂಡಾ-ಖಾನಾಪುರ-ಬೆಳಗಾವಿ ರೈಲು ಮಾರ್ಗಗಳಲ್ಲಿ ಆರು ವರ್ಷಗಳಲ್ಲಿ 34 ಕಾಟಿ, ಎರಡು ಕಾಡಾನೆ, ಕೆನ್ನಾಯಿ, ಕರಡಿ, ಕಡವೆ ಸೇರಿದಂತೆ ಒಟ್ಟೂ 40ಕ್ಕೂ ಹೆಚ್ಚು ದೊಡ್ಡ ಸಸ್ತನಿಗಳು ಸತ್ತಿವೆ. ಕಾಡಿನೊಳಗೆ ಹಾದುಹೋಗುವ ರೈಲು ಮಾರ್ಗಗಳು ವನ್ಯಜೀವಿಗಳಿಗೆ ಎಷ್ಟು ಅಪಾಯವನ್ನು ತಂದೊಡ್ಡಬಲ್ಲುದು ಎಂಬುದಕ್ಕೆ ಇದೇ ಸಾಕ್ಷಿ ಎಂದು ಅವರು ಬೊಟ್ಟು ಮಾಡಿದ್ದಾರೆ.

‘ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ದೇಶದಲ್ಲೆಡೆ ಅರಣ್ಯ ಪ್ರದೇಶಗಳ ಮೂಲಕ ಹಾದುಹೋಗುವ ರೈಲ್ವೆ ಮಾರ್ಗಗಳಲ್ಲಿ ರೈಲುಗಳ ವೇಗ ನಿಯಂತ್ರಣದ ಕುರಿತು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ರೈಲ್ವೆ ಇಲಾಖೆಗೆ ಅರಣ್ಯ ಇಲಾಖೆ ಹಲವಾರು ಬಾರಿ ಮನವಿ ಮಾಡಿದೆ. ಆದರೆ ರೈಲ್ವೆ ಅಧಿಕಾರಿಗಳು ನ್ಯಾಯಾಲಯದ ಆದೇಶಕ್ಕಾಗಲೀ ಅಥವಾ ಅರಣ್ಯ ಇಲಾಖೆಯ ಮನವಿಗಾಗಲೀ ಬೆಲೆಯನ್ನೇ ನೀಡಿಲ್ಲ. ಈಗಿರುವ ರೈಲ್ವೆ ಮಾರ್ಗಗಳಲ್ಲೇ ವನ್ಯಜೀವಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳದ ರೈಲ್ವೆ ಇಲಾಖೆ ಉಪಶಮನ ಕ್ರಮಗಳನ್ನು ಕೈಗೊಂಡು ಕಾಡಿನೊಳಗೆ ಹೊಸ ಮಾರ್ಗ ನಿರ್ಮಿಸಬಹುದೆಂದು ಪ್ರತಿಪಾದಿಸುತ್ತಿರುವುದು ಆಶ್ಚರ್ಯ ಮೂಡಿಸಿದೆ’ ಎಂದು ಅವರು ಹೇಳಿದ್ದಾರೆ.

ರೈಲು ಮಾರ್ಗವು ಒಂದು ಕಡೆ ಹುಲಿ ಯೋಜನೆ ಪ್ರದೇಶದಿಂದ ಕೇವಲ 5.5 ಕಿಮೀ ದೂರದಲ್ಲಿದೆ ಎಂಬುದನ್ನು ರೈಲ್ವೆ ಇಲಾಖೆಯವರೇ ಒಪ್ಪಿಕೊಂಡಿದೆ. ಇದಕ್ಕಿಂತ ಸಾಕ್ಷಿ ಬೇಕೇ ಎಂದು ವನ್ಯಜೀವಿ ಕಾರ್ಯಕರ್ತ ಶರತ್ ಪ್ರಶ್ನಿಸಿದ್ದಾರೆ.

ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ಪಶ್ಚಿಮ ಘಟ್ಟದ ಹಾಗೂ ಅರಣ್ಯ ಪ್ರದೇಶಗಳ ಪ್ರತಿನಿಧಿಗಳೇ ಇಲ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿಸುವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಮಂಡಳಿಯ ಅಧ್ಯಕ್ಷರಾದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪಶ್ಚಿಮ ಘಟ್ಟ ಹಾದುಹೋಗುವ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಸದಸ್ಯರಾದ ಪಿ.ಎಂ.ಸುಬ್ರು, ಅಜಯ್ ದೇಸಾಯಿ, ಮಲ್ಲೇಶಪ್ಪ, ಮಾದೇಗೌಡ, ನೀರಜ್ ನಿರ್ಮಲ್ ಇವರೆಲ್ಲರೂ ಪಶ್ಚಿಮ ಘಟ್ಟ ಹಾಗೂ ಅರಣ್ಯ ಪ್ರದೇಶಗಳನ್ನು ಹೊಂದಿರುವ ಜಿಲ್ಲೆಯವರು’ ಎಂದು ತಿರುಗೇಟು ನೀಡಿದ್ದಾರೆ.

ಅಂಕಿ ಅಂಶ

667 ಹೆಕ್ಟೇರ್‌

ಈ ಯೋಜನೆಯಿಂದ ಆಗುವ ಕಾಡು ನಾಶ (ಪರಿಹಾರೋಪಾಯದ ಬಳಿಕ)

1.58 ಲಕ್ಷ

ತೆರವುಗೊಳಿಸಬೇಕಾದ ಮರಗಳ ಸಂಖ್ಯೆ

₹ 2,970 ಕೋಟಿ

ಈ ರೈಲು ಮಾರ್ಗಕ್ಕಾಗಿ ನಾಶಪಡಿಸಬೇಕಾಗುವ ಕಾಡಿನ ಅಂದಾಜು ಆರ್ಥಿಕ ಮೌಲ್ಯ

₹ 450 ಕೋಟಿ

ಕಾಡು ಸಂರಕ್ಷಣೆ ಚಟುವಟಿಕೆಗಾಗಿ ಅರಣ್ಯ ಇಲಾಖೆಗೆ ನೀಡಬೇಕಾಗುವ ಮೊತ್ತ

ಕೆಂಪು ಪಟ್ಟಿಯಲ್ಲಿರುವ ಪ್ರಾಣಿಗಳ ತಾಣ

ರೈಲು ಮಾರ್ಗ ಹಾದುಹೋಗುವ ಕಡೆ ಅಂತರರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಒಕ್ಕೂಟವು (ಐಯುಸಿಎನ್‌) ಕೆಂಪು ಪಟ್ಟಿಯಲ್ಲಿ ಗುರುತಿಸಿರುವ ಅಪಾಯದ ಅಂಚಿನಲ್ಲಿರುವ ಪ್ರಾಣಿಗಳ ಆವಾಸ ಸ್ಥಾನಗಳೂ ಇವೆ. ಇಲ್ಲಿ ಕಂಡುಬರುವ ಬಹುತೇಕ ಪ್ರಾಣಿಗಳು 1972ರ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆ ಇರುವಂತಹವು. ಇಲ್ಲಿ ಕಂಡು ಬರುವ ಮಳೆ ಹಕ್ಕಿ (ಹಾರ್ನ್‌ಬಿಲ್‌) ಅನುಸೂಚಿ 1ರ ಅಡಿ ಗುರುತಿಸಿರುವ ಪ್ರಾಣಿ. ಕಲಘಟಗಿ ವಲಯ ಅರಣ್ಯ ಪ್ರದೇಶದಲ್ಲಿ ಆನೆ ಕಾರಿಡಾರ್‌ ಹಾದುಹೋಗುತ್ತದೆ. ಇಲ್ಲಿ ವನ್ಯಜೀವಿ ಸ್ತರ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಹುಲಿಗಳ ಆವಾಸ ಸ್ಥಾನವೂ ಇದಾಗಿದೆ. ಜಗತ್ತಿನಿಂದಲೇ ನಾಶವಾಗಿತ್ತು ಎಂದು ಭಾವಿಸಲಾಗಿದ್ದ ಕಪ್ಪೆಯ ಪ್ರಭೇದವೊಂದು (Philautus cf. leucorhinus) ಇಲ್ಲಿ ಮತ್ತೆ ಪತ್ತೆಯಾಗಿದೆ. ಇಲ್ಲಿರುವ ಅನೇಕ ಪ್ರಾಣಿಗಳು ಹಾಗೂ ಔಷಧೀಯ ಸಸ್ಯಗಳು ಈ ಪ್ರದೇಶವನ್ನು ಬಿಟ್ಟು ಜಗತ್ತಿನ ಬೇರಾವ ಬಾರದಲ್ಲೂ ಕಂಡುಬರುವುದಿಲ್ಲ. ಈ ಕಾಡು ಪ್ರದೇಶದ ಮಹತ್ವವನ್ನು ಸಾರುವ ಈ ಎಲ್ಲ ಅಂಶಗಳು ಐಐಎಸ್ಸಿ ವರದಿಯಲ್ಲಿ ಉಲ್ಲೇಖವಾಗಿದೆ.

‘ಪಶ್ಚಿಮ ಘಟ್ಟದ ಈ ಪರಿಸರದ ಸೂಕ್ಷತೆ ಹಾಗೂ ಅನನ್ಯತೆಯ ಅರಿವಿದ್ದೂ ಐಐಎಸ್ಸಿ ವಿಜ್ಞಾನಿಗಳು ಪರಿಹಾರ ಮಾರ್ಗಗಳನ್ನು ಕೈಗೊಳ್ಳುವ ಮೂಲಕ ಈ ಯೋಜನೆ ಜಾರಿಗೊಳಿಸಬಹುದು ಎಂದು ಹೇಗೆ ತಾನೆ ಶಿಫಾರಸು ಮಾಡಲು ಸಾಧ್ಯ’ ಎಂದು ವನ್ಯಜೀವಿ ಕಾರ್ಯಕರ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

29 ಪ್ರಭೇದಗಳ ಸಸ್ತನಿಗಳು ಇಲ್ಲಿವೆ

256 ಹಕ್ಕಿ ಪ್ರಭೇದಗಳು

8 ಸರೀಸೃಪ ಪ್ರಭೇದಗಳು

50 ಚಿಟ್ಟೆ ಪ್ರಭೇದಗಳು

33 ಉಭಯವಾಸಿ ಪ್ರಭೇದಗಳು

ಸರ್ಕಾರ ಮತ್ತೆ ತಪ್ಪು ಮಾಡಬಾರದು: ಗಿರಿಧರ

ಅರಣ್ಯ ಸಚಿವರ ಭರವಸೆಯ ಹೊರತಾಗಿಯೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು ಕಡಿತಗೊಳಿಸಿ ರಾಜ್ಯ ಸರ್ಕಾರವು ವನ್ಯಜೀವಿ ಸಂರಕ್ಷಣೆಗೆ ತದ್ವಿರುದ್ಧವಾದ ನಿರ್ಧಾರ ತೆಗೆದುಕೊಂಡಿತ್ತು. ಅಂಕೋಲಾ ರೈಲು ಮಾರ್ಗದ ಪ್ರಸ್ತಾವನೆ ವಿಷಯದಲ್ಲಿ ಸರ್ಕಾರ ಮತ್ತೆ ಈ ತಪ್ಪನ್ನು ಮಾಡಬಾರದು ಎಂದುವನ್ಯಜೀವಿ ಕಾರ್ಯಕರ್ತಗಿರಿಧರ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT