ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾವನ್ನು ಮಹಾಭಾರತ ಯುದ್ಧದಂತೆ ಎದುರಿಸಿ: ಬಿ.ಎಸ್.ಯಡಿಯೂರಪ್ಪ

Last Updated 26 ಮಾರ್ಚ್ 2020, 23:45 IST
ಅಕ್ಷರ ಗಾತ್ರ

ಬೆಂಗಳೂರು: ‘ದುಷ್ಟ ನಿಗ್ರಹ, ಶಿಷ್ಟ ಪರಿಪಾಲನೆಗೆ ಶ್ರೀಕೃಷ್ಣನ ಸಾರಥ್ಯದಲ್ಲಿ ಆ ಹದಿನೆಂಟು ದಿನಮಹಾಭಾರತಯುದ್ಧ ನಡೆಯಿತು. ಕೊರೊನಾ ವೈರಸ್ ವಿರುದ್ಧಮಹಾಭಾರತಯುದ್ಧದ ಮಾದರಿಯಲ್ಲೇ ಹೋರಾಟ ನಡೆಯಬೇಕಿದೆ, ಇದಕ್ಕೆ ರಾಜ್ಯದ ಜನರು ಸಂಪೂರ್ಣವಾಗಿ ಸಹಕರಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಕೊರೊನಾ ಸೋಂಕು ಮೂರನೇ ಹಂತ ಪ್ರವೇಶಿಸುವ ಲಕ್ಷಣ ತೋರಿಸಿರುವಂತೆಯೇ ಮುಖ್ಯಮಂತ್ರಿ ಅವರು ಗುರುವಾರ ಈ ಸಂದೇಶ ನೀಡಿದ್ದಾರೆ. ‘ಯುದ್ಧದ ಸಾರಥ್ಯವನ್ನು ಭಾರತದ ಪ್ರತಿಯೊಬ್ಬ ನಾಗರಿಕನೂ ವಹಿಸಬೇಕು. ಇದು ಪ್ರಧಾನಿ ನರೇಂದ್ರ ಮೋದಿಯವರು ಅಖಂಡ ಭಾರತದ 130 ಕೋಟಿ ಜನರನ್ನು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಜ್ಜುಗೊಳಿಸಿದ ರೀತಿ. ಸರ್ಕಾರಗಳಿಂದ ಮಾತ್ರ ಇದು ಸಾಧ್ಯವಿಲ್ಲ, ಜನರ ಸಹಕಾರದಿಂದ ಮಾತ್ರ ಇದು ಸಾಧ್ಯ’ ಎಂದು ಹೇಳಿದ್ದಾರೆ.

‘ರಾಜ್ಯದ ಮುಂದೆ ಎರಡು ಸವಾಲುಗಳಿವೆ. 21 ದಿನಗಳಲ್ಲಿ ಕೊರೊನಾ ರಕ್ತ ಬೀಜಾಸುರ ಸಂತತಿಯ ಹುಟ್ಟಡಗಿಸುವುದು ಹಾಗೂ ಈ ಅವಧಿಯಲ್ಲಿ ಯಾವುದೇ ಆಶ್ರಯವಿಲ್ಲದೆ ಬೀದಿಪಾಲಾಗುವ ಅಪಾಯದಲ್ಲಿರುವ ಲಕ್ಷಾಂತರ ಅಸಹಾಯಕರಲ್ಲಿ ಭದ್ರತೆಯ ಭರವಸೆ ಮೂಡಿಸುವುದು. ಈ ಸವಾಲುಗಳನ್ನು ಪಕ್ಷ, ಪಂಥ, ಜಾತಿ, ಧರ್ಮಗಳ ಗೋಡೆಗಳನ್ನು ದೂಳೀಪಟ ಮಾಡಿ ನಿಭಾಯಿಸುವ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಇಂತಹ ಮಾರಣಾಂತಿಕ ರೋಗ ಇದೇ ಮೊದಲೇನಲ್ಲ. 1855ರಲ್ಲಿಯೇಪ್ಲೇಗ್ (ಕಂಕುಳಲ್ಲಿ ಗಡ್ಡೆ ಕಟ್ಟುವುದು) ಎನ್ನುವ ಮಹಾಮಾರಿ ಮನುಕುಲವನ್ನು ವಿನಾಶದ ಅಂಚಿಗೆ ಕೊಂಡೊಯ್ದಿತ್ತು. ಅಂದು 1.2 ಕೋಟಿಗೂ ಹೆಚ್ಚು ಮಂದಿ ಸತ್ತಿದ್ದರು. ಭಾರತದಲ್ಲೇ ಸತ್ತವರ ಸಂಖ್ಯೆ 1 ಕೋಟಿ ಮಿಕ್ಕಿತ್ತು.

‘ಕೊರೊನಾ ರೋಗ ಕ್ಷಣಾರ್ಧದಲ್ಲಿ ಮನುಕುಲವನ್ನು ಮುಟ್ಟಿ ನುಂಗಿ ನೊಣೆಯುತ್ತದೆ. ಇದರ ನಿಯಂತ್ರಣಕ್ಕಾಗಿಯೇ ಪ್ರಧಾನಿ ಅವರು ಮೊದಲು ಜನತಾ ಕರ್ಫ್ಯೂ ಘೋಷಿಸಿದರು. ಇದೀಗ 21 ದಿನಗಳ ಲಾಕ್‌ಡೌನ್‌ ಘೋಷಿಸಿದ್ದಾರೆ. ಈ ಅವಧಿಯಲ್ಲಿ ಮನೆಯಿಂದ ಹೊರಬರುವ ಅತ್ಯುತ್ಸಾಹ ಬೇಡ. ಇದು ಜೀವನ್ಮರಣದ ಪ್ರಶ್ನೆ. ನೀವೊಬ್ಬರೇ ಅಲ್ಲ, ಏನೂ ತಪ್ಪು ಮಾಡದ ಸಾವಿರಾರು ಮುಗ್ಧರ ಬದುಕಿನ ಜೊತೆ ಚೆಲ್ಲಾಟವಾಡಬೇಡಿ. ಮನೆಯಲ್ಲಿಯೇ ಉಳಿಯಿರಿ’ ಎಂದು ಮುಖ್ಯಮಂತ್ರಿ ಅವರು ಮನವಿ ಮಾಡಿದ್ದಾರೆ.

ಹಲವು ಪರಿಹಾರ ಕ್ರಮ: ‘ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿಯೂ ಕೊರೊನಾ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದಿನದ 24 ಗಂಟೆ ವೈದ್ಯಕೀಯ ಸಿಬ್ಬಂದಿ ಸೋಂಕು ತಗುಲಿದವರ ಆರೈಕೆಯಲ್ಲಿ ತೊಡಗಿದ್ದಾರೆ. ವಾರ್‌ ರೂಂ ಸ್ಥಾಪಿಸಲಾಗಿದೆ. 21 ದಿನ ಜೀವನಾವಶ್ಯಕ ವಸ್ತುಗಳಿಗೆ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು. ಬೀದಿಬದಿಯ ವ್ಯಾಪಾರಿಗಳು, ಬಡ ಕಾರ್ಮಿಕರು, ನಿರಾಶ್ರಿತರ ಹಿತ ಕಾಯುವುದಕ್ಕೆ ಸರ್ಕಾರ ಬದ್ಧವಾಗಿದೆ’ ಎಂದು ಯಡಿಯೂರಪ್ಪ ಹೇಳಿದ್ದಾರೆ.

‘ಎರಡು ತಿಂಗಳ ಪಡಿತರ ಒಮ್ಮೆಲೇ ವಿತರಣೆ, ಉಜ್ವಲಾ ಯೋಜನೆಯಡಿ 8.33 ಕೋಟಿ ಕುಟುಂಬಗಳಿಗೆ ಉಚಿತ ಸಿಲಿಂಡರ್ ವ್ಯವಸ್ಥೆಯಂತಹ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯದ ಪ್ರಯತ್ನಕ್ಕೆ ಪೂರಕವಾಗಿ ಕೇಂದ್ರವೂ ನೆರವಿಗೆ ಬಂದಿರುವುದಕ್ಕಾಗಿ ನಾನು ಪ್ರಧಾನಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೊರೊನಾವನ್ನು ನಿುಯಂತ್ರಿಸುವ ಕಾರ್ಯದಲ್ಲಿ ಸರ್ಕಾರದ ಜತೆಗೆ ಜನರು, ಜನಪ್ರತಿನಿಧಿಗಳು ಕೈಜೋಡಿಸಬೇಕು. ಕೊರೊನಾ ವಿರುದ್ಧದ 21 ದಿನಗಳ ಸಮರದಲ್ಲಿ ನಾವು ಗೆಲುವು ಸಾಧಿಸಲೇ ಬೇಕು. ಇದು ನನ್ನ ಹೃದಯಪೂರ್ವಕ ವಿನಂತಿ’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT