ಅಗಲಿದ ನಾಯನಕ ನೆನೆದು ಕಂಬನಿ ಮಿಡಿದ ಅಭಿಮಾನಿಗಳು

ಬುಧವಾರ, ಏಪ್ರಿಲ್ 24, 2019
33 °C
ಕಷ್ಟ ಹೇಳಲು ಹೋದವರಿಗೆ ಊಟ– ಉಪಾಹಾರ ಜಿಲೇಬಿ ಕಾಯಂ

ಅಗಲಿದ ನಾಯನಕ ನೆನೆದು ಕಂಬನಿ ಮಿಡಿದ ಅಭಿಮಾನಿಗಳು

Published:
Updated:
Prajavani

ಹುಬ್ಬಳ್ಳಿ: ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದ ಸುದ್ದಿ ಗಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಅವರ ಸಾವಿರಾರು ಅಭಿಮಾನಿಗಳು ಲೈಫ್‌ ಲೈನ್ ಆಸ್ಪತ್ರೆ ಹಾಗೂ ನಗರದ ಜೆ.ಪಿ. ನಗರದಲ್ಲಿರುವ ಅವರ ಮನೆಯ ಎದುರು ಜಮಾಯಿಸಿದರು.

ಆಸ್ಪತ್ರೆಯಿಂದ ಮನೆಗೆ ಪಾರ್ಥಿವ ಶರೀರ ತರಲಾಗುತ್ತದೆ ಎಂದು ಗೊತ್ತಾದ ತಕ್ಷಣ ನೂರಾರು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಬರಲಾರಂಭಿಸಿದರು. ಬರುವಾಗಲೇ ಬಹುತೇಕರು ಕಣ್ಣೀರಾಗಿದ್ದರು. ಕೆಲವರು ಗದ್ಗಿತರಾಗಿ ಹೆಜ್ಜೆ ಹಾಕುತ್ತಿದ್ದರು. ‘ಅಂತಹ ನಾಯಕನನ್ನು ಇನ್ನೆಲ್ಲಿ ತರುವುದು’ ಎಂಬುದು ಪ್ರತಿಯೊಬ್ಬರ ಪ್ರಶ್ನೆಯಾಗಿತ್ತು.

ಪಾರ್ಥಿವ ಶರೀರವನ್ನು ಆಂಬುಲೆನ್ಸ್‌ನಿಂದ ಇಳಿಸುತ್ತಿರುವಾಗಲೇ ಜನರ ಆಕ್ರಂದನ ಮುಗಿಲು ಮುಟ್ಟಿತ್ತು. ಕೆಲವರು ಬಾಯಿ ಬಡಿದುಕೊಂಡು ತಮ್ಮ ದುಃಖ ಹೊರಹಾಕಿದರು. ಅಂತಿಮ ದರ್ಶನ ಪಡೆಯಲು ಮುಗಿಬಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ಪತಿಯ ಪಾರ್ಥಿವ ಶರೀರ ನೋಡಿದ ಪತ್ನಿ ಕುಸುಮಾ ಗಳಗಳನೆ ಅತ್ತರು. ಮಕ್ಕಳಾದ ಅಮರಶಿವ, ದೀಪಾ, ರೂಪಾ ಬಿಕ್ಕಿ ಬಿಕ್ಕಿ ಅತ್ತರು.

ಕೆಲವರು ಹೋಳಿ ಆಚರಿಸಿ ಬಣ್ಣದೊಂದಿಗೆ ಬಂದಿದ್ದರು. ಸುರಿಸಿದ ಕಣ್ಣೀರಿನಲ್ಲಿ ಬಣ್ಣಗಳೆಲ್ಲ ಕರಗಿ ಹೋದವು. ತುಂಬ ಒಳ್ಳೆಯ ವ್ಯಕ್ತಿ, ಬಹಳ ಸರಳವಾಗಿ ಬದುಕಿದ ರಾಜಕಾರಣಿ ಎಂದು ಜನರು ಅವರನ್ನು ಕೊಂಡಾಡಿದರು.

ಕುಂದಗೋಳ ಶಾಸಕರಾದರೂ, ಬಹುತೇಕ ಮಂದಿ ಅವರನ್ನು ಹುಬ್ಬಳ್ಳಿ ಕಚೇರಿಯಲ್ಲಿಯೇ ಭೇಟಿಯಾಗುತ್ತಿದ್ದರು. ಅಹವಾಲು ಸಲ್ಲಿಸಲು ಬರುವ ಜನರಿಗೆ ಊಟೋಪಚಾರ ಮಾಡದೆ ಉದಾಹರಣೆಯೇ ಇಲ್ಲ ಎಂದು ಜನರು ನೆನಪು ಮಾಡಿಕೊಳ್ಳುತ್ತಾರೆ.

‘ಕಚೇರಿಗೆ ಯಾವ ಸಮಯದಲ್ಲಿ ಹೋದರು ಉಪಾಹಾರ ನೀಡುತ್ತಿದ್ದರು. ಜಿಲೇಬಿಯನ್ನು ಸಹ ನೀಡುತ್ತಿದ್ದರು. ಕಷ್ಟ ಹೇಳಲು ಬಂದವರು ಹಸಿವನಿಂದ ಇರಬಾರದು ಎಂದು ಕಾಳಜಿ ಮಾಡುತ್ತಿದ್ದರು. ಸಿಹಿ ತಿಂಡಿ ನೀಡಿ ಕಳುಹಿಸುವುದು ಅವರ ವಿಶೇಷತೆಯಾಗಿತ್ತು’ ಎಂದು ಸಂಶಿಯ ಚನ್ನಬಸಪ್ಪ ಶಿರಹಟ್ಟಿ ಹೇಳಿದರು.

ಅಡುಗೆ ಮಾಡಲು ಒಬ್ಬರು ಭಟ್ಟರನ್ನು ನೇಮಕ ಮಾಡಿದ್ದರು. ಜನರ ಬಗ್ಗೆ ಅವರಿಗೆ ಎಷ್ಟು ಅಭಿಮಾನ ಪ್ರೀತಿ ಇತ್ತು ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ ಎಂದು ಜನರು ಸ್ಮರಿಸಿದರು.

ಕುಂದಗೋಳದಲ್ಲೂ ಜನಸಾಗರ: ಶಿವಳ್ಳಿ ಅವರ ಸಾವಿನ ಸುದ್ದಿ ತಿಳಿದ ತಕ್ಷಣ ಕುಂದಗೋಳದಲ್ಲಿ ನೀರವ ಮೌನ ಆವರಿಸಿತ್ತು. ಅಂತಿಮ ದರ್ಶನಕ್ಕೆ ಕುಂದಗೋಳದ ಜೆಎಸ್‌ಎಸ್ ವಿದ್ಯಾಪೀಠದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂಬ ಸುದ್ದಿ ಗೊತ್ತಾದ ನಂತರ, ಜನರು ತಂಡೋಪತಂಡವಾಗಿ ಸ್ಥಳಕ್ಕೆ ಬರಲಾರಂಭಿಸಿದರು. ಭಾರಿ ಸಂಖ್ಯೆಯಲ್ಲಿ ಜನರು ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದರು. ಬಹುತೇಕ ಜನರು ಅವರ ಸರಳತೆ, ಅಹಂಕಾರ ಇಲ್ಲದ ನಿಸ್ಪೃಹ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 6

  Sad
 • 0

  Frustrated
 • 2

  Angry

Comments:

0 comments

Write the first review for this !