ಮಂಗಳವಾರ, ಜನವರಿ 28, 2020
29 °C
ರಾಜ್ಯದಲ್ಲೂ ವೆಚ್ಚ ಕಡಿತ?

ಸಂ‍ಪನ್ಮೂಲ ಒದಗಿಸುವ ಇಲಾಖೆಗಳ ಜೋಳಿಗೆ ಬಹುತೇಕ ಖಾಲಿ: ಅಬಕಾರಿಯೇ ಆಶಾಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ತೆರಿಗೆ ಸಂಗ್ರಹ ಕುಸಿತದತ್ತ ಸಾಗಿರುವುದರಿಂದ ಕೇಂದ್ರ ಸರ್ಕಾರದ ಮಾದರಿಯಲ್ಲಿ ವೆಚ್ಚಕ್ಕೆ ಕಡಿವಾಣ ಹಾಕಿ, ಆರ್ಥಿಕ ಸ್ಥಿತಿಯನ್ನು ಸಮದೂಗಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ಶುರುವಾಗಿದೆ.

ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸರ್ಕಾರದ ಬೊಕ್ಕಸಕ್ಕೆ ಆದಾಯ ತರುವ ನಾಲ್ಕು ಪ್ರಮುಖ ಇಲಾಖೆಗಳ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳ ಸಭೆಯನ್ನು ಇದೇ 6 ರಂದು (ಸೋಮವಾರ) ಕರೆದಿದ್ದಾರೆ.

ನಿರೀಕ್ಷಿತ ಮಟ್ಟದಲ್ಲಿ ವರಮಾನ ಸಂಗ್ರಹವಾಗದ ಕಾರಣ ಕೇಂದ್ರ ಸರ್ಕಾರ ಮುಂದಿನ ಮೂರು ತಿಂಗಳ ವೆಚ್ಚದಲ್ಲಿ ಕಡಿತ ಮಾಡಲು ನಿರ್ಧರಿಸಿರುವ ಬೆನ್ನಲ್ಲೇ, ಈ ಸಭೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರವೂ ವೆಚ್ಚ ಕಡಿತದತ್ತ ಹೆಜ್ಜೆ ಇಡುವ ಸಾಧ್ಯತೆ ಇದೆ ಎಂಬ ಚರ್ಚೆ ಆರಂಭವಾಗಿದೆ.

ಸಂಪನ್ಮೂಲ ಕ್ರೋಡೀಕರಿಸುವ ನಾಲ್ಕು ಇಲಾಖೆಗಳ ಪೈಕಿ ಅಬಕಾರಿ ಬಿಟ್ಟು ಉಳಿದ ಇಲಾಖೆಗಳ ಸಂಗ್ರಹ ಮೊದಲ ಮೂರು ತ್ರೈಮಾಸಿಕ ಅವಧಿಯಲ್ಲಿ ನಿರೀಕ್ಷಿತ ಮಟ್ಟ ಮುಟ್ಟಿಲ್ಲ. ಮುಂದಿನ ಹಾಗೂ ಕೊನೆಯ ತ್ರೈಮಾಸಿಕದಲ್ಲಿ ಆದಾಯದ ಹರಿವು ಹೆಚ್ಚಿಸಲು ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಚರ್ಚಿಸುವುದು ಮುಖ್ಯಮಂತ್ರಿ ಅವರು ಕರೆದಿರುವ ಸಭೆಯ ಆದ್ಯತಾ ವಿಷಯ. ವೆಚ್ಚ ಕಡಿತದ ನಿರ್ದೇಶನವನ್ನೂ ಮುಖ್ಯಮಂತ್ರಿ ನೀಡುವ ಸಾಧ್ಯತೆ ಇದೆ ಎಂದು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

2019–20 ರ ಸಾಲಿನಲ್ಲಿ ನಿಗದಿ ಮಾಡಿದ್ದ ತೆರಿಗೆ ಸಂಗ್ರಹದಲ್ಲಿ ಅಬಕಾರಿ ಇಲಾಖೆ ಹೊರತುಪಡಿಸಿ, ಹೆಚ್ಚಿನ ಆದಾಯ ತರಬಲ್ಲ ಇತರ ಮೂರು ಪ್ರಮುಖ ಇಲಾಖೆಗಳಾದ ವಾಣಿಜ್ಯ, ಮೋಟಾರು ವಾಹನ, ಮುದ್ರಾಂಕ ಮತ್ತು ನೋಂದಣಿ ಇಲಾಖೆಗಳು ತೆರಿಗೆ ಸಂಗ್ರಹದ ನಿಗದಿತ ಗುರಿ ಮುಟ್ಟಿಲ್ಲ.

ಆರ್ಥಿಕ ಹಿಂಜರಿತದಿಂದಾಗಿ ಮೋಟಾರು ವಾಹನಗಳ ಖರೀದಿ ಮತ್ತು ಸ್ವತ್ತುಗಳ ನೋಂದಣಿಯಲ್ಲೂ ಭಾರಿ ಕುಸಿತವಾಗಿದೆ. ತೆರಿಗೆಯೇತರ ಬಾಬ್ತಿನಲ್ಲಿ ಆದಾಯ ಸ್ವಲ್ಪ ಮಟ್ಟಿಗೆ ಹೆಚ್ಚಾಗಿರುವುದರಿಂದ ಸರ್ಕಾರ ನೆಮ್ಮದಿಯ ಉಸಿರು ಬಿಡುವಂತಾಗಿದೆ. ಇದು 2018–19ರಲ್ಲಿ  ತೆರಿಗೆಯೇಯತರ ಆದಾಯ ಸಂಗ್ರಹ ಪ್ರಮಾಣ ಈ ಅವಧಿಯಲ್ಲಿ  ಶೇ 38.74 ಇತ್ತು, 2019–20 ರಲ್ಲಿ ಶೇ 44.99 ಆಗಿದೆ. ಆದರೆ, ನಿಗದಿತ ಗುರಿಯ ಅರ್ಧದಷ್ಟು ತಲುಪಲು ಸಾಧ್ಯವಾಗದೇ ಇರುವುದು ಗಮನಾರ್ಹ.

ಒಂದು ಕಡೆ ಆದಾಯದ ಸಂಗ್ರಹ ಕಡಿಮೆ ಆಗುತ್ತಿದ್ದು, ವೆಚ್ಚ ಹೆಚ್ಚಾಗುತ್ತಿದೆ. ಇದರ ಪರಿಣಾಮ ಇನ್ನಷ್ಟು ಸಾಲ ಮಾಡಬೇಕಾದ ಸ್ಥಿತಿ ಉದ್ಭವಿಸಿದೆ. ಕಳೆದ ಆಗಸ್ಟ್‌ನಲ್ಲಿ ಪ್ರವಾಹದಿಂದ ಆಗಿರುವ ನಷ್ಟದ ಪ್ರಮಾಣ ₹32,000 ಕೋಟಿಗೂ ಹೆಚ್ಚಾಗಿದೆ. ವಿವಿಧ ಯೋಜನೆಗಳಿಗೆ ಹಣ ಹೊಂದಿಸುವುದೂ ಕಷ್ಟವಾಗಿದೆ. 

ರಾಜ್ಯದ ಹಣಕಾಸು ಪರಿಸ್ಥಿತಿ ಚೆನ್ನಾಗಿಲ್ಲ. ಪ್ರವಾಹ ಪೀಡಿತ ಪ್ರದೇಶದಲ್ಲಿ ಮೂಲಸೌಕರ್ಯ ಕಲ್ಪಿಸಲು ಸಾಕಷ್ಟು ಹಣ ಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು