ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಿಪ್‌ಕಾರ್ಟ್‌ ಮೂಲಕ ಮಾವು ಮಾರಾಟಕ್ಕೆ ಚಾಲನೆ

ಬೆಳೆಗಾರರ ಬಳಿ ಬೆಲೆ ನಿಗದಿಯ ಅಧಿಕಾರ
Last Updated 26 ಮೇ 2020, 19:52 IST
ಅಕ್ಷರ ಗಾತ್ರ

ಬೆಂಗಳೂರು: ಫ್ಲಿಪ್‌ಕಾರ್ಟ್ ಸಹಯೋಗದಲ್ಲಿ ಆನ್‌ಲೈನ್ ಮೂಲಕ ಮಾವು ಮಾರಾಟ ಮಾಡುವ ಯೋಜನೆಗೆ ತೋಟಗಾರಿಕಾ ಸಚಿವ ನಾರಾಯಣ ಗೌಡ ಮಂಗಳವಾರ ಇಲ್ಲಿ ಚಾಲನೆ ನೀಡಿದರು.

‘ಇದೇ ಮೊದಲ ಬಾರಿಗೆ ಬೆಳೆಗಾರನೇ ಬೆಲೆ ನಿಗದಿ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ. ಇದೊಂದು ಪ್ರಾಯೋಗಿಕ ಪ್ರಯತ್ನ. ಇಲ್ಲಿ ಕಂಡುಬರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ಪ್ರಯತ್ನಿಸಲಾಗುವುದು’ ಎಂದು ಸಚಿವರು ತಿಳಿಸಿದರು.

ಮಾವು ಖರೀದಿ ಹೇಗೆ: ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರು ಮಾವು ಖರೀದಿ ಮಾಡಬಹುದು. ಆದರೆ ದರ ನಿಗದಿ ಮಾಡುವ ಹಕ್ಕು ಮಾವು ಬೆಳೆಗಾರನದ್ದೇ ಆಗಿದೆ‌. ರೈತ ಉತ್ಪಾದನಾ ಸಂಘಟನೆಯಲ್ಲಿ (ಎಫ್‌ಪಿಒ) ಮಾವು ಬೆಳೆಗಾರರು ಹೆಸರು ನೊಂದಾಯಿಸಿಕೊಳ್ಳಬೇಕು. ಗ್ರಾಹಕರು ಆನ್‌ಲೈನ್‌ನಲ್ಲಿ ಮಾವಿಗೆ ಆದೇಶ ನೀಡಿದಾಗ, ಸಂಬಂಧಿಸಿದ ತಳಿಯ ಮಾವನ್ನು ರೈತರಿಂದ ಪಡೆದು ಗ್ರಾಹಕರಿಗೆ ಫ್ಲಿಪ್‌ಕಾರ್ಟ್‌ ನೀಡುತ್ತದೆ.

‘ಸದ್ಯ ಫ್ಲಿಪ್‌ಕಾರ್ಟ್ ಮಾತ್ರ ಈ ಸೇವೆ ನೀಡಲು ಮುಂದಾಗಿದೆ‌. ಕೆಲ ದಿನಗಳ ಬಳಿಕ ಇತರ ಆನ್‌ಲೈನ್ ಮಾರಾಟ ಸಂಸ್ಥೆಗಳ ಮೂಲಕವೂ ಈ ಕಾರ್ಯ ಆರಂಭವಾಗಲಿದೆ. ರೈತರಿಗೆ ಅನುಕೂಲ ಆಗುವಂತೆ ಮಾರುಕಟ್ಟೆ ನಿರ್ಮಿಸುವ ಬಗ್ಗೆಯೂ ಚಿಂತನೆ ಇದೆ. ಕೃಷಿ ಉತ್ಪನ್ನ ಹಾಳಾಗದಂತೆ ನೋಡಿಕೊಳ್ಳಲು ಶೈತ್ಯಾಗಾರಗಳ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ’ ಎಂದು ಸಚಿವರು ಹೇಳಿದರು.

ಫ್ಲಿಪ್‌ಕಾರ್ಟ್ ಸಂಸ್ಥೆಯ ಮುಖ್ಯ ಕಾರ್ಪೊರೇಟ್‌ ವ್ಯವಹಾರಗಳ ಅಧಿಕಾರಿ ರಜನೀಶ್‌ ಕುಮಾರ್ ಮಾತನಾಡಿ, ರೈತರಿಗೆ ನೆರವಾಗುವ ಈ ಸೇವೆಯನ್ನು ಮಾಡಲು ಸಂಸ್ಥೆ ಉತ್ಸುಕವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT