ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ಆತಂಕದಲ್ಲಿ ನದಿ ದಂಡೆ ಗ್ರಾಮಸ್ಥರು

ಅಥಣಿ ತಾಲ್ಲೂಕಿನಲ್ಲಿ ಪ್ರವಾಹದ ಭೀತಿ
Last Updated 18 ಜೂನ್ 2020, 19:30 IST
ಅಕ್ಷರ ಗಾತ್ರ

ಅಥಣಿ: ತಾಲ್ಲೂಕಿನ ಕೃಷ್ಣಾ ನದಿ ದಂಡೆಯ ಗ್ರಾಮಗಳ ಜನರು ಪ್ರವಾಹದ ಆತಂಕಕ್ಕೆ ಒಳಗಾಗಿದ್ದಾರೆ.

ಸಮೀಪದ ಹಿಪ್ಪರಗಿ ಜಲಾಶಯದ ಒಟ್ಟು ಎತ್ತರ 524.87 ಅಡಿಗಳಿದ್ದು, ಗುರುವಾರದವರೆಗೆ 521.70 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಜಲಾಶಯಕ್ಕೆ 8ರಿಂದ 10ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಒಳಹರಿವಿನಷ್ಟೆ ನೀರನ್ನು 2 ಗೇಟ್‌ಗಳ ಮೂಲಕ ಹಿಪ್ಪರಗಿ ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ನೆರೆಯ ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಮಳೆ ಪ್ರಾರಂಭ ಆಗಿರುವುದರಿಂದಾಗಿ ಒಂದು ವಾರದಿಂದ ಇಲ್ಲಿಗೆ ನೀರು ಹರಿದು ಬರುತ್ತಿದೆ. ಇದು, ಇಲ್ಲಿನವರ ಭೀತಿಗೆ ಕಾರಣವಾಗಿದೆ. ಇವರು ಹೋದ ವರ್ಷದ ಉಂಟಾಗಿದ್ದ ನೆರೆಯಿಂದ ನೊಂದಿದ್ದರು.

ತಾಲ್ಲೂಕಿನ ಕೃಷ್ಣಾ ನದಿ ದಂಡೆಯ 24ಕ್ಕೂ ಹೆಚ್ಚು ಗ್ರಾಮಸ್ಥರು ಕಳೆದ ವರ್ಷ ಪ್ರವಾಹದಿಂದ ಬೆಳೆ, ಮನೆ ಕಳೆದುಕೊಂಡು ನಲುಗಿ ಹೋಗಿದ್ದರು. ಈ ವರ್ಷ ರೈತರು ಮತ್ತೆ ನದಿ ದಂಡೆಯ ತಮ್ಮ ಹೊಲ–‌ಗದ್ದೆಗಳಲ್ಲಿ ಸಾಲ ಪಡೆದು ಹೊಸದಾಗಿ ಕಬ್ಬು ನಾಟಿ ಮಾಡಿದ್ದಾರೆ. ಕಳೆದುಕೊಂಡ ಜಾಗದಲ್ಲಿಯೇ ಹುಡುಕುವ ನಿರೀಕ್ಷೆ ಅವರದಾಗಿತ್ತು. ಕಬ್ಬು ಉತ್ತಮವಾಗಿ ಬೆಳೆದಿದೆ. ಆದರೆ, ಕೈಗೆ ಬಂದ ತುತ್ತು ಈ ವರ್ಷವೂ ಬಾಯಿಗೆ ಬರುತ್ತದೆಯೋ, ಇಲ್ಲವೋ ಎನ್ನುವುದು ಅವರ ಚಿಂತೆಯಾಗಿದೆ.

‘ಮಹಾರಾಷ್ಟ್ರದಿಂದ ಈ ವರ್ಷವೂ ಬೇಕಾಬಿಟ್ಟಿಯಾಗಿ ನೀರು ಹರಿಬಿಟ್ಟರೆ ನದಿ ತೀರದ ನಮ್ಮ ಬದುಕು ಅಲ್ಲೋಲ ಕಲ್ಲೋಲ ಆಗುವುದರಲ್ಲಿ ಸಂದೇಶವಿಲ್ಲ’ ಎನ್ನುತ್ತಾರೆ ಅವರು.

‘ಮುಂಜಾಗ್ರತಾ ಕ್ರಮವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸರ್ವಪಕ್ಷಗಳ ನಿಯೋಗದೊಂದಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಭೇಟಿಯಾಗಿ ಚರ್ಚಿಸಬೇಕು. ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ವಿಷಯದಲ್ಲಿ ಎಚ್ಚರ ವಹಿಸಬೇಕು ಎಂದು ಕೋರಬೇಕು’ ಎಂಬ ಆಗ್ರಹ ಇಲ್ಲಿನವರದಾಗಿದೆ.

‘ಪ್ರವಾಹ ಎದುರಾದರೆ ಸಾವಿರಾರು ಜನರು ನಿಯೋಜಿತ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದರೆ, ಕೊರೊನಾದಿಂದ ಪಾರಾಗಲು ಅಂತರ ಕಾಯ್ದುಕೊಳ್ಳುವುದು ಸಾಧ್ಯವೇ’ ಎಂಬ ಪ್ರಶ್ನೆಯೂ ಅವರದಾಗಿದೆ.

ಹೋದ ವರ್ಷ ಪ್ರವಾಹದಿಂದ ಹಾನಿಯಾದ ಜನವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದೂವೆರಗೂ ದುರಸ್ತಿಯಾಗಿಲ್ಲ. ರಸ್ತೆಗಳು, ಮನೆಗಳು, ಇತರ ಕಟ್ಟಡಗಳು ಈಗಲೂ ಸುಸ್ಥಿತಿಗೆ ಬಂದಿಲ್ಲ. ಹಲವರಿಗೆ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಹೀಗಿರುವಾಗ ಮತ್ತೊಂದು ನೋವು ಎದುರಾಗಿದೆ.

ಝೀರೊ ಪಾಯಿಂಟ್‌ ಪುನರ್ವಸತಿ ಕೇಂದ್ರಕ್ಕೆ ನಂದೇಶ್ವರ, ಮಹಿಷವಾಡಗಿ, ಜನವಾಡ ಗ್ರಾಮಗಳು ಸ್ಥಳಾಂತರವಾಗಬೇಕಿದೆ. ಆದರೆ, ಅಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿ ಕೆಲಸ ಕುಂಟುತ್ತಿದೆ. ರಡ್ಡೇರಹಟ್ಟಿ ಸಮೀಪದ ಪುನರ್ವಸತಿ ಕೇಂದ್ರ ಸಿದ್ಧವಾಗಿದ್ದರೂ ಅಲ್ಲಿಗೆ ಸ್ಥಳಾಂತರ ಆಗಬೇಕಿದ್ದ ದೊಡವಾಡ, ನಾಗನೂರ ಪಿ.ಕೆ., ಅವರಖೋಡ ಗ್ರಾಮಗಳು ಈವರೆಗೂ ಸ್ಥಳಾಂತರವಾಗಿಲ್ಲ. ಸತ್ತಿ ಹಾಗೂ ಹಲ್ಯಾಳ ಗ್ರಾಮಗಳು ಸಂಪೂರ್ಣ ಮುಳಗಡೆ ಗ್ರಾಮಗಳೆಂದು ಘೋಷಿಸಬೇಕೆಂಬ ಗ್ರಾಮಸ್ಥರ ಬೇಡಿಕೆ ಹಾಗೆಯೇ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT