ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಪರಿಹಾರ ಕೇಂದ್ರ ತೊರೆಯಲು ಸಂತ್ರಸ್ತರಿಗೆ ಒತ್ತಡ!

ಆಶ್ರಯ ಪಡೆದಿರುವ 150ಕ್ಕೂ ಹೆಚ್ಚು ಕುಟುಂಬಗಳಿಗೆ ಎನ್‌ಡಿಆರ್‌ಎಫ್‌ ಎಚ್ಚರಿಕೆ
Last Updated 28 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಗರಿಷ್ಠ 60 ದಿನಗಳವರೆಗೆ ಮಾತ್ರ ನೆರವು (ಊಟ– ವಸತಿ) ನೀಡಬೇಕೆನ್ನುವ ನಿಯಮ ಎನ್‌ಡಿಆರ್‌ಎಫ್‌ನಲ್ಲಿದ್ದು, ತಕ್ಷಣ ಪರಿಹಾರ ಕೇಂದ್ರಗಳನ್ನು ತೊರೆಯುವಂತೆ ಸಂತ್ರಸ್ತರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿರುವ ವಿಷಯ ಬೆಳಕಿಗೆ ಬಂದಿದೆ.

ರಾಮದುರ್ಗ ಪುರಸಭೆಯ ಸಾಂಸ್ಕೃತಿಕ ಭವನದ ಪರಿಹಾರ ಕೇಂದ್ರದಲ್ಲಿರುವ 75ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ಆತಂಕದ ಕ್ಷಣಗಳನ್ನು ಎಣಿಸುತ್ತಿದ್ದಾರೆ. ಇಂತಹದ್ದೇ ಸ್ಥಿತಿ ಗೋಕಾಕದ ಎರಡು ಕೇಂದ್ರಗಳಲ್ಲಿಯೂ ಇದೆ. ಸುಮಾರು 80ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸವಾಗಿವೆ.

ಆಗಸ್ಟ್‌ ತಿಂಗಳಿನಲ್ಲಿ ಮಲಪ್ರಭಾ ನದಿ ಉಕ್ಕಿ ಹರಿದ ಪರಿಣಾಮ ರಾಮದುರ್ಗದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು. ಇವುಗಳಲ್ಲಿ ಕಿಲಬನೂರು ಕೂಡ ಒಂದಾಗಿತ್ತು. ಈ ಪ್ರದೇಶದ ಸುಮಾರು 250 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ನೆರೆ ಇಳಿದ ಮೇಲೆ, ಸದೃಢ ಮನೆಗಳಿರುವ ಸದಸ್ಯರು ವಾಪಸ್‌ ತೆರಳಿದರು. ಇನ್ನುಳಿದವರು ಕೇಂದ್ರದಲ್ಲಿಯೇ ಮುಂದುವರಿದರು.

ಶೆಡ್‌ ನಿರ್ಮಾಣವಾಗಿಲ್ಲ: ‘ನಮ್ಮ ಮನೆ ಸಂಪೂರ್ಣವಾಗಿ ನೆರೆಯಲ್ಲಿ ಮುಳುಗಿಹೋಗಿತ್ತು. ಗೋಡೆಗಳೆಲ್ಲ ಶಿಥಿಲಗೊಂಡಿದ್ದು, ಯಾವ ಕ್ಷಣದಲ್ಲಿ ಕುಸಿಯುತ್ತದೆಯೋ ಹೇಳಲಿಕ್ಕಾಗದು. ಇನ್ನೊಂದೆಡೆ, ಇದುವರೆಗೆ ನಮಗೆ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಟ್ಟಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವಿನ್ನೂ ಕೇಂದ್ರದಲ್ಲಿಯೇ ಇದ್ದೇವೆ’ ಎಂದು ಪಾಂಡಪ್ಪ ಚೌಡಕಿ ಹೇಳಿದರು.

‘ಸರ್ಕಾರ ಘೋಷಿಸಿದ್ದ ತಾತ್ಕಾಲಿಕ ಪರಿಹಾರ ₹ 10,000 ಸಿಕ್ಕಿತ್ತು. ಆರೋಗ್ಯ ಚಿಕಿತ್ಸೆ ಹಾಗೂ ವಸ್ತುಗಳ ಖರೀದಿಗಾಗಿ ಈ ಹಣ ಖರ್ಚಾಗಿ ಹೋಗಿದೆ. ಮನೆ ಹಾನಿ ಪರಿಹಾರ ಸಿಕ್ಕಿಲ್ಲ. ತಾತ್ಕಾಲಿಕ ಶೆಡ್‌ ಕೂಡ ನಿರ್ಮಾಣವಾಗಿಲ್ಲ. ಈಗ 2 ದಿನಗಳಲ್ಲಿ ಪರಿಹಾರ ಕೇಂದ್ರ ಬಿಟ್ಟು ಹೋಗಿ ಎಂದರೆ ನಾವು ಎಲ್ಲಿಗೆ ಹೋಗಬೇಕು?’ ಎಂದು ಅಳಲು ತೋಡಿಕೊಂಡರು.

ಮತ್ತೊಬ್ಬ ಸಂತ್ರಸ್ತೆ ಯಲ್ಲವ್ವ ದೊಡಮನಿ ಮಾತನಾಡಿ, ‘ಊಟ– ತಿಂಡಿಗೆ ತೊಂದರೆ ಇಲ್ಲ. ಆದರೆ, ಇರಲು ಮನೆ ಇಲ್ಲ. ಮನೆ ನಿರ್ಮಿಸಿಕೊಡುವವರಿಗೆ ನಮಗೆ ಇಲ್ಲಿಯೇ ಇರಲು ಅವಕಾಶ ಮಾಡಿಕೊಡಬೇಕು’ ಎಂದು ಕೋರಿಕೊಂಡರು.

ತಗಡು, ಬಿದಿರು ನೀಡಿದ್ದೇವೆ:‘ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಗರಿಷ್ಠ 60 ದಿನಗಳವರೆಗೆ ಮಾತ್ರ ಸಂತ್ರಸ್ತರಿಗೆ ಪರಿಹಾರ ನೀಡಲು ಸಾಧ್ಯವಿದೆ. ಈ ಗಡುವು ಸಮೀಪಿಸುತ್ತಿದ್ದು, ಅಷ್ಟರೊಳಗೆ ಶೆಡ್‌ಗಳನ್ನು ನಿರ್ಮಿಸಿಕೊಳ್ಳುವಂತೆ ಸಂತ್ರಸ್ತರಿಗೆ ಸೂಚಿಸಿದ್ದೇವೆ. ಶೀಟ್‌, ತಾಡಪತ್ರೆ ಹಾಗೂ ಬಿದಿರುಗಳನ್ನು ಪೂರೈಸಿದ್ದೇವೆ’ ಎಂದು ತಹಶೀಲ್ದಾರ್‌ ಬಸನಗೌಡ ಕೋಟೂರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಈಗ ಪ್ರವಾಹದ ನೀರು ಇಳಿದುಹೋಗಿದೆ. ಸಂತ್ರಸ್ತರು ತಮ್ಮ ಜಾಗಗಳಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡು ಅಥವಾ ತಮ್ಮ ಮನೆಯನ್ನು ದುರಸ್ತಿ ಪಡಿಸಿಕೊಂಡು ಇರಬಹುದು. ಸಮರ್ಪಕ ದಾಖಲೆ ಸಲ್ಲಿಸಿದವರಿಗೆ ಮನೆ ಹಾನಿ ಪರಿಹಾರ ನೀಡಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT