ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.17ರಿಂದ 26ರವರೆಗೆ ಫಲಪುಷ್ಪ ಪ್ರದರ್ಶನ: ಸ್ವಾಮಿ ವಿವೇಕಾನಂದರಿಗೆ ಪುಷ್ಪನಮನ

ಲಾಲ್‌ಬಾಗ್‌: ಗಣರಾಜ್ಯೋತ್ಸವ ಪ್ರಯುಕ್ತ ಜ.17ರಿಂದ 26ರವರೆಗೆ ಫಲಪುಷ್ಪ ಪ್ರದರ್ಶನ
Last Updated 10 ಡಿಸೆಂಬರ್ 2019, 19:20 IST
ಅಕ್ಷರ ಗಾತ್ರ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ 2020ರ ಜ.17ರಿಂದ 26ರವರೆಗೆ ಏರ್ಪಡಿಸುವ ಫಲ–ಪುಷ್ಪ–ಪ್ರದರ್ಶನ ವಿವೇಕಾನಂದರ ಜೀವನ ಚಿತ್ರಣ ಹಾಗೂ ಚಿಂತನೆಗಳನ್ನು ಮೆಲುಕು ಹಾಕಲು ವೇದಿಕೆ ಕಲ್ಪಿಸಲಿದೆ.

ಜ.12 ವಿವೇಕಾನಂದರ ಜನ್ಮದಿನ. ಅಮೆರಿಕದ ಷಿಕಾಗೊದಲ್ಲಿ ನಡೆದಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಭಾಷಣ ಮಾಡಿದ್ದ 126ನೇ ವರ್ಷವಿದು. ಈ ಐತಿಹಾಸಿಕ ಘಟನೆಯ ಸ್ಮರಣಾರ್ಥ ವಿವೇಕಾನಂದರಿಗೆ ಗೌರವ ಸಲ್ಲಿಕೆ ಆಗಲಿದೆ.

ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘವು, ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಬಾರಿಯ ಪ್ರದರ್ಶನಕ್ಕೆ ಸ್ವಾಮಿ ವಿವೇಕಾನಂದರ ವಿಷಯವನ್ನು ಅಂತಿಮಗೊಳಿಸಿದೆ.

2019ರ ಆಗಸ್ಟ್‌ನಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಫಲ–ಪುಷ್ಪ ಪ್ರದರ್ಶನದಲ್ಲೇ ವಿವೇಕಾನಂದರಿಗೆ ಪುಷ್ಪನಮನ ಸಲ್ಲಿಸಲು ತೋಟಗಾರಿಕಾ ಇಲಾಖೆ ಮುಂದಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಸರ್ಕಾರದ ಆದೇಶದ ಮೇರೆಗೆ ವಿವೇಕಾನಂದರ ಬದಲು ಜಯಚಾಮರಾಜ ಒಡೆಯರ್‌ ವಿಷಯವನ್ನು ಅಂತಿಮಗೊಳಿಸಲಾಗಿತ್ತು.

‘ವಿವೇಕಾನಂದರ ಕುರಿತು ಬೆಂಗಳೂರಿನ ರಾಮಕೃಷ್ಣ ಮಠ‌ದಿಂದ ಹೆಚ್ಚಿನ ಮಾಹಿತಿ ಪಡೆಯಲಾಗಿದೆ. ಫಲ–ಪುಷ್ಪ ಪ್ರದರ್ಶನದಲ್ಲಿ ಅವರ ಕುರಿತಾದ ಯಾವ ವಿಷಯಗಳನ್ನು ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯಲು ಮೈಸೂರಿನಲ್ಲಿರುವ ರಾಮಕೃಷ್ಣ ಮಠಕ್ಕೆ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಲಿದೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕನ್ಯಾಕುಮಾರಿಯಲ್ಲಿರುವ ವಿವೇಕಾನಂದರ ಸ್ಮಾರಕ ಹಾಗೂ ಷಿಕಾಗೊ ಭಾಷಣ ಕುರಿತಾದ ಪುಷ್ಪ ಪ್ರತಿಮೆಗಳನ್ನು ಪ್ರದರ್ಶನಕ್ಕೆ ಅಂತಿಮಗೊಳಿಸಲಾಗಿದೆ. ರಾಮಕೃಷ್ಣ ಮಠದಿಂದ ಹೆಚ್ಚಿನ ಮಾಹಿತಿ ಪಡೆದು ಮುಂದಿನ ಸಿದ್ಧತೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.‌

ಮುಖ್ಯಾಂಶಗಳು

ಕನ್ಯಾಕುಮಾರಿಯ ವಿವೇಕಾನಂದ ಬಂಡೆಯ ಪ್ರತಿಕೃತಿ ರಚನೆ

ಪುಷ್ಪಗಳಲ್ಲಿ ಅನಾವರಣಗೊಳ್ಳಲಿದೆ ಷಿಕಾಗೊ ಭಾಷಣದ ಸಂದರ್ಭ

ಪ್ರದರ್ಶನಕ್ಕೆ ರಾಮಕೃಷ್ಣ ಮಠದ ನೆರವು

***

ಜನವರಿಯಲ್ಲಿ ವಿವೇಕಾನಂದರ ಜನ್ಮ ದಿನವಿದೆ. ಅಮೆರಿಕದ ಷಿಕಾಗೊ ಭಾಷಣಕ್ಕೆ 126 ವರ್ಷ ಸಂದ ಗೌರವಾರ್ಥ ವಿವೇಕಾನಂದರಿಗೆ ಪುಷ್ಪನಮನ ಸಲ್ಲಿಸಲು ನಿರ್ಧರಿಸಿದ್ದೇವೆ.
–ಚಂದ್ರಶೇಖರ್‌, ಮೈಸೂರು ಉದ್ಯಾನ ಕಲಾ ಸಂಘದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT