ಶನಿವಾರ, ಜೂನ್ 6, 2020
27 °C

2 ಸಾವಿರ ಕಾಳ್ಗಿಚ್ಚು ಪ್ರಕರಣ: ಲಾಕ್‌ಡೌನ್‌ ಅವಧಿಯಲ್ಲಿ ಸಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ವೈರಸ್‌ ನಿಯಂತ್ರಿಸುವ ಸಲುವಾಗಿ ರಾಜ್ಯದಲ್ಲಿ 9 ದಿನಗಳಿಂದ ಲಾಕ್‌ಡೌನ್‌ ಪರಿಸ್ಥಿತಿ ಇದ್ದು, ಇದೇ ಅವಧಿಯಲ್ಲಿ 2 ಸಾವಿರ ಕಡೆಗಳಲ್ಲಿ ಕಾಳ್ಗಿಚ್ಚು ಪ್ರಕರಣಗಳೂ ನಡೆದಿವೆ!

ಲಾಕ್‌ಡೌನ್‌ ಅವಧಿಯಲ್ಲಿ ವಾಹನ ಸಂಚಾರ ಕಡಿಮೆ ಇದ್ದು, ಇದನ್ನೇ ಬಳಸಿಕೊಳ್ಳುವ ದುಷ್ಕರ್ಮಿಗಳು ಕಾಡಿಗೆ ಬೆಂಕಿ ಹಚ್ಚುತ್ತಿದ್ದಾರೆ, ಬಳಿಕ ಕಾಡನ್ನು ಒತ್ತುವರಿ ಮಾಡಿಕೊಳ್ಳುತ್ತಾರೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಮಾರ್ಚ್‌ 21ರಿಂದ 30ರ ಅವಧಿಯಲ್ಲಿ ರಾಜ್ಯದ 1,777 ಸ್ಥಳಗಳಲ್ಲಿ ಕಾಳ್ಗಿಚ್ಚು ಕಾಣಿಸಿದ್ದರೆ, ಬುಧವಾರ ಒಂದೇ ದಿನ 300 ಸ್ಥಳಗಳಲ್ಲಿ ಕಾಳ್ಗಿಚ್ಚು ಕಾಣಿಸಿದೆ. ಬಹುತೇಕ ನಗರಗಳ ಅಂಚಿನಲ್ಲಿರುವ ಕಾಡುಗಳಲ್ಲೇ ಬೆಂಕಿ ಕಾಣಿಸಿರುವುದು ವಿಶೇಷವಾಗಿದ್ದು, ಕಾಡನ್ನು ಒತ್ತುವರಿ ಮಾಡುವ ಸಂಚು ಇದರ ಹಿಂದೆ ಇರುವುದು ಸ್ಪಷ್ಟ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಬಂಡೀಪುರ ಪ್ರದೇಶದಲ್ಲಿ ಕಾಳ್ಗಿಚ್ಚಿಗೆ 12 ಸಾವಿರ ಎಕರೆ ಅರಣ್ಯ ಪ್ರದೇಶ ನಾಶವಾಗಿತ್ತು. ಇಲಾಖೆಯ ಹಲವು ಲೋಪದೋಷಗಳು ಇದಕ್ಕೆ ಕಾರಣ ಎಂದು ಬಳಿಕ ಗೊತ್ತಾಗಿತ್ತು. ಈ ಬಾರಿಯೂ ಅಂತಹದಕ್ಕೆ ಅವಕಾಶ ನೀಡಬಾರದು, ವಾಯುಪಡೆಯ ನೆರವನ್ನೂ ಕೇಳಲಾಗಿದೆ ಎಂದು ಅರಣ್ಯ ಸಚಿವ ಆನಂದ ಸಿಂಗ್‌ ಹೇಳುತ್ತಿರುವಂತೆಯೇ 9 ದಿನಗಳಲ್ಲಿ 2 ಸಾವಿರಕ್ಕೂ ಅಧಿಕ ಕಾಳ್ಗಿಚ್ಚು ಪ್ರಕರಣಗಳು ನಡೆದಿವೆ.

ಒತ್ತುವರಿಗೆ ಬಿಡುವುದಿಲ್ಲ: ‘ಅರಣ್ಯಕ್ಕೆ ಬೆಂಕಿ ಹಚ್ಚಿ ಒತ್ತುವರಿ ಮಾಡಿಕೊಳ್ಳುವ ದುಷ್ಕರ್ಮಿಗಳ ಕನಸು ಈಡೇರದು, ಏಕೆಂದರೆ ಉಪಗ್ರಹ ಬಳಸಿ ಜಿಪಿಎಸ್‌ ಸಹಾಯದಿಂದ ಕಾಡು ನಾಶವಾದ ದೃಶ್ಯವನ್ನು ನೋಡುವಂತಹ ತಂತ್ರಜ್ಞಾನ ಬಂದಿದೆ, ಇದನ್ನು ಸಮರ್ಥವಾಗಿ ಬಳಸಲಾಗುತ್ತದೆ’ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು