ಶನಿವಾರ, ಮೇ 15, 2021
29 °C
ಪಶ್ಚಿಮಘಟ್ಟ ಕಬಳಿಸುತ್ತಿರುವ ಆಲ್ಸ್‌ಟೊನಿಯಾ ಮಾಕ್ರೋಫಿಲ್ಲಾ, ಫೈನಸ್ ಸಸ್ಯಸಂಕುಲ

ಮಲೆನಾಡಲ್ಲಿ ವಿದೇಶಿ ಸಸ್ಯಗಳ ಹಾವಳಿ!

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಪಶ್ಚಿಮಘಟ್ಟದ ಸಹ್ಯಾದ್ರಿ ಪರ್ವತ ಶ್ರೇಣಿಯ ಮಲೆನಾಡ ದಟ್ಟ ಕಾನನವನ್ನು ವಿದೇಶಿ ಸಸ್ಯಗಳು ಸದ್ದಿಲ್ಲದೆ ಅತಿಕ್ರಮಿಸುತ್ತಿವೆ.

ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕು ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಮೂರು ದಶಕಗಳ ಹಿಂದೆ ನೆಟ್ಟ ವಿದೇಶಿ ಸಸ್ಯ ತಳಿ ಆಲ್ಸ್‌ಟೊನಿಯಾ ಮಾಕ್ರೋಫಿಲ್ಲಾ, ಪೈನಸ್ ಹಾಗೂ ಅಕೆಶಿಯಾ ಇಲ್ಲಿನ 10 ಸಾವಿರ ಹೆಕ್ಟೇರ್ ಕಾಡು ನೆಲವನ್ನು ಕಬಳಿಸಿವೆ.

ಸ್ವಾತಂತ್ರ್ಯ ಪೂರ್ವದಲ್ಲಿ (1937) ಆರಂಭವಾಗಿದ್ದ ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್‌ (ಎಂಪಿಎಂ)ಗೆ ಮರದ ತಿರುಳು ಪೂರೈಸಲು ರಾಜ್ಯ ಸರ್ಕಾರ 30 ಸಾವಿರ ಹೆಕ್ಟೇರ್ ಅರಣ್ಯ ಭೂಮಿ ಮಂಜೂರು ಮಾಡಿತ್ತು. ಪ್ರಸ್ತುತ 22,500 ಹೆಕ್ಟೇರ್ ಉಳಿದುಕೊಂಡಿದೆ. ಸರ್ಕಾರ ಹಾಗೂ ಎಂಪಿಎಂ ಒಪ್ಪಂದದ ಪ್ರಕಾರ ಪ್ರತಿ ಬಾರಿ ಮರಗಳನ್ನು ಕಟಾವು ಮಾಡಿದಾಗಲೂ ಅಲ್ಲಿ ಮತ್ತೆ ನೆಡುತೋಪು ಬೆಳೆಸಬೇಕು. ಹೀಗೆ ಕಟಾವು ಮಾಡಿದಾಗಲೆಲ್ಲ ಬೇರೆ ಬೇರೆ ಜಾತಿಯ ಸಸ್ಯಸಂಕುಲ ಬೆಳೆಸುತ್ತಾ ಬರುತ್ತಿದ್ದು, ಕೆಲವು ದಶಕಗಳ ಹಿಂದೆ ವಿದೇಶಿ ಸಸ್ಯಗಳೂ ನೆಲೆ ಕಂಡುಕೊಂಡಿವೆ.

ಇಂಡೊನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಥಾಯ್ಲೆಂಡ್, ವಿಯೆಟ್ನಾಂನಲ್ಲಿ ಹೆಚ್ಚಾಗಿ ಕಂಡುಬರುವ ಆಲ್ಸ್‌ಟೊನಿಯಾ ವರ್ಷದ ಹಿಂದೆ ಹಲವು ಕಡೆ ಕಟಾವು ಮಾಡಿದರೂ, ಬೀಜಗಳಿಂದ ಮತ್ತೆ ಪುನರುತ್ಪತ್ತಿ ಆಗುತ್ತಿದೆ. ಸುಮಾರು 30 ಮೀಟರ್ ಎತ್ತರಕ್ಕೆ ಇವು ಬೆಳೆಯುತ್ತವೆ. ಹೆಚ್ಚು ಮಳೆ ಸುರಿಯುವ ಪ್ರದೇಶದಲ್ಲಿ ಆಕ್ರಮಣಕಾರಿ ಪುನರುತ್ಪತ್ತಿ ತೋರುತ್ತವೆ. ಇವು ಸ್ಥಳೀಯ ನೈಸರ್ಗಿಕ ಸಸ್ಯಗಳ ಬೆಳವಣಿಗೆಗೆ ಕಂಟಕ. ಕರಾವಳಿಯ ಕಾಂಡ್ಲ ಗಿಡಗಳ ನೆಲೆಯಿಂದ ಆರಂಭಿಸಿ ಸಮುದ್ರಮಟ್ಟದಿಂದ 2,900 ಮೀಟರ್ ಎತ್ತರದ ಪ್ರದೇಶಗಳಲ್ಲೂ ಬೆಳೆಯುವ ದೈತ್ಯ ಕುಲ. ಎಲೆ, ಕಾಂಡ ಕತ್ತರಿಸಿದಾಗ ಬಿಳಿ ಹಾಲಿನಂತಹ ದ್ರವ ಸ್ರವಿಸುತ್ತದೆ.

ವಿದೇಶಿ ಸಸ್ಯವಾದ ಕಾರಣ ಮೂಲ ನೆಲೆಯಲ್ಲಿರುವ ಕೀಟ, ವನ್ಯಜೀವಿಗಳ ಅವಲಂಬನೆ ಇಲ್ಲಿಲ್ಲ. ಸಾಗರದ ಈ ನೆಡುತೋಪಿನಲ್ಲಿ ಯಾವುದೇ ಕೀಟ, ದನಕರು, ಕಾಡು ಪ್ರಾಣಿಗಳು ಇದರ ಎಲೆ ತಿನ್ನುತ್ತಿಲ್ಲ. ಕಾಂಡ ಕೊರೆಯುತ್ತಿಲ್ಲ. ದಟ್ಟ ಹಸಿರಿನ ಕಾರಣ ಕಾಡಿನ ಹುಲ್ಲು, ಬಳ್ಳಿಗಳ ಬೆಳವಣಿಗೆಗೆ ತಡೆಯಾಗಿದೆ. ಮಲೇಷ್ಯಾ ಪ್ರದೇಶಗಳಲ್ಲಿ ಔಷಧೀಯ ಸಸ್ಯ ಎಂದು ಪರಿಚಿತವಾಗಿದೆ. ಆದರೆ, ರಾಜ್ಯದ ಜನರಿಗೆ ಸ್ಥಳೀಯವಾಗಿ ಅಪರಿಚಿತ. ಹಾಗಾಗಿ, ಪ್ರಯೋಜನ ಶೂನ್ಯ.

‘ಜಿಲ್ಲೆಯ ಸಾಗರ–ಹೊಸನಗರ ರಸ್ತೆಯ ಹಲಸಾಲೆ, ಮಲವಳ್ಳಿ ಅರಣ್ಯ ಪ್ರದೇಶದಲ್ಲಿ ಆಲ್ಸ್‌ಟೊನಿಯಾ ಸಸ್ಯಸಂಕುಲ ಪತ್ತೆ ಹಚ್ಚಿದ್ದೇವೆ. ಭಾರತದಲ್ಲಿ ಸಾಲು ಮರ, ಹೂ ದೋಟಗಳಲ್ಲಿ ಬೆಳೆಸಲಾಗುತ್ತಿತ್ತು. ವಿದೇಶಗಳಲ್ಲಿ ‘ದೆವ್ವದ ಮರ’ ಎಂದೇ ಪರಿಚಿತವಾದ ಈ ಸಸ್ಯಗಳನ್ನು ಹಿಂದೆ ಶ್ರೀಲಂಕಾದಲ್ಲೂ ನಾಟಿ ಮಾಡಲಾಗಿತ್ತು. ಅಲ್ಲಿನ ತೇವದ ನೆಲದಲ್ಲಿ ಕಳೆಯಂತೆ ಬೆಳೆಯುತ್ತಿರುವ ಮಾಹಿತಿ ಇದೆ’ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಮಾಹಿತಿ ನೀಡುತ್ತಾರೆ .

 ಪೈನಸ್, ಅಕೆಶಿಯಾ ಆಸ್ಟ್ರೇಲಿಯಾ ಮೂಲದ ಸಸ್ಯ ಪ್ರಭೇದ. ಪೈನಸ್ ಮರಗಳ ಬೆಳವಣಿಗೆ ಪರಿಣಾಮ ಮಲೆನಾಡಿನ ನೆಲದ ಪರಿಸರ ಬದಲಾಗಿದೆ. ಮೇಲ್ಮಣ್ಣು ಹೊಳೆದಂಡೆಯ ಮರಳಿನಂತೆ ಪರಿವರ್ತನೆಯಾಗಿದೆ. ದಾಂಡೇಲಿ ಕಾಗದ ಕಾರ್ಖಾನೆಯೂ ಈ ಮರಗಳನ್ನು ಖರೀದಿಸದ ಕಾರಣ ಬೇಡಿಕೆ ಇಲ್ಲದೆ ಒಂದೂವರೆ ಸಾವಿರ ಎಕರೆ ಪ್ರದೇಶದ ನೆಡುತೋಪು ಕಟಾವಾಗದೆ ಉಳಿದಿದೆ. ಅಕೆಶಿಯಾ ಪಶ್ಚಿಮಘಟ್ಟದ ಜೀವವೈವಿಧ್ಯಕ್ಕೆ ಮಾರಕವಾಗಿದೆ. ಹುಲ್ಲುಗಾವಲುಗಳು ನಾಶವಾಗಿವೆ. ಜಲಮೂಲಗಳು ಬತ್ತಿಹೋಗಿವೆ. ವನ್ಯ ಜೀವಿಗಳಿಗೆ ಆಹಾರವಾಗಿ ಬಳಸದ ಕಾರಣ ಆಹಾರ ಅರಸಿ ಕೃಷಿ ಭೂಮಿಗೆ ದಾಳಿ ಮಾಡುತ್ತಿವೆ ಎಂದು ಅವರು ವಿವರಿಸುತ್ತಾರೆ.

ಅನುಮತಿ ಕೊಟ್ಟವರು ಯಾರು?
ವಿದೇಶಗಳಿಂದ ಸಸ್ಯ, ಬೀಜ ಸಾಗಿಸುವುದು ಅಪರಾಧ. ಇದೊಂದು ಅತ್ಯಂತ ಗಂಭೀರ ಅಪರಾಧ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಜೀವ ವೈವಿಧ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕು. ಈಗ ನೆಟ್ಟಿರುವ ಪ್ರದೇಶಗಳಲ್ಲಿ ಸಸ್ಯ ಪರಿಣಾಮಗಳ ವಿಶೇಷ ಅಧ್ಯಯನ ನಡೆಸಬೇಕು ಎಂದು ಆಗ್ರಹಿಸುತ್ತಾರೆ ಶಿವಾನಂದ ಕಳವೆ.

ವಿಶ್ವಬ್ಯಾಂಕ್ ಕೋರಿಕೆಗೆ ಸ್ಪಂದನೆ
ಗುಣಮಟ್ಟದ ಕಾಗದ ತಯಾರಿಕೆಗೆ ಅಗತ್ಯ ತಿರಳು ಈ ವಿದೇಶಿ ಮರಗಳಲ್ಲಿ ದೊರೆಯುತ್ತದೆ. ಹಿಂದೆ ವಿಶ್ವಬ್ಯಾಂಕ್ ಮನವಿ ಮೇರೆಗೆ ಸರ್ಕಾರದ ಸೂಚನೆಯಂತೆ ಮರಗಳನ್ನು ನೆಡಲಾಗಿತ್ತು. ಪೈನಸ್ ಮರಗಳನ್ನು ಕಟಾವು ಮಾಡದೆ ಸಂಶೋಧನೆಗಾಗಿ ಉಳಿಸಿಕೊಳ್ಳಲಾಗಿದೆ. ಉಳಿದ ನೆಡುತೋಪುಗಳಲ್ಲಿ ತಾರೆ, ಮತ್ತಿಯಂತಹ ಮರಗಳನ್ನೂ ಬೆಳೆಸಲಾಗುತ್ತಿದೆ ಎನ್ನುತ್ತಾರೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್‌.ಎಲ್‌. ನಾಯ್ಕ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು