ಶುಕ್ರವಾರ, ನವೆಂಬರ್ 15, 2019
23 °C

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಅವಿರತ ಶ್ರಮಿಸಿದ ವೈಜನಾಥ ಪಾಟೀಲ್ ಇನ್ನಿಲ್ಲ

Published:
Updated:

ಕಲಬುರ್ಗಿ: ಕಲ್ಯಾಣ ಕರ್ನಾಟಕಕ್ಕೆ 371ಜೆ ವಿಧಿ ಜಾರಿಗಾಗಿ ಅವಿರತ ಹೋರಾಡಿದ್ದ ಮಾಜಿ ಸಚಿವ ವೈಜನಾಥ ಪಾಟೀಲ್ (82) ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ (1984) ತೋಟಗಾರಿಕೆ ಸಚಿವರಾಗಿ ಹಾಗೂ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ (1994) ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಮೂಲತಃ ಬೀದರ್ ಜಿಲ್ಲೆಯವರಾದ ವೈಜನಾಥರು ಪತ್ನಿಯ ಊರು ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ನೆಲೆಸಿದ್ದರು. ಅಲ್ಲಿಂದಲೇ ಶಾಸಕರಾಗಿ ಎರಡು ಬಾರಿ ಆಯ್ಕೆಯಾಗಿದ್ದರು.

ಈಗ ಕಲ್ಯಾಣ ಕರ್ನಾಟಕ ಎಂದು ಕರೆಯಲಾಗುವ ರಾಜ್ಯದ ಅತಿ ಹಿಂದುಳಿದ ಪ್ರದೇಶವಾದ ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗಾಗಿ ಪಾಟೀಲರು ಶ್ರಮಿಸಿದ್ದರು. ಈ ಭಾಗದ ಜನರಿಗೆ ಹಲವು ಅನುಕೂಲ ಕಲ್ಪಿಸುವ ಮತ್ತು ಅಲ್ಲಿನ ಅಭಿವೃದ್ಧಿಗೆ ಅವಕಾಶ ಮಾಡಿಕೊಡುವ 371ಜೆ ವಿಧಿ ಜಾರಿಗೆ 20 ವರ್ಷಗಳಷ್ಟು ಹಿಂದೆಯೇ ಒತ್ತಾಯಿಸಿ, ಹೋರಾಟ ರೂಪಿಸಿದ್ದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾದರೆ ಅಥವಾ ಆಗುತ್ತದೆ ಎಂದು ಅರಿವಾದರೆ ತಕ್ಷಣ ಸರ್ಕಾರದ ಗಮನ ಸೆಳೆಯುತ್ತಿದ್ದರು. ತಮ್ಮ ಬೇಡಿಕೆಗಳಿಗೆ ಸರ್ಕಾರ ಪೂರಕವಾಗಿ ಸ್ಪಂದಿಸಲಿಲ್ಲ ಎನಿಸಿದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶ್ರೇಯ ಅವರದು.

ಎಂಎಸ್ಐಎಲ್‌ನ ಮಾಜಿ ಅಧ್ಯಕ್ಷರಾದ ಡಾ.ವಿಕ್ರಮ್ ಪಾಟೀಲ, ಜಿ.ಪಂ. ಗೌತಮ ಪಾಟೀಲ ಸೇರಿ ಮೂವರು ಪುತ್ರರು, ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ನಾಳೆ (ಭಾನುವಾರ) ಮಧ್ಯಾಹ್ನ ಚಿಂಚೋಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಯಾರೂ ಊಹಿಸಿರಲಿಲ್ಲ

ಕಳೆದ ತಿಂಗಳು, ಸೆ.22ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ‘ಮನದಾಳದ ಮಾತು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೀವನ ಪರಿಚಯ ಹಾಗೂ ಹೋರಾಟದ ಇತಿಹಾಸ ಹೇಳಿದ್ದರು. ಆದರೆ ಜೀವನ ಇತಿಹಾಸದಿಂದ ಇಷ್ಟು ಬೇಗ ಮರೆಯಾಗುತ್ತಾರೆಂದು ಯಾರೂ ಊಹಿಸಿರಲಿಲ್ಲ.

ಸುದೀರ್ಘ ಎರಡು ಗಂಟೆಗಳವರೆಗೆ ಕಾರ್ಯಕ್ರಮದಲ್ಲಿ ಕುಳಿತಿದ್ದರು. ಅದೇ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿತ್ತು. ಅದಾದ ಬಳಿಕ ಹಾಸಿಗೆ ಹಿಡಿದಿದ್ದರು. ಅಂದೂ ಗಾಲಿ ಕುರ್ಚಿಯ ಸಹಾಯದಿಂದಲೇ ಕಸಾಪ ಸಭಾಂಗಣಕ್ಕೆ ಬಂದಿದ್ದರು.

ಬಾಂಬ್ ಹಾಕುವ ಆಲೋಚನೆ ಮಾಡಿದ್ದರಂತೆ

ಪಾಟೀಲರು ಸೋಷಿಯಲಿಸ್ಟ್‌ ಪಾರ್ಟಿಯಲ್ಲಿದ್ದಾಗ ಜಾರ್ಜ್ ಫರ್ನಾಂಡೀಸ್ ಅವರ ಸೂಚನೆ ಮೇರೆಗೆ ಗುಜರಾತಿನಿಂದ ತರಿಸಿದ್ದ ಬಾಂಬ್‌ಗಳನ್ನು ಬೀದರ್‌ನಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಉಡಾಯಿಸುವ ಯೋಜನೆ ಹೊಂದಿದ್ದರು. ಇದು ಮನೆಯವರಿಗೆ ಗೊತ್ತಾಗಿ ಕೊನೆ ಕ್ಷಣದಲ್ಲಿ ಆ ಪ್ರಯತ್ನದಿಂದ ಹಿಂದೆ ಸರಿದಿದ್ದರು‌. ಈ ಅಂಶವನ್ನು ಕಸಾಪ ಕಾರ್ಯಕ್ರಮದಲ್ಲಿ ‌ಹಂಚಿಕೊಂಡಿದ್ದರು.

ಇನ್ನಷ್ಟು... 

ಕಾಂಗ್ರೆಸ್ ತೊರೆದ ಮಾಜಿ ಸಚಿವ ವೈಜನಾಥ ಪಾಟೀಲ 

ಸಂಸದರು ದನಿ ಎತ್ತಿದ್ದರೆ 1973ರಲ್ಲೇ ವಿಶೇಷ ಸ್ಥಾನಮಾನ: ವೈಜನಾಥ ಪಾಟೀಲ 

ಹುದ್ದೆಗಳಿಗೆ ಸ್ಥಳೀಯ ಮಟ್ಟದಲ್ಲಿ ನೇಮಕ: ವೈಜನಾಥ ಪಾಟೀಲ ಆಗ್ರಹ  

ನೇಮಕಾತಿ ತಡೆ ಆಗ್ರಹಿಸಿ `ಬೆಂಗಳೂರು ಚಲೋ': ವೈಜನಾಥ ಪಾಟೀಲ

ಪ್ರತಿಕ್ರಿಯಿಸಿ (+)