ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರದೃಷ್ಟಿಯ ಬಜೆಟ್‌: ಅನುಷ್ಠಾನವೇ ಸವಾಲು

ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಬೆಂಗಳೂರು ಶಾಖೆಯಿಂದ ಕೇಂದ್ರ ಬಜೆಟ್‌ ವಿಶ್ಲೇಷಣೆ
Last Updated 6 ಜುಲೈ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಚೊಚ್ಚಲ ಬಜೆಟ್‌ ದೂರದೃಷ್ಟಿಯಿಂದ ಕೂಡಿದೆ. ಆದರೆ, ಅದರ ಅನುಷ್ಠಾನ ಸವಾಲಿನಿಂದ ಕೂಡಿದೆ’

ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಬೆಂಗಳೂರು ಶಾಖೆಯ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ವಿಚಾರ ಗೋಷ್ಠಿ’ಯಲ್ಲಿ ಕೇಂದ್ರ ಬಜೆಟ್‌ ಕುರಿತು ವ್ಯಕ್ತವಾದ ಅಭಿಪ್ರಾಯವಿದು.

ಅಂತರರಾಷ್ಟ್ರೀಯ ತೆರಿಗೆ ಸಲಹೆಗಾರ ಎಸ್.ಕೃಷ್ಣನ್, ಐಸ್ಪಿರಿಟ್‌ ಫೌಂಡೇಷನ್‌ನ ಸಹಸಂಸ್ಥಾಪಕ ಶರದ್‌ ಶರ್ಮಾ, ಇನ್‌ಕ್ಲೂಡ್‌ ಲ್ಯಾಬ್ಸ್‌ ಮುಖ್ಯಸ್ಥ ನಾರಾಯಣ ರಾಮಚಂದ್ರನ್‌, ಕರ್ನಾಟಕ ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ ಸಂವಾದದಲ್ಲಿ ಪಾಲ್ಗೊಂಡರು. ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ ಸರ್ವಿಸಸ್‌ ಕಂಪನಿಯ ಮುಖ್ಯಸ್ಥ ಟಿ.ವಿ.ಮೋಹನದಾಸ್‌ ಪೈ ಕಾರ್ಯಕ್ರಮ ನಿರ್ವಹಿಸಿದರು. ಪ್ರಶ್ನೋತ್ತರ ರೂಪದಲ್ಲಿ ನಡೆದ ಬಜೆಟ್‌ ವಿಶ್ಲೇಷಣೆ ಇಂತಿದೆ.

* 2025ರ ವೇಳೆಗೆ ಭಾರತವು ₹350 ಲಕ್ಷ ಕೋಟಿ ಆರ್ಥಿಕತೆಯಾಗಲುಬಜೆಟ್‌ನ ರಚನಾತ್ಮಕ ಸುಧಾರಣೆಗಳು ಪೂರಕವಾಗಿವೆಯೇ ?

ಮೂಲಸೌಕರ್ಯ ಕ್ಷೇತ್ರದಲ್ಲಿ ಅಗಾಧ ಹೂಡಿಕೆಯನ್ನು ಉತ್ತೇಜಿಸುವ ಮೂಲಕ ಈ ಗುರಿ ಸಾಧನೆಗೆ ಪ್ರಯತ್ನಿಸಬಹುದು. ಆದರೆ, ಭಾರತೀಯರಲ್ಲಿ ವೈಯಕ್ತಿಕ ಉಳಿತಾಯ ಪ್ರಮಾಣವೇ ಹೆಚ್ಚಾಗಿದೆ. ಅಂದರೆ, ಜನ ಚಿನ್ನಾಭರಣ ಖರೀದಿ ಮತ್ತು ಆಸ್ತಿ–ನಿವೇಶನ ಖರೀದಿಯಲ್ಲಿ ಹಣ ತೊಡಗಿಸುತ್ತಾರೆ. ಇಲ್ಲವೆ, ಬ್ಯಾಂಕುಗಳಲ್ಲಿ ಇಡುತ್ತಾರೆ. ಇದೇ ಹಣವನ್ನು ಕೈಗಾರಿಕಾ ಕ್ಷೇತ್ರದಲ್ಲಿ ಹೂಡುವಂತಾದರೆ, ದೇಶವು ₹350 ಲಕ್ಷ ಕೋಟಿ ಆರ್ಥಿಕತೆಯಾಗಬಹುದು.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ವೆಚ್ಚ ಮಾಡಬೇಕಾಗಿದೆ. ಇದೇ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವುದು ಮತ್ತು ಹೂಡಿಕೆ ಉತ್ತೇಜಿಸುವ ಕೆಲಸವಾದರೆ ಈ ಗುರಿ ಈಡೇರಬಹುದು.

* ಮುಂದಿನ ಐದು ವರ್ಷಗಳಲ್ಲಿರೈತರ ಆದಾಯ ದ್ವಿಗುಣಗೊಳಿಸುವುದು ಮತ್ತು ಕೃಷಿ ಉತ್ಪಾದಕತೆ ಹೆಚ್ಚಿಸುವುದು ಸಾಧ್ಯವೇ?

ಭೂ ಸುಧಾರಣೆ ಮತ್ತು ಎಪಿಎಂಸಿಗಳ ಸುಧಾರಣೆ ಕೈಗೊಳ್ಳದ ಹೊರತು ರೈತರ ಆದಾಯ ಹೆಚ್ಚುವ ಸಾಧ್ಯತೆ ಕಡಿಮೆ. ರೈತರ ಬೆಳೆಗಳಿಗೆ ಉತ್ತಮ ಬೆಲೆ ಒದಗಿಸಿಕೊಡುವಲ್ಲಿಯೇ ವಿಫಲವಾಗುತ್ತಿದ್ದೇವೆ.

ಕೃಷಿ ಕ್ಷೇತ್ರ ಬೆಳವಣಿಗೆಗೆ ಅತ್ಯುತ್ತಮ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಅವುಗಳ ಅನುಷ್ಠಾನದಲ್ಲಿ ಸಾಕಷ್ಟು ನ್ಯೂನತೆಗಳಿವೆ. ರೈತರ ಆತ್ಮಹತ್ಯೆ ಪ್ರಕರಣಗಳನ್ನೇ ತೆಗೆದುಕೊಂಡರೆ, ಇಂತಹ ರೈತರ ಸರಾಸರಿ ಸಾಲ ₹1 ಲಕ್ಷದಷ್ಟಿದೆ. ಅವರ ಆಸ್ತಿ ಅಥವಾ ಹೊಲದ ಮೌಲ್ಯ ₹5 ಲಕ್ಷದಿಂದ ₹6 ಲಕ್ಷದಷ್ಟಿರುತ್ತದೆ. ಆದರೆ, ಅವನ ಹೊಲದ ದಾಖಲೆಗಳೇ ಸರಿಯಾಗಿರುವುದಿಲ್ಲ. ಇನ್ನು, ಬೆಳೆ ವಿಮೆಯಂತಹ ಉತ್ತಮ ಯೋಜನೆ ರೂಪಿಸಲಾಗಿದೆ. ಆದರೆ, ಇದರ ಅನುಷ್ಠಾನ ಸಮರ್ಪಕವಾಗಿಲ್ಲ.

ಬಜೆಟ್‌ನಲ್ಲಿ ಶೂನ್ಯ ಬಂಡವಾಳ ಕೃಷಿಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದು ಕೂಡ ಉತ್ತಮ ಯೋಜನೆ. ಆದರೆ, ಎಷ್ಟು ಅನುಷ್ಠಾನಯೋಗ್ಯ ಎಂಬುದನ್ನು ಯೋಚಿಸಬೇಕು. ರಾಸಾಯನಿಕ ಗೊಬ್ಬರ ಮಾರಾಟಗಾರರು, ಕ್ರಿಮಿನಾಶಕ ವರ್ತಕರು ಇಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಹಕಾರ ನೀಡುವುದಿಲ್ಲ.

* ನವೋದ್ಯಮಗಳಲ್ಲಿ ದೇಸೀ ಹೂಡಿಕೆ ಉತ್ತೇಜನಕ್ಕೆ ಬಜೆಟ್‌ನಲ್ಲಿನ ಉಪ
ಕ್ರಮಗಳು ಸಹಕಾರಿಯಾಗಿವೆಯೇ ?

ಏಂಜೆಲ್‌ ತೆರಿಗೆ ಬಗೆಗಿನ ಗೊಂದಲಗಳನ್ನು ಈ ಬಜೆಟ್‌ನಲ್ಲಿ ಪರಿಹರಿಸಿರುವುದು ಉತ್ತಮ ಬೆಳವಣಿಗೆ. ನವೋದ್ಯಮಗಳಿಗೆ ವಕೀಲರು ಮತ್ತು ಲೆಕ್ಕಪರಿಶೋಧಕರನ್ನು ಇಟ್ಟುಕೊಳ್ಳುವುದು ಕಷ್ಟ. ಇವುಗಳಲ್ಲಿ ಹೂಡಿಕೆ ಮಾಡುವುದನ್ನು ಉತ್ತೇಜಿಸಬೇಕು. ಉದ್ಯಮಸ್ನೇಹಿ ವಾತಾವರಣ ನಿರ್ಮಾಣ ಮಾಡುವ ಅವಶ್ಯಕತೆಯಿದೆ.

* ಸರ್ಕಾರಿ ವಲಯದ ಬ್ಯಾಂಕುಗಳಿಗೆ ₹70 ಸಾವಿರ ಕೋಟಿ ನೆರವು ದೊರೆತಿದೆ. ಅದರ ಜೊತೆಗೆ, ಐಬಿಸಿಯಿಂದ ಸಾಲ ವಸೂಲಾತಿ ಪ್ರಮಾಣ ಜಾಸ್ತಿಯಾಗಿದೆ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆಯಲ್ಲಾ?

₹70 ಸಾವಿರ ಕೋಟಿ ನೆರವು ಯಾವುದಕ್ಕೂ ಸಾಲುವುದಿಲ್ಲ. ಆದರೆ, ಐಬಿಸಿ ರಚನೆ ಒಂದು ಐತಿಹಾಸಿಕ ಸುಧಾರಣೆ. ಆದರೆ, ಬ್ಯಾಂಕ್‌ ವಂಚನೆ ಸಂಬಂಧಿತ ಪ್ರಕರಣಗಳ ವಿಚಾರಣೆಗೆ ಇರುವ ನ್ಯಾಯಾಲಯಗಳು ಮತ್ತು ನ್ಯಾಯಾಧೀಶರ ಸಂಖ್ಯೆ ತೀರಾ ಕಡಿಮೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು. ಬ್ಯಾಂಕಿಂಗ್‌ ಕ್ಷೇತ್ರದ ಸುಧಾರಣೆಗೆ ಶ್ರಮಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT