ಮಂಗಳವಾರ, ಜನವರಿ 21, 2020
29 °C
ಕಾಶ್ಮೀರದಲ್ಲಿ ಇಂಟರ್‌ನೆಟ್‌ ಬಳಕೆ ಮೇಲಿನ ನಿಷೇಧಕ್ಕೆ ವಿರೋಧ

‘ಫ್ರೀ ಕಾಶ್ಮೀರ’: ಫಲಕ ಹಿಡಿದ ಯುವತಿ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರದರ್ಶಿಸಿದ ‘ಫ್ರೀ ಕಾಶ್ಮೀರ’ ಫಲಕದ ಅರ್ಥ, ಕಾಶ್ಮೀರದಲ್ಲಿ ಇಂಟರ್‌ನೆಟ್‌ ಬಳಕೆ ಮೇಲಿನ ನಿಷೇಧವನ್ನು ತೆಗೆದು ಹಾಕಿ ಎಂಬುದಾಗಿತ್ತು’ ಎಂದು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿ ಬಿ.ನಳಿನಿ ಶನಿವಾರ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ಅವರು, ಈ ಫಲಕದಿಂದ ಉಂಟಾಗಿರುವ ಗೊಂದಲಕ್ಕೆ ಕ್ಷಮೆ ಯಾಚಿಸುವುದಾಗಿ ತಿಳಿಸಿದ್ದಾರೆ.

‘ಸಾಮಾಜಿಕ ಜಾಲತಾಣಗಳಿಂದ ವಿಷಯ ತಿಳಿದು ನಾನು ಅಂದು ಪ್ರತಿಭಟನೆಯಲ್ಲಿ ಭಾಗವಹಿಸಿದೆ. ‘ಫ್ರೀ ಕಾಶ್ಮೀರ್’ ಎಂಬ ಪೋಸ್ಟರ್‌ನ್ನು ನಾನೇ ಬರೆದು, ಹಿಡಿದುಕೊಂಡಿದ್ದೆ. ಕಾಶ್ಮೀರಕ್ಕೆ ಇಂಟರ್‌ನೆಟ್ ಸಂಪರ್ಕ ನೀಡಿ ಎಂಬುದಷ್ಟೇ ನನ್ನ ಆಗ್ರಹವಾಗಿತ್ತು. ಇದು ಇಷ್ಟು ಗೊಂದಲಕ್ಕೆ ಕಾರಣವಾಗುತ್ತದೆ ಎಂದುಕೊಂಡಿರಲಿಲ್ಲ. ನಾನು ಯಾವುದೇ ಸಂಘಟನೆಯ ಸದಸ್ಯೆ ಅಲ್ಲ. ನನ್ನನ್ನು ಯಾರೂ ಪ್ರತಿಭಟನೆಗೆ ಆಹ್ವಾನಿಸಿರಲಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ದೇಶದ್ರೋಹ ಪ್ರಕರಣ ದಾಖಲಾಗಿದ್ದರಿಂದ ‘ಪ್ಯಾನಿಕ್‌’ಗೆ ಒಳಗಾಗಿ ನನ್ನ ಫೇಸ್‌ಬುಕ್‌ ಖಾತೆಯಲ್ಲಿ ಹಾಕಿದ್ದ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ‌‌

ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ನಳಿನಿ, ತನಿಖೆ ಎದುರಿಸಲು ಇಲ್ಲಿನ ಜಯಲಕ್ಷ್ಮಿಪುರಂ ಠಾಣೆಗೆ ಹಾಜರಾದರು. ಬೆಳಿಗ್ಗೆಯಿಂದ ಸಂಜೆವರೆಗೆ ವಿಚಾರಣೆ ಎದುರಿಸಿ ಹೊರ ಬಂದ ಅವರು, ವಿಡಿಯೊದಲ್ಲಿ ತಾವು ನೀಡಿರುವ ಹೇಳಿಕೆಯೇ ಅಂತಿಮ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ವಿಚಾರಣೆ ವೇಳೆ ಪೊಲೀಸರು, ‘ಫ್ರೀ ಕಾಶ್ಮೀರ’ ಎಂಬ ಬರಹಕ್ಕೆ ಬದಲಾಗಿ ‘ಫ್ರೀ ಇಂಟರ್‌ನೆಟ್‌ ಇನ್‌ ಕಾಶ್ಮೀರ್‌’ ಎಂದು ಸ್ಪಷ್ಟವಾಗಿ ಬರೆಯಬಹುದಿತ್ತು. ಈ ರೀತಿ ಗೊಂದಲಕ್ಕೆ ಎಡೆಮಾಡುವ ಭಿತ್ತಿಪತ್ರವನ್ನು ಮತ್ತೆ ಹಿಡಿಯದಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿರೀಕ್ಷಣಾ ಜಾಮೀನಿಗೆ ಆಕ್ಷೇಪವಿದ್ದಲ್ಲಿ ಜ.14ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ. ಈ ಮಧ್ಯೆ ಪ್ರತಿಭಟನೆ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಂದೇಶ್‌, ವಿಶ್ವವಿದ್ಯಾನಿಲಯ ನೀಡಿದ್ದ ನೋಟಿಸ್‌ಗೆ ಉತ್ತರಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು