ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲುಗು ವಾಗ್ಗೇಯ ಪರಂಪರೆಯ ಏಕತಾರಿ

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಮಳೆ ಬಂತಮ್ಮಾ ನೆರೆ ಬಂತಮ್ಮಾ
ಮಳೆಯ ಜತೆಯಾಗಿ ಝಳ ಬಂತಮ್ಮಾ...

ಹದ್ದು ಗೂಡಿನ್ಯಾಗ ಹುಲ್ಲನು ತೋಯಿಸಿ
ಗುಬ್ಬಿ ಗೂಡಿನ ಕಲ್ಲು ಹರಳನು ಸರಿಸ್ಯಾದ
ಟಿಟ್ಟಿಭ ಗಂಟಲು ಸಿಹಿಯನು ಹೆಚ್ಚಿಸಿ
ಪಿಕಳಾರ ಮೂಗಿನ ಪಾಚಿಯ ತೊಳೆದಾದ
ಎತ್ತಿನ ಡುಬ್ಬವ ಮುದ್ದಾಡಿ ನಲಿದು
ನೇಗಿಲ ಒಡಲನು ತಣ್ಣಾಗ ಮಾಡ್ಯಾದ

ಹೊಸ ನೀರು ತಂದು ಹೊಂಡಾವ ಸೇರಿಸಿ
ಹಸಿರು ಪಾಚಿಯ ತುಕ್ಕು ಹಸನಾಗಿ ತೊಳೆದಾದ
ಮೀನಿಗೇನೊ ನೀರಾ ಹುಳಿಯನು ಕುಡಿಯಿಸಿ
ಕೊಕ್ಕರೆಗೆ ಔತಣದ ಕೋರಿಕೆ ತಂದಾದ
ಕಪ್ಪೆಯ ಹಬ್ಬವ ಕಣ್ಣಾರೆ ನೋಡಿ
ಆಮೆಯ ಮದುವೆಗೆ ತಲೆ ನೀರು ಸುರಿದಾದ
(ಮಳೆ ಬಂತಮ್ಮಾ, ಅಲಸಂದ್ರವಂಕ)
ಹೀಗೆ ಮಳೆಯ ಬರುವನ್ನು ಹೊಲಗದ್ದೆಯಿಂದ ಆರಂಭಿಸಿ ಅದು ಹಳ್ಳಿಯ ಸಕಲ ಜೀವ ಸಂಕುಲದೊಂದಿಗೆ ಹೊಂದಿರುವ ಸಂಬಂಧವನ್ನು ವರ್ಣಿಸುತ್ತ; ಕೊನೆಗೆ ಹೈದರಾಬಾದ್‌ ಪಟ್ಟಣಕ್ಕೆ ಬಂದು, ಈಗ ಬರೀ ಚರಂಡಿಯಾಗಿ ಉಳಿದಿರುವ ಮೂಸಿ ನದಿಯೊಳಗೆ ಮೂಗು ಮುಚ್ಚಿಕೊಂಡು ಮುಳುಗುವ ಸಂದರ್ಭವನ್ನು ಅಷ್ಟೇ ಮಧುರವಾಗಿ ಹಾಡಿ ತೋರಿದ್ದಾರೆ ತೆಲುಗಿನ ಆಧುನಿಕ ಜನಪದ ವಾಗ್ಗೇಯಕಾರರೆಂದೇ ಖ್ಯಾತರಾದ ತೆಲಂಗಾಣದ ಕವಿ ಗೋರಟಿ ವೆಂಕನ್ನ.

ತೆಲಂಗಾಣ ಅಂದ ತಕ್ಷಣ, ನಮ್ಮ ಕಣ್ಣೆದುರು ನಿಜಾಮರ ಆಳ್ವಿಕೆಯ ಪರಿಯೋ, ಇಲ್ಲ ಸುದೀರ್ಘವಾಗಿ ನಡೆದ ಪ್ರತ್ಯೇಕತೆಯ ಚಳವಳಿಯ ದಿನಗಳೋ ಹಾದು ಹೋಗುತ್ತವೆ. ಆದರೆ, ಈ ಪ್ರದೇಶದ ಸಾಂಸ್ಕೃತಿಕ ಚರಿತ್ರೆ, ಅದು ಸೆರೆ ಹಿಡಿದ ಮೌಖಿಕ ಪರಂಪರೆ ಮತ್ತು ಇಲ್ಲಿಯ ಆರಂಭಿಕ ಸಾಹಿತ್ಯಿಕ ಹೆಗ್ಗುರುತುಗಳಾದ ಬಮ್ಮೆರ ಪೋತನ್ನ, ಶ್ರೀ ರಾಮದಾಸು, ಪಾಲ್ಕುರಿಕೆ ಸೋಮನಾಥ ಮತ್ತು ಮಲ್ಲಿನಾಥ ಸೂರಿ ಹಾಗೂ ಇತರರ ಹೆಸರು ನೆನಪಾಗುವುದು ಅಪರೂಪ. ಭೂಮಾಲೀಕರ ದರ್ಪ ದೌರ್ಜನ್ಯಗಳ ಅಟ್ಟಹಾಸದಲ್ಲೂ ಇಲ್ಲಿಯ ಜನ ಸಮುದಾಯಗಳು; ಸೂಫಿ, ಸಂತ, ಕೀರ್ತನಕಾರ, ತತ್ವಪದ ಪರಂಪರೆಯಿಂದ, ಜನಪದ ಕಲೆ ಮತ್ತು ಸಾಹಿತ್ಯದಲ್ಲಿ ವೈಶಿಷ್ಟ್ಯವನ್ನು ಮೆರೆದಿರುವ ಉದಾಹರಣೆಗಳಿವೆ. ಆದರೆ, ನಿಜಾಮ ತನ್ನ ಆಡಳಿತಕ್ಕಾಗಿ ಉರ್ದು ಭಾಷೆಯನ್ನು ಜಾರಿ ಮಾಡಿದ ಪರಿಣಾಮ, ಈ ಪ್ರಾಂತ್ಯದಲ್ಲಿ ತೆಲುಗು ಮಾಧ್ಯಮದಲ್ಲಿ ಶಾಲೆ ಕಲಿಯುವ ಅವಕಾಶವೇ ಇಲ್ಲವಾಗಿತ್ತು. ನಂತರ ವ್ಯವಹಾರಕ್ಕಾಗಿ ತೆಲುಗು ಕಲಿಸಲಾಯಿತಾದರೂ ಅದು ಆ ಕಾಲಘಟ್ಟದಲ್ಲಿ ಸಾಹಿತ್ಯ ಸೃಷ್ಟಿಗೆ ಬಳಸಬಹುದಾದಷ್ಟು ಪರಿಣಾಮಕಾರಿಯಾಗಿದ್ದಿಲ್ಲ. ಹೀಗಾಗಿ ಅಂದಿನ ಮಾರ್ಕ್ಸ್‌ವಾದಿ ಬರಹಗಾರರಾದ ಮಖ್ದುಮ್ ಮೊಹಿನುದ್ದೀನ್ ಮತ್ತು ವಹೀದ್ ಅಖ್ತರ್ ಅಷ್ಟೇ ಅಲ್ಲದೆ, ಸಾಹಿತ್ಯ ರಚನೆಗೆ ಉರ್ದು ಬಳಸಿದವರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ‘ಸಿನಾರೆ’ (ಸಿಂಗಿರೆಡ್ಡಿ ನಾರಾಯಣ ರೆಡ್ಡಿ), ಪದ್ಮವಿಭೂಷಣ ‘ಕಾಳೋಜಿ’ (ರಘುವೀರ್ ನಾರಾಯಣ ಲಕ್ಮೀಕಾಂತ್ ಶ್ರೀನಿವಾಸ ರಾಮರಾಜಾ ಕಾಳೋಜಿ) ಮತ್ತು ದೇವುಲಪಲ್ಲಿ ರಾಮಾನುಜರಾವು ಕೂಡ ಸೇರಿದ್ದಾರೆ.

ನಂತರ ನಿಜಾಮರ ದುರಾಡಳಿತದ ವಿರುದ್ಧ, ಅವರ ಖಾಸಗಿ ಪಡೆಗಳಾದ ರಝಾಕಾರರ ದರ್ಪ, ಅನಾಚಾರಕ್ಕೆ ರೋಸಿ ದನಿಯೆತ್ತಿದ ಸುದ್ದಾಲ ಹನಮಂತು, ವಟ್ಟಿಕೋಟ ಅಲ್ವರ್ ಸ್ವಾಮಿ, ಬೋಯ ಜಂಗಯ್ಯ, ದೇವುಲಪಲ್ಲಿ ರಾಮಾನುಜರಾವು, ಕಪಿಲವಾಯ್ ಲಿಂಗಮೂರ್ತಿ ಹೀಗೆ ಒಂದು ತಲೆಮಾರಿನ ಬರಹಗಾರರ ಪಡೆಯೇ ಸಿಗುತ್ತದೆ. ಈ ದಶಕಗಳ ಹೆಚ್ಚಿನ ಬರಹಗಾರರು ಮಾರ್ಕ್ಸ್‌ವಾದಿ ವಿಚಾರಧಾರೆಯ ಪ್ರಭಾವಕ್ಕೊಳಗಾದವರಾಗಿದ್ದರು. ನಿಜಾಮರ ದುಷ್ಕೃತ್ಯಗಳ ವಿರುದ್ಧ ಸಶಸ್ತ್ರ ಹೋರಾಟಕ್ಕಿಳಿದು, ಆ ಪಡೆಗಳನ್ನು ಹಿಮ್ಮೆಟ್ಟಿಸಿದ್ದ ಈ ನೆಲದ ರೈತಾಪಿ ಚಳವಳಿ; ಮುಂದೆ ನಕ್ಸಲ್‌ಬರಿ ಸ್ವರೂಪ ಪಡೆದುದಲ್ಲದೆ, ತೆಲಂಗಾಣ ಪ್ರತ್ಯೇಕ ರಾಜ್ಯದ ಹೋರಾಟದವರೆಗೂ ಚಾಚಿಕೊಂಡಿತು. ಇಂತಹ ರಾಜಕೀಯ ಹಿನ್ನೆಲೆಯಿರುವ ತೆಲಂಗಾಣ ನೆಲಕ್ಕೆ ಮತ್ತು ಜನಸಮುದಾಯಗಳಿಗೆ ಸಾಹಿತ್ಯ ರೂಪದಲ್ಲಿ ತಲುಪಿದ್ದು ಈ ನೆಲದ ಜನಪದದ ರಾಯಭಾರಿಗಳಂತೆ ಹಾಡು ಹೊಸೆದ ಗದ್ದರ್, ವರವರ ರಾವ್, ಸುದ್ದಾಲ ಹನಮಂತು ಪುತ್ರ ಸುದ್ದಾಲ ಅಶೋಕ, ಅಂದೆ ಶ್ರೀ, ಗೋರಟಿ ವೆಂಕನ್ನ ಮತ್ತು ಅವರಂಥವರು.

ತೆಲಂಗಾಣ ಭಾಗದ ಜನಪದ ಸಾಹಿತ್ಯ ಜಾತ್ರೆಯ ಗೇಯರೂಪ ಕಾವ್ಯದ ತೇರು ಎಳೆದು ಬಹುದೂರ ದಾರಿ ಸವೆಸಿದ ಕವಿಗಳಲ್ಲಿ ಗೋರಟಿ ವೆಂಕನ್ನನದು ಪ್ರತ್ಯೇಕ ಸ್ಥಾನ. ತೆಲಂಗಾಣ ರಾಜ್ಯ ಸ್ಥಾಪಿಸಿರುವ ‘ಕಾಳೋಜಿ’ ಪ್ರಶಸ್ತಿ ಪುರಸ್ಕೃತರೂ ಆಗಿರುವ ವೆಂಕನ್ನ, ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಸಿಕ್ಕಾಗ ತಮ್ಮ ಕಾವ್ಯದ ಕುರಿತು ವಿವರವಾಗಿ ಮಾತನಾಡಿದರು. ಆ ಮಾತುಕತೆಯ ಆಯ್ದ ಭಾಗ ಇಲ್ಲಿದೆ:

ಗೋರಟಿ ವೆಂಕನ್ನ ಹುಟ್ಟಿದ್ದು 1964ರ ಏಪ್ರಿಲ್ 4 ರಂದು. ಆಗಿನ ಮೆಹಬೂಬ್ ನಗರ ಜಿಲ್ಲೆಯ ತೆಲಕಲಪಲ್ಲಿ ಮಂಡಲದ ದುಂದುಭಿ ನದಿ ತೀರದ ಗೌರಾರಂನಲ್ಲಿ. ಕಾಲೇಜು ದಿನಗಳಿಂದಲೂ ವಿದ್ಯಾರ್ಥಿ ಚಳವಳಿಯೊಂದಿಗೆ ಗುರುತಿಸಿಕೊಂಡ ವೆಂಕನ್ನ, ತನ್ನ ಹಳ್ಳಿಗಾಡಿನ ಗಂಟಲ ತಂತಿಯಲ್ಲಿ ಅದೆಷ್ಟೋ ಗೇಯಗೀತೆಗಳನ್ನು ಅಡಗಿಸಿಟ್ಟುಕೊಂಡಿದ್ದರು. ಅವೆಲ್ಲವೂ ಆಗಾಗ ವೇದಿಕೆಗಳಲ್ಲಿ ಕೇಳುಗರನ್ನು ಸಮ್ಮೋಹಿತರನ್ನಾಗಿಸಿ, ಅವರ ಮೈ ಜುಮ್ಮೆನ್ನಿಸಿವೆ. ಮೂರು ದಶಕಗಳಿಂದ ಕಾವ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ವೆಂಕನ್ನನ ದನಿಗೆ ಹಳ್ಳಿಗಾಡಿನಲ್ಲಿ ಮೊರೆಯುವ ದಾಸಯ್ಯನ ಏಕತಾರಿಯ ಗತ್ತು ಇದೆ. ಜಾಗತೀಕರಣದ ಕುಲುಮೆಯಲ್ಲಿ ನಲುಗುತ್ತಿರುವ ಗ್ರಾಮ್ಯ ವೃತ್ತಿಗಳು, ಹೆಚ್ಚುತ್ತಿರುವ ನಗರೀಕರಣ, ಬತ್ತಿದ ಕೆರೆಗಳು, ಒಣಗಿದ ಪೈರು, ಹಸಿರು ಹೊದ್ದು ನಿಂತ ಬೇವಿನ ಮರ, ಆ ಮರಕ್ಕೆ ತೂಗುವ ಸೀರೆಯ ಉಯ್ಯಾಲೆ, ಆ ಉಯ್ಯಾಲೆ ತೂಗುವ ತಾಯಿ, ಅದರೊಳಗೆ ಮಲಗಿರುವ ಕೂಸು, ಅದರ ತುಟಿ ಅಂಚಿಗೆ ಅಂಟಿರುವ ಕಿರು ನಗು ಎಲ್ಲವೂ ಇವರ ಕಾವ್ಯದ ವಸ್ತು. ಹತ್ತಾರು ಹಾಡುಗಳ ಕ್ಯಾಸೆಟ್ ಮತ್ತು ದ್ವನಿ ಸಾಂದ್ರಿಕೆಯ ಆಲ್ಬಂ ಹೊರತಂದಿರುವ ವೆಂಕನ್ನ, ಇಲ್ಲಿಯವರೆಗೂ ನಾಲ್ಕು ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಏಕ ನಾದಂ ಮೋತ (1994)’, ‘ರೇಲ ಪೂತಲು (2008)’, ‘ಅಲ ಸೆಂದ್ರವಂಕ (2010)’ ಮತ್ತು ‘ಪೂಸಿನ ಪುನ್ನಮು (2018)’ ಸಂಕಲನಗಳನ್ನು ಪ್ರಕಟಿಸಿರುವುದಲ್ಲದೆ ಒಂದಷ್ಟು ಸಿನಿಮಾಗಳಿಗೆ ಹಾಡು ಕೂಡ ಬರೆದಿದ್ದಾರೆ.

* ವೆಂಕನ್ನ, ತೆಲಂಗಾಣ ನೆಲದ ಸಮೃದ್ಧ ಹಾಡುಗಬ್ಬದ ಪ್ರತಿನಿಧಿ ನಿಮ್ಮ ಕಾವ್ಯ. ಈ ಆಧುನಿಕ ಮೊಬೈಲ್ ಜಗತ್ತಿನಲ್ಲೂ ನೀವು ಗೇಯತೆಯನ್ನು ಅನುಸರಿಸುತ್ತಿರುವುದಕ್ಕೆ ಪ್ರೇರಣೆ ಏನು? 
ನನ್ನ ತಂದೆಯ ಹಂಗಾಮದ ದಿನಗಳಲ್ಲಿ ನಮ್ಮ ಪ್ರಾಂತ್ಯದಲ್ಲಿ ಒಬ್ಬ ಚೆನ್ನದಾಸು ಅನ್ನುವ ಯೋಗಿ ನಮ್ಮ ಕೇರಿಗಳಿಗೆ ಬಂದು ಆ ತಲೆಮಾರಿನವರಿಗೆ ಅಷ್ಟಕ್ಷರ ಮಂತ್ರೋಪದೇಶ ಮಾಡಿದ್ದ ಪ್ರಸಂಗವನ್ನು ನಮ್ಮ ತಂದೆ ನೆನೆಯೋರು. ವಿಶೇಷವಾಗಿ ಹೊಲೆ- ಮಾದಿಗರ ಓಣಿಗೆ ಬರುತ್ತಿದ್ದ ಆತ, ಶುಭ್ರತೆಯ ಬಗ್ಗೆ, ಬದುಕಿನಲ್ಲಿ ಪೂಜೆಯ ಮಹತ್ವದ ಕುರಿತು ತಿಳಿ ಹೇಳುತ್ತಿದ್ದ ಪ್ರಸಂಗಗಳು ಇವೆ. ಬಹುಶಃ ಆತನ ಪ್ರಭಾವ ನಮ್ಮ ಮನೆಯಲ್ಲಿ ಆಗಿ, ಅದರಿಂದಾಗಿ ಸಂಜೆ ಕೀರ್ತನೆ, ಭಜನೆ ಮಾಡುವ ಪದ್ಧತಿ ಜಾರಿಗೆ ಬಂದಿರಬೇಕು. ಹಾಗಾಗಿ, ನಮ್ಮ ಹಳ್ಳಿ ಗೌರಾರಂನಲ್ಲಿ ಪ್ರತಿ ಮನೆಯಲ್ಲೂ ಆ ರೀತಿ ಹಾಡುವ ಪರಂಪರೆ ಜೀವಂತಗೊಂಡಿರಬೇಕು. ಹೀಗೆ ಲಯವೆಂಬುದು ನಮ್ಮ ‘ಮನೆ’ ಮತ್ತು ‘ಮನ’ ಹೊಕ್ಕಿರುವ ಸಾಧ್ಯತೆ ಇದೆ. ಇದು ಜನರ ದೈನಂದಿನ ಕ್ರಿಯೆಗಳೊಂದಿಗೆ ಸಮ್ಮಿಳಿತವಾದ್ದರಿಂದ, ಅವರು ನುಡಿಯುವ ಪದವನ್ನು ಬರೆದಿಡುವ ಅಗತ್ಯ ಇಲ್ಲ. ಮತ್ತು ಇದು ಶಿಷ್ಟತೆಯನ್ನು ಮೀರಿದ್ದು ಅಂತ ನನ್ನ ಅನಿಸಿಕೆ. ಇದೇ ನನ್ನ ಜಾಡು ಆದ್ದರಿಂದ ನಾನು ಈ ಪರಂಪರೆಯವನು.

ನೀವು ವಿದ್ಯಾರ್ಥಿ ದೆಸೆಯಿಂದಲೂ ಎಡಪಂಥೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡವರು. ಆದರೆ, ನಿಮ್ಮ ಕಾವ್ಯ ರಾಜಕೀಯ ತತ್ವವನ್ನಷ್ಟೇ ಹೇಳುವುದಿಲ್ಲ. ಅದರಾಚೆಗಿನ ಬದುಕಿನ ಸರಳತೆಯನ್ನು ಸಿದ್ಧಾಂತದ ಚೌಕಟ್ಟುಗಳನ್ನೂ ಮೀರಿ, ಬದುಕಿನ ಮೌಲ್ಯದಂತೆ ಅದು ಗೋಚರಿಸುತ್ತದೆ. ಇದು ಹೇಗೆ ಸಾಧ್ಯವಾಯಿತು? 
ನೋಡ್ರೀ, ಜಗತ್ತಿನಲ್ಲಿ ಶ್ರಮ ಸಂಸ್ಕೃತಿಯ ಬಗ್ಗೆ ಹೇಳುವ ಪ್ರತಿ ದಾರ್ಶನಿಕನೂ ಒಂದರ್ಥದಲ್ಲಿ ಸಾಮಾನ್ಯ ಜನವರ್ಗದ ಪರವಾದ ರಾಜಕೀಯ ತತ್ವವನ್ನೇ ಹೇಳುತ್ತಾನೆ. ಈಗ, ಬಸವಣ್ಣ, ಅಕ್ಕಮಹಾದೇವಿ, ವೇಮನ, ಸರ್ವಜ್ಞ, ಅನ್ನಮಯ್ಯ, ತ್ಯಾಗರಾಜರು, ಶೇಷಪ್ಪ ಕವಿ, ಕಾಲ ಜ್ಞಾನಿ ವೀರಬ್ರಹ್ಮಂ, ದುನ್ನ ಈದ್ದಾಸು, ವೇಪೂರಿ ಹನುಮದಾಸು, ವೆಂಕಟದಾಸುರಂತಹ ಅನೇಕರು ಹೇಳಿದ್ದೇನು? ನಿನ್ನೊಂದಿಗೆ ಬದುಕುವವನಿಗೆ ಕೆಟ್ಟದ್ದನ್ನು ಬಯಸಬೇಡ. ಇದನ್ನೇ ಮಾರ್ಕ್ಸ್‌, ಗಾಂಧೀಜಿ ಮತ್ತು ಅಂಬೇಡ್ಕರ್ ಹೇಳ್ತಾರೆ. ಹಾಗಾಗಿ ನನ್ನ ಅರಿವನ್ನು ವಿಸ್ತರಿಸುವ ಬೆಳಕು ಎಲ್ಲಿಂದ ಬಂದರೇನು? ಆದರೆ, ಅದು ತಲುಪಬೇಕಿರುವ ದಿಕ್ಕಿನ ಬಗ್ಗೆ ಸೃಜನಶೀಲನಾದವನಿಗೆ ತಿಳಿದಿರಬೇಕು. ಈಗ ನಾನು:

ಹಳ್ಳಿ ಕಣ್ಣೀರು ಹಾಕ್ಯಾದೋ ಬಯಲಾಗದ ಸಂಚಿಗೆ  
ನನ್ನ ತಾಯಿ ಬಂಧಿಯಾಗ್ಯಾಳೋ ಬಯಲಾಗದ ಸಂಚಿಗೆ 

ಕುಂಬಾರ ಗಾಲಿಗೆ ಜಾಲಿ ಹಬ್ಬಿತೊ
ಕಂಬಾರ ಕೊಲಿಮಿಗೆ ದೂಳು ಮುತ್ತಿತೊ
ದೊಡ್ಡ ಬಾಲಿಸು ಲಡ್ಡು ಬಿದ್ದಿತೊ
ನೇಕಾರನ ಮಗ್ಗ ನಡುವು ಮುರಿತೊ
ಕುಶಲ ವೃತ್ತಿಯ ಕೈಯಿ ಮುರಿಯಿತಲ್ಲೋ ನನ್ನೂರಿನ್ಯಾಗ
ಗ್ರಾಮ ಸ್ವರಾಜ್ಯ ಗಂಗೆ ಸೇರಿತಲ್ಲೋ ನನ್ನೂರಿನ್ಯಾಗ
(ಪಲ್ಲೇ ಕನ್ನೀರು ಪೆಡುತುಂದೋ: ರೇಲ ಪೂತಲು)

ಅಂತ ಬರೆದು ಹಾಡೋಕೆ, ಯಾವ ಸಿದ್ಧಾಂತದ ತರಬೇತಿ ಬೇಕು ಹೇಳಿ? ನನ್ನ ಕಣ್ಣೆದುರಿನ ಕ್ಷಣಕ್ಕೆ ಮಿಡಿಯದ ರಚನೆ ಈ ಕಾಲದ್ದು ಆಗಲಾರದು. ಅದಕ್ಕೆ ಒಬ್ಬ ಕವಿ ತನಗೆ ತಾನೇ ಚೌಕಟ್ಟುಗಳನ್ನು ಹಾಕಿಕೊಳ್ಳಬಾರದು. ತಂಬೂರಿ ಮೀಟಿದಾಗ ತಾನು ಆ ಶಬ್ದ ಹೊರಡಿಸಲ್ಲ ಅಂತ ಅದು ಯಾವತ್ತಾದರೂ ಹೇಳ್ತದ? ಇಲ್ಲ. ಹಂಗೆ ಕವಿಯಾದವನು ಪ್ರಕಾರದ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಒಲಿದಂತೆ ಹಾಡುತ್ತ ನಡೆಯಬೇಕು ಅಷ್ಟೆ.

ದಾಸ, ಸೂಫಿ, ಸಂತ ಮತ್ತು ಕೀರ್ತನಕಾರರ ಪರಂಪರೆಯಿಂದ ಪ್ರೇರಿತವಾದ ನಿಮ್ಮ ರಚನೆಗಳು, ಅನುಭಾವಕ್ಕಿಂತ ದೈನಂದಿನ ದಂದುಗಳಿಗೆ ಹೆಚ್ಚು ಮಿಡಿಯುತ್ತವೆ. ಯಾಕೆ? 
ಅನುಭಾವ ಅನ್ನೋದು ದೊಡ್ಡ ಪದ. ಆಳುವವನಿಗೆ ಇದ್ದಂಗೆ, ಉಳುವವನಿಗೂ ತನ್ನ ಇಷ್ಟದೈವವನ್ನು ಆರಾಧಿಸುವ ಮಾರ್ಗ ಒಂದಿರುತ್ತದೆ. ಅದು ಗುಡಿಯೊಳಗೆ ಗಂಟೆ ಬಾರಿಸಿಕೊಂಡು ಕೂಡುವ ಆಚಾರ ಆಗಬೇಕಿಲ್ಲ. ಹಾಗೆಯೇ, ದುಡಿಯುವವನು ತನಗೆ ಗಾಳಿ, ನೀರು, ಅನ್ನ, ಸಂಕಟ ಮರೆಯಲು ಆಕಾಶ ಕೊಟ್ಟ ಪ್ರಕೃತಿಯನ್ನು ಹೊಗಳುತ್ತಾನೆ. ಖುಷಿಗೆ ಜಾತ್ರೆ ಮಾಡಿಕೊಳ್ತಾನೆ, ಹಬ್ಬ ಆಚರಿಸುತ್ತಾನೆ. ಅದೇ ನಿಸರ್ಗ, ಸರಿಯಾಗಿ ಮಳೆ ಸುರಿಯದಿದ್ದರೆ ಮುನಿಸಿಕೊಳ್ಳುತ್ತಾನೆ. ಹೀಗೆ ಬದುಕಿನಲ್ಲಿ ಇಷ್ಟು ಏರಿಳಿತಗಳು ಇರಬೇಕಾದರೆ, ಇವುಗಳನ್ನು ಕಾವ್ಯದ ವಸ್ತುವಾಗಿ ಯಾಕೆ ಬಳಸಬಾರದು? ಅದಕ್ಕೆ ನನ್ನ ಗೀತೆಗಳಲ್ಲಿ ಹಳ್ಳಿಗಾಡಿನ ಚಿತ್ರಣ ಮತ್ತೆ ಮತ್ತೆ ಬರುತ್ತದೆ. ಸ್ವತಃ ನನ್ನ ತಂದೆ ಗೋರಟಿ ನರಸಿಂಹ ಮತ್ತು ತಾಯಿ ಈರಮ್ಮ ಕೂಡ ದಿನದ ಹೊತ್ತು ಹೊಲಗಳಲ್ಲಿ ನಡು ಬಗ್ಗಿಸಿ ದುಡಿಯುವಾಗ, ಸಂಜೆ ಅಂಗಳಕೆ ಬಿದ್ದ ಬೆಳದಿಂಗಳಲ್ಲಿ ಹಾಡು ಕಟ್ಟಿ ಹಾಡುವ ವಾಡಿಕೆ ಇದ್ದುದರಿಂದ ಅವರ ಬದುಕೇ ನನ್ನ ಅನೇಕ ಕವಿತೆಗಳಲ್ಲಿ ವಸ್ತುವಾಗಿ ಬರ್ತದ. ಈಗ, ನಾನು:

ಬಾರೆಹಣ್ಣು ಸಿಹಿಹಾಂಗ ಲಚ್ಚುಮಮ್ಮೊ
ನಿನ ಕಂಠಯಂಥ ಮಧುರವಮ್ಮ ಲಚ್ಚುಮಮ್ಮ
ಹರಿವ ಹಳ್ಳದ ಅಲೆಯ ಮ್ಯಾಲೆ
ತುಂಬು ತಿಂಗಳು ಉದುರಿದಂಗ
ಊರೊ ಊಟೆ ಚಿಲುಮೆಯಾಗ 

ತಿಳಿನೀರು ತುಳುಕು ಚೆಲ್ಲಿದಾಂಗ
ಬೆಳ್ಳಿ ಮೆರುಗಿನ ನಗುವು ನಿಂದು ಲಚ್ಚುಮಮ್ಮೊ
ನಿನ ಮೊಗವು ಎಂಥ ಚೆಂದವಮ್ಮ ಲಚ್ಚುಮಮ್ಮ

ಅಟ್ಟಯೇರಿ ಕೂಗಿ ಕರೆದರೆ   
ಬೇಲಿ ಮೇಕೆ ಸುತ್ತುವರೆದವು 
ನಿನ ಎದೆಯ ದನಿಗೆ ಎಳೆಕರುವು 
ಒಡಲು ಸೇರಿ ಮುದುಡಿ ಕೂತವು
ಬಿಳಿಚಿದ ಆ ತೊಗರಿ ಹೊಲವು ಲಚ್ಚುಮಮ್ಮೊ

ನಿನ ಹಾಡು ಕೇಳಿ ಹೂವು ಬಿಡುವುದು ಲಚ್ಚುಮಮ್ಮ (ಕಂಚರೇಗಿ ತೀಪವೋಲೆ; ರೇಲ ಪೂತಲು)

ಅಂತ ಬರೆಯಬೇಕಾದರೆ, ಮೊದಲು ನನಗೆ ಬಾರೆಹಣ್ಣು ಅಂದರೆ ಏನು ಅಂತ ಗೊತ್ತಿರಬೇಕು, ಆಮೇಲೆ ಅದರ ರುಚಿ ಕಂಡಿರಬೇಕು, ಇಲ್ಲವಾದರೆ ‘ಬಿಳಿಚಿದ ಆ ತೊಗರಿ ಹೊಲವು, ನಿನ ಹಾಡು ಕೇಳಿ ಹೂವು ಬಿಡುವುದು’ ಅಂತ ಊಹಿಸಲು ಹೇಗೆ ಸಾಧ್ಯ?

ನೀವು ‘ವಾನೊಚ್ಛನಮ್ಮಾ’ (ಮಳೆ ಬಂತಮ್ಮಾ), ‘ಪಾಟ ಪಾಡೇಟಿ ಪಿಲ್ಲಲು’ (ಹಾಡು ಹಾಡುವ ಹುಡುಗರು), ‘ಕಂಚರೇಗಿ ತೀಪಿವೋಲೆ’ (ಮುಳ್ಳು ಬಾರೆ ಸಿಹಿ ಹಂಗ), ‘ಸಂಚಾರ’, ‘ಸಂತೆ’, ‘ಗಲ್ಲಿ ಸಿನ್ನದಿ’ (ಗಲ್ಲಿ ಸಣ್ಣದು), ಮತ್ತು ‘ಪಲ್ಲೇ ಕಣ್ಣೀರು ಪೆಡುತುಂದೋ’ (ಹಳ್ಳಿ ಕಣ್ಣೀರು ಹಾಕಿದೆಯೋ) ನಂತಹ ಹಾಡು ಅಥವಾ ಕಥನ ಕವನ ರಚಿಸಬೇಕಾದರೆ, ಭಾಷೆ ಬಳಕೆಯ ಬಗ್ಗೆ ಯಾವ ತರಹದ ತಯಾರಿ ಮಾಡಿಕೊಂಡಿದ್ದಿರಿ? 
ಜನದನಿಯ ಕವಿತೆ ರಚಿಸಲು ಜನರ ಭಾಷೆಯನ್ನೇ ಬಳಸಬೇಕಾಗುತ್ತದೆ. ಭಾಷೆಯೆಂಬುದು ಕವಿತೆಯಲ್ಲಿ ಹದಗೊಂಡ ಮಣ್ಣಿನಂತೆ ಒದಗಿ ಬರಬೇಕು. ಪ್ರಜ್ಞಾಪೂರ್ವಕವಾಗಿ ಇದನ್ನು ಮಾಡೋಕೆ ಆಗಲ್ಲ. ಬಳಸುವ ಪ್ರತಿ ಪದದಲ್ಲೂ ಸಾಮಾಜಿಕ ದೃಷ್ಟಿಕೋನ, ಸರಳ ತತ್ವ ಇದ್ದರೆ ಅದು ತಾನಾಗಿಯೇ ಒಲಿಯುತ್ತದೆ. ಈಗ ಸರಳತೆ ಬಗ್ಗೆ ಹೇಳೋಕೆ ಕಠಿಣವಾದ ಪದ ಯಾಕೆ ಬಳಸಬೇಕು? ವಿಶೇಷವಾಗಿ ತಳ ಸಮುದಾಯಗಳ ಬದುಕಿನ ರೀತಿ-ರಿವಾಜುಗಳನ್ನು ಕವಿತೆಯಾಗಿಸಿ ಹೇಳಲು, ನಾನು ಮಧ್ಯಕಾಲೀನ ತೆಲುಗೋ ಅಥವಾ ಇಂದಿನ ಎಸ್ಸೆಮ್ಮೆಸ್ ಭಾಷೆಯನ್ನೋ ಬಳಸಲು ಆಗದು.

‘ಪಲ್ಲೆ ಕನ್ನೀರು ಪೆಡುತುಂದೋ ಕನಿಪಿಂಚನಿ ಕುಟ್ರಲ; ನಾ ತಲ್ಲಿ ಬಂಧಿ ಅಯಿಪೋತುಂದೋ ಕನಿಪಿಂಚನಿ ಕುಟ್ರಲ’ ಅಂತ ಹಾಡುವಾಗ ಇದು ಬರೀ ಛಿದ್ರಗೊಂಡ ಭಾರತೀಯ ಸಮಾಜದ ಕರಕುಶಲ ವೃತ್ತಿಗಳ ಬಗ್ಗೆಯಷ್ಟೇ ಹೇಳುವುದಿಲ್ಲ. ಅದರಾಚೆಗೆ ಆ ವೃತ್ತಿಗಳನ್ನು ನಂಬಿಕೊಂಡ ಕಪ್ಪು- ಬಿಳುಪಿನ ಭಾವಚಿತ್ರದಂತಹ ಸಮುದಾಯಗಳ ಕುರಿತು ಹೇಳುತ್ತದೆ. ಇದನ್ನು ಹೇಳಲು ನಾನು ವರ್ಣರಂಜಿತ ಉಪಮೆ ತರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT