ಬುಧವಾರ, ಮಾರ್ಚ್ 3, 2021
29 °C
ಆರೋಪಿ ನವೀನ್‌ ನೀಡಿದ ಸುಳಿವು, ‘ಮೊಬೈಲ್‌ ಸರ್ಕೀಟ್‌’ ಹಿಂದೆ ಬಿದ್ದ ಎಸ್‌ಐಟಿ

ಸ್ಫೋಟಕ್ಕೂ ಸಂಚು ರೂಪಿಸುತ್ತಿದ್ದ ಆರೋಪಿಗಳು?

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಡಿ ಬಂಧಿಸಲಾಗಿರುವ ಆರೋಪಿಗಳು, ‘ಮೊಬೈಲ್‌ ಸರ್ಕೀಟ್‌’ ಬಳಸಿ ಬಾಂಬ್‌ ಸ್ಫೋಟಕ್ಕೂ ಸಂಚು ರೂಪಿಸುತ್ತಿದ್ದರು ಎಂಬ ಬಗ್ಗೆ ಎಸ್‌ಐಟಿ ಅನುಮಾನ ವ್ಯಕ್ತಪಡಿಸಿದೆ.

ಪ್ರಕರಣದಲ್ಲಿ ಮೊದಲಿಗೆ ಬಂಧಿಸಲಾಗಿದ್ದ ಮದ್ದೂರಿನ ಕೆ.ಟಿ.ನವೀನ್‌ಕುಮಾರ್‌ ಅಲಿಯಾಸ್‌ ಹೊಟ್ಟೆ ಮಂಜ ನೀಡಿದ್ದ ಹೇಳಿಕೆ, ಸ್ಫೋಟದ ಸಂಚಿನ ಬಗ್ಗೆ ಎಸ್‌ಐಟಿಗೆ ಸುಳಿವು ನೀಡಿದೆ. ಅದರ ಆಧಾರದಲ್ಲಿ ಅಧಿಕಾರಿಗಳು, ಸಂಚಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. 

‘ಗೌರಿ ಹತ್ಯೆಯ ಬಳಿಕ ಕೆ.ಟಿ.ನವೀನ್‌ಕುಮಾರ್‌ನನ್ನು ಭೇಟಿ ಆಗಿದ್ದ ಪ್ರವೀಣ್ ಹಾಗೂ ಇತರೆ ಮೂವರು (ಮಹಾರಾಷ್ಟ್ರದವರು ಎನ್ನಲಾದ), ಮೊಬೈಲ್‌ ಸರ್ಕೀಟ್‌ ಬಗ್ಗೆ ವಿಚಾರಿಸಿದ್ದಾರೆ. ಅಂಥ ಸರ್ಕೀಟ್‌ ಬಳಸಿ ಬಾಂಬ್‌
ಸ್ಫೋಟಿಸುವ ಉದ್ದೇಶ ಅವರದ್ದಾಗಿರಬಹುದು ಎಂಬ ಶಂಕೆ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಮೊಬೈಲ್ ಸರ್ಕೀಟ್‌ ಮೂಲಕ ದುಷ್ಕರ್ಮಿಗಳು, ಬಾಂಬ್‌ ಸ್ಫೋಟಿಸಿದ ಪ್ರಕರಣಗಳು ಈ ಹಿಂದೆ ನಡೆದಿವೆ. ಅದೇ ಮಾದರಿಯಲ್ಲೇ ಆರೋಪಿಗಳು, ಸ್ಫೋಟ ಉಂಟು ಮಾಡಲು ಪ್ರಯತ್ನಿಸುತ್ತಿದ್ದರು ಎಂಬ ಮಾಹಿತಿ ಇದೆ. ಆದರೆ, ಎಲ್ಲಿ ಹಾಗೂ ಯಾವಾಗ ಸ್ಫೋಟ ಮಾಡಲು ಸಂಚು ರೂಪಿಸಿದ್ದರುಎಂಬುದು ಗೊತ್ತಾಗಿಲ್ಲ. ಆರೋಪಿಗಳೂ ಬಾಯ್ಬಿಡುತ್ತಿಲ್ಲ. ನಿಖರ ಮಾಹಿತಿ ತಿಳಿಯುವುದಕ್ಕಾಗಿ, ಅಂದು ಪ್ರವೀಣ್‌ ಜತೆಗಿದ್ದ ಮೂವರು ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.

ಸರ್ಕೀಟ್‌ ತಯಾರಿಸಲು ಅನಿಲ್‌ಗೆ ಹೇಳಿದ್ದರು: ‘2018ರ ಜನವರಿ 13ರಂದು ನವೀನ್‌ಕುಮಾರ್‌ನನ್ನು ಪ್ರವೀಣ್‌ ಹಾಗೂ ಮೂವರು, ಮದ್ದೂರಿನಲ್ಲಿ ಭೇಟಿ ಆಗಿದ್ದರು. ಅದೇ ವೇಳೆ ನವೀನ್‌ಕುಮಾರ್‌ನ ಸ್ನೇಹಿತ ಅನಿಲ್‌ಕುಮಾರ್‌ನನ್ನು ಮಾತನಾಡಿಸಿದ್ದ ಆ ಮೂವರು, ಮೊಬೈಲ್‌ ಸರ್ಕೀಟ್‌ ಬಗ್ಗೆ ವಿಚಾರಿಸಿದ್ದರು. ಅದನ್ನು ತಯಾರಿಸಲೂ ಹೇಳಿದ್ದರು’ ಎಂದು ಅಧಿಕಾರಿ ವಿವರಿಸಿದರು.

‘ನಾವಿದ್ದ ಫಾರ್ಮ್‌ಹೌಸ್‌ಗೆ ಅನಿಲ್‌ಕುಮಾರ್‌ ಬಂದಿದ್ದ. ಆತನನ್ನು ನಾಲ್ವರಿಗೂ ಪರಿಚಯ ಮಾಡಿಕೊಟ್ಟಿದ್ದೆ. ಅನಿಲ್‌ನಕುಟುಂಬದ ಬಗ್ಗೆ ವಿಚಾರಿಸಿದ್ದ ಮೂವರು, ಆತನ ಕೆಲಸದ ಬಗ್ಗೆ ಕೇಳಿದ್ದರು. ಆತ, ‘ಶ್ರೀರಂಗಪಟ್ಟಣದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದೇನೆ. ಮೊಬೈಲ್ ಮಾರಾಟ ಹಾಗೂ ದುರಸ್ತಿ ಮಾಡುತ್ತೇನೆ’ ಎಂದಿದ್ದ.’

‘ಆಗ ಮೂವರು, ‘ಬೋರ್ಡ್‌ ರೆಡಿ ಮಾಡೋಕೆ ಬರುತ್ತಾ?’ ಎಂದು ವಿಚಾರಿಸಿದ್ದರು. ಅನಿಲ್, ‘ಯಾವ ಬೋರ್ಡ್ ಮಾಡಬೇಕು’ ಎಂದು ಕೇಳಿದ್ದರು. ‘ಬೋರ್ಡ್‌ನಲ್ಲಿ ಸರ್ಕೀಟ್‌ ಮಾಡೋಕೆ ಬರುತ್ತಾ’ ಎಂದು ವಿಚಾರಿಸಿದ್ದರು. ’ಅದೆಲ್ಲ ಬರುವುದಿಲ್ಲ. ಚಿಕ್ಕಪುಟ್ಟ ಡಿಸ್‌ಪ್ಲೇ ರೆಡಿ ಮಾಡುತ್ತೇನೆ. ಬೇಕಾದರೆ ಸರ್ಕೀಟ್ ರೆಡಿ ಮಾಡುವ ಕೆಲಸ ಕಲಿಯುತ್ತೇನೆ’ ಎಂದಷ್ಟೇ ಅನಿಲ್‌ ಹೇಳಿದ್ದ’ ಎಂದು ನವೀನ್‌ಕುಮಾರ್‌ ತನ್ನ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಅಧಿಕಾರಿ ವಿವರಿಸಿದರು. 

ಎರಡು ದಿನಗಳ ಬಳಿಕ ಆರೋಪಿ ನ್ಯಾಯಾಲಯಕ್ಕೆ: ಪ್ರಕರಣದಡಿ ಬಂಧಿಸಲಾಗಿದ್ದ ವಿಜಯಪುರದ ಪರಶುರಾಮ ವಾಘ್ಮೋರೆಯ ಎಸ್‌ಐಟಿ ಕಸ್ಟಡಿ ಅವಧಿ ಸೋಮವಾರ (ಜೂನ್ 25) ಮುಕ್ತಾಯವಾಗಲಿದೆ. ಅದಕ್ಕೂ ಮುನ್ನವೇ ಎಸ್‌ಐಟಿ ಅಧಿಕಾರಿಗಳು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

‘ಬೆಳಗಾವಿ, ವಿಜಯಪುರ, ಮಹಾರಾಷ್ಟ್ರಕ್ಕೆ ಆರೋಪಿಯನ್ನು ಕರೆದೊಯ್ದಿದ್ದೆವು. ಕೆಲ ಮಾಹಿತಿ ಖಚಿತಪಡಿಸಿಕೊಂಡು ವಾಪಸ್‌ ಕರೆತಂದಿದ್ದೇವೆ. ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ’ ಎಂದು ಅಧಿಕಾರಿ ಹೇಳಿದರು.

ಏನಿದು ‘ಮೊಬೈಲ್‌ ಸರ್ಕೀಟ್‌’

ಕರೆಗಳನ್ನು ಬಳಸಿ ಬಾಂಬ್ ಸ್ಫೋಟಿಸಲು ‘ಮೊಬೈಲ್‌ ಸರ್ಕೀಟ್‌’ ಬಳಸಲಾಗುತ್ತದೆ. ಸಾಮಾನ್ಯವಾಗಿ ಟಿ.ವಿ ಹಾಗೂ ಕಂಪ್ಯೂಟರ್‌ನ ಬೋರ್ಡ್‌ ಮಾದರಿಯಲ್ಲೇ ಈ ‘ಮೊಬೈಲ್‌ ಸರ್ಕೀಟ್‌’  ಇರುತ್ತದೆ.

‘ಸಿಮ್‌ ಕಾರ್ಡ್‌ ಮೂಲಕ ಕಾರ್ಯನಿರ್ವಹಿಸುವ ಸರ್ಕೀಟ್‌ನ್ನು ಯಾವುದೇ ಸ್ಥಳದಲ್ಲಾದರೂ ಇರಿಸಬಹುದು. ದೂರದಿಂದಲೇ ಆ ಸಿಮ್‌ಕಾರ್ಡ್‌ ಸಂಖ್ಯೆಗೆ ಕರೆ ಮಾಡಿ, ಕಡಿತಗೊಳಿಸುತ್ತಿದ್ದಂತೆ ಬಾಂಬ್‌ ಸ್ಫೋಟ ಆಗುತ್ತದೆ’ ಎಂದು ಎಸ್‌ಐಟಿ ಅಧಿಕಾರಿ ಮಾಹಿತಿ ನೀಡಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು