‘ಕುಲಾಂತರಿ ಬಿತ್ತನೆ ಬೀಜದ ಮೇಲೆ ನಿಗಾ ವಹಿಸಿ’

ಶನಿವಾರ, ಮೇ 25, 2019
32 °C
ಮುಖ್ಯಮಂತ್ರಿಗೆ ಪರಿಸರವಾದಿಗಳ ಒತ್ತಾಯ

‘ಕುಲಾಂತರಿ ಬಿತ್ತನೆ ಬೀಜದ ಮೇಲೆ ನಿಗಾ ವಹಿಸಿ’

Published:
Updated:

ಬೆಂಗಳೂರು: ಹರಿಯಾಣದಲ್ಲಿ ಈಚೆಗೆ ಕಾನೂನು ಬಾಹಿರವಾಗಿ ಬಿ.ಟಿ ಬದನೆ ಬೆಳೆದು ವಿವಾದ ಸೃಷ್ಟಿಯಾಗಿರುವ ಬೆನ್ನಲ್ಲೇ, ರಾಜ್ಯದಲ್ಲಿ ಕುಲಾಂತರಿ ಬೆಳೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದು ಎಂಬ ಕೂಗು ಎದ್ದಿದೆ.

‘ದೇಶದಲ್ಲಿ ಹತ್ತಿ ಬೆಳೆಯಲ್ಲಿ ಕುಲಾಂತರಿ ತಂತ್ರಜ್ಞಾನ ಬಳಸಲು ಅವಕಾಶ ನೀಡಲಾಗಿದೆ. ಆದರೆ, ಆಹಾರ ಬೆಳೆಗಳಲ್ಲಿ ಕುಲಾಂತರಿ ತಂತ್ರಜ್ಞಾನ ಬಳಕೆಗೆ ಇದುವರೆಗೂ ಅವಕಾಶ ಕಲ್ಪಿಸಿಲ್ಲ. ಬಿ.ಟಿ ಆಹಾರ ಬೆಳೆಗಳ (ಬ್ಯಾಸಿಲ್ಲಸ್‌ ಥುರಿಂಜಿಯೆನ್ಸಿಸ್‌ ಬ್ಯಾಕ್ಟೀರಿಯಾ ತಳಿ ಸೂತ್ರ ಬಳಸಿ ತಯಾರಿಸುವ ಕುಲಾಂತರಿ ತಳಿಗಳು) ಬಿತ್ತನೆ ಬೀಜಗಳು ಯಾವುದೇ ಕಾರಣಕ್ಕೂ ರಾಜ್ಯದೊಳಗೆ ಬರದಂತೆ ನೋಡಿಕೊಳ್ಳಬೇಕು. ರಾಜ್ಯದಲ್ಲಿ ಉತ್ಪಾದನೆಯಾಗುವ, ಮಾರಾಟವಾಗುವ ಹಾಗೂ ಇತರ ಪ್ರದೇಶಗಳಿಂದ ರಾಜ್ಯಕ್ಕೆ ಬರುವ ಬಿತ್ತನೆ ಬೀಜಗಳ ಮೇಲೂ ನಿಗಾ ಇಡಬೇಕು’ ಎಂದು ‘ಎಂ.ಡಿ.ಎನ್‌ ಮಾರ್ಗ’ ಸಂಘಟನೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಆಗ್ರಹಿಸಿದೆ.

‘ರಾಜ್ಯದ ರೈತರು ಮತ್ತು ಕೃಷಿ ಪರಿಸರವನ್ನು ಕುಲಾಂತರಿ ಬೆಳೆಗಳ ಅವಾಂತರದಿಂದ ರಕ್ಷಿಸಬೇಕಿದೆ. ಹಾಗಾಗಿ ಸರ್ಕಾರ ಕುಲಾಂತರಿ ಬಗ್ಗೆ ಸ್ಪಷ್ಟ ನಿಲುವು ತಳೆಯಬೇಕು. ಈ ಬಗ್ಗೆ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಸಂಘಟನೆ ಕೋರಿದೆ.

‘ಕುಲಾಂತರಿ ಬೆಳೆಗಳಿಗೆ ಅವಕಾಶ ನೀಡಿದರೆ ರೈತರು ಬಿತ್ತನೆ ಬೀಜದ ಮೇಲಿನ ಸ್ವಾತಂತ್ರ್ಯ ಕಳೆದುಕೊಳ್ಳಲಿದ್ದಾರೆ. ಕುಲಾಂತರಿ ಆಹಾರ ಬೆಳೆಗಳನ್ನು ಬಳಸುವುದರಿಂದ ಮನುಷ್ಯರು ಹಾಗೂ ಪಶುಪಕ್ಷಿಗಳ ಆರೋಗ್ಯದ ಮೇಲೆ ಏನೆಲ್ಲ ದುಷ್ಪರಿಣಾಮ ಆಗುತ್ತದೆ ಎಂಬ ಬಗ್ಗೆ ಅಧ್ಯಯನಗಳು ನಡೆದಿಲ್ಲ. ದೀರ್ಘಕಾಲದ ಅಧ್ಯಯನ ನಡೆಸದೆಯೇ ಇದಕ್ಕೆ ಅವಕಾಶ ನೀಡುವುದು ಸರಿಯಲ್ಲ’ ಎನ್ನುತ್ತಾರೆ ಪರಿಸರ ವಿಜ್ಞಾನಿ ನಾಗೇಶ ಹೆಗಡೆ.

‘ರಾಜ್ಯದಲ್ಲಿ ಆಹಾರ ಬೆಳೆಗಳಲ್ಲಿ ಅಕ್ರಮವಾಗಿ ಕುಲಾಂತರಿ ತಂತ್ರಜ್ಞಾನವನ್ನು ಬಳಸುವ ಪ್ರಯತ್ನ ಎರಡು ಬಾರಿ ನಡೆದಿದ್ದವು. ಕೆಲವು ವರ್ಷಗಳ ಹಿಂದೆ ದೊಡ್ಡಬಳ್ಳಾಪುರ ಬಳಿಯ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕುಲಾಂತರಿ ಭತ್ತ ಬೆಳೆಯುವ ಪ್ರಯತ್ನ ನಡೆದಿತ್ತು. ಇದಕ್ಕೆ ಪರಿಸರ ಹೋರಾಟಗಾರರಿಂದ ವಿರೋಧ ವ್ಯಕ್ತವಾದ ಬಳಿಕ ವಿಜ್ಞಾನ ಕೇಂದ್ರದವರು ಕ್ಷಮೆ ಯಾಚಿಸಿದ್ದರು. ವಿಜಯಪುರ ಜಿಲ್ಲೆಯಲ್ಲಿಯೂ ಇಂತಹ ಪ್ರಯತ್ನ ನಡೆದಿದ್ದು, ನಂತರ ಆ ಕಂಪನಿ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಯಿತು. ಕುಲಾಂತರಿ ತಂತ್ರಜ್ಞಾನ ಮಂಜೂರಾತಿ ಸಮಿತಿ (ಜಿಇಎಸಿ) ಹಾಗೂ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಈ ಪ್ರಕರಣ ಕುಲಾಂತರಿ ಸಂಬಂಧಿ ಕಾನೂನು ಬಿಗಿಗೊಳಿಸಲು ನೆರವಾಗಿತ್ತು’ ಎನ್ನುತ್ತಾರೆ ಎಂ.ಡಿ.ಎನ್‌ ಮಾರ್ಗದ ಸಂಚಾಲಕ ಕೆ.ಎನ್‌.ನಾಗೇಶ್‌.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !