ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರತಿಮ ನಾಟಕಕಾರ, ವಸ್ತುನಿಷ್ಠ ಧೀಮಂತ | ವಿವೇಕ ಶಾನಭಾಗ ಬರಹ

Last Updated 11 ಜೂನ್ 2019, 4:22 IST
ಅಕ್ಷರ ಗಾತ್ರ

ಗಿರೀಶ ಕಾರ್ನಾಡರೊಡನೆಯ ನನ್ನ ಮೊದಲ ಭೇಟಿ ಯಾವಾಗ ಮತ್ತು ಹೇಗಾಯಿತು ಎಂಬುದು ನನಗೆ ನೆನಪಿಲ್ಲ. ಮನಸ್ಸಿನಲ್ಲಾಗಲೇ ಹಲವು ಬಾರಿ ಸಂಧಿಸಿದವರ ಮೊದಲ ಭೇಟಿಯನ್ನು ನೆನಪಿಟ್ಟುಕೊಳ್ಳುವುದು ಕಷ್ಟವೇ. ಮುಖತಃ ಪರಿಚಯವಾಗುವ ಮೊದಲೇ ನನಗೆ ಕಾರ್ನಾಡರ ಬಗ್ಗೆ ಬಹಳ ಕೇಳಿ ಗೊತ್ತಿತ್ತು. ಶಿರಸಿಯ ಅವರ ಶಾಲಾದಿನಗಳಲ್ಲಿ ಅವರು ನನ್ನ ಅಮ್ಮನ ಸಹಪಾಠಿಯಾಗಿದ್ದರು. ಶಾಲೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳಲ್ಲೂ - ನಾಟಕ, ಚರ್ಚೆ, ಓದು ಹೀಗೆ ಪ್ರತಿಯೊಂದರಲ್ಲೂ ಮುಂದೆ ನಿಂತು ಗೆದ್ದು ಬರುವ ಅವರ ಗುಣದಿಂದಾಗಿ ಅವರಿಗೆ ಕೊಂಕಣಿಯಲ್ಲಿ ‘ಆಂಬ್ಯಾ ತಾಳೊ’ (ಎಂದರೆ ಮಾವಿನ ತಳಿರು) ಎಂದು ಹೆಸರಿಟ್ಟಿದ್ದರಂತೆ. ಮಾವಿನ ತಳಿರು ಎಲ್ಲ ಶುಭಸಂದರ್ಭಗಳಲ್ಲಿ ಹಾಜರಿರುವಂತೆ ಇವರೂ ಮುಂದಾಳತ್ವ ವಹಿಸುತ್ತಿದ್ದರೆಂಬ ಪ್ರಶಂಸಾತ್ಮಕ ಅಭಿಮಾನದಿಂದ ಇಟ್ಟ ಹೆಸರದು.

ಜೀವನದುದ್ದಕ್ಕೂ ತೊಡಗಿಸಿಕೊಂಡ ಕ್ಷೇತ್ರಗಳಲ್ಲೆಲ್ಲ ಕಾರ್ನಾಡ ಯಶಸ್ವಿಯಾದರು. ಭಾರತೀಯ ರಂಗಭೂಮಿಯ ಅಪ್ರತಿಮ ನಾಟಕಕಾರ, ಪುಣೆಯ ಫಿಲ್ಮ್ ಇನ್‍ಸ್ಟಿಟ್ಯೂಟಿನ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ, ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ, ಹೋಮಿ ಭಾಭಾ ಫೆಲೋ, ಕರ್ನಾಟಕ ನಾಟಕ ಅಕಾಡೆಯ ಅಧ್ಯಕ್ಷ, ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ– ಇದೆಲ್ಲವನ್ನೂ ಅವರು ಮೂವತ್ತರ ಆಸುಪಾಸಿನ ವಯಸ್ಸಿನಲ್ಲಿಯೇ ಸಾಧಿಸಿದ್ದರು. ಅವರ ತಾರುಣ್ಯದಲ್ಲಿ ಅವರಷ್ಟು ದೇಶದುದ್ದಕ್ಕೂ ಪ್ರಖ್ಯಾತರಾದ, ಗ್ಲಾಮರಸ್ ಆದ ಲೇಖಕ ಇನ್ನೊಬ್ಬರಿರಲಿಕ್ಕಿಲ್ಲ. ಈಗಲೂ ಗಿರೀಶ ಕಾರ್ನಾಡ ಎಂದರೆ ಕನ್ನಡದ ಆಚೆಗೆ ನಮ್ಮ ಸಾಂಸ್ಕೃತಿಕ ಸಾಧನೆಯನ್ನು ಅಭಿಮಾನದಿಂದ ಹೇಳಿಕೊಳ್ಳಬಹುದಾದ ಪ್ರಮುಖ ಹೆಸರುಗಳಲ್ಲಿ ಒಂದು.

ಪುತ್ರಿ ಶಾಲ್ಮಲಿ ರಾಧಾ ಅವರು ಅಂತಿಮ ನಮನ ಸಲ್ಲಿಸಿದರು. ಪತ್ನಿ ಸರಸ್ವತಿ, ಪುತ್ರ ರಘು ಇದ್ದಾರೆ
ಪುತ್ರಿ ಶಾಲ್ಮಲಿ ರಾಧಾ ಅವರು ಅಂತಿಮ ನಮನ ಸಲ್ಲಿಸಿದರು. ಪತ್ನಿ ಸರಸ್ವತಿ, ಪುತ್ರ ರಘು ಇದ್ದಾರೆ

ಮೊನ್ನೆ ಭಾನುವಾರ ರಾತ್ರಿ 9 ಗಂಟೆಗೆ ಕಾರ್ನಾಡರ ಜೊತೆ ಫೋನಿನಲ್ಲಿ ಮಾತನಾಡಿದ್ದೇ ಅವರ ಜೊತೆಯ ಕೊನೆಯ ಮಾತಾಯಿತು. ಅಗತ್ಯಕ್ಕಿಂತ ಹೆಚ್ಚಿನ ಮಾತು, ಕಾಡುಹರಟೆ, ಲೋಕಾಭಿರಾಮ ಅವರ ಸ್ವಭಾವದಲ್ಲಿರಲಿಲ್ಲ. ಮಾತನಾಡಲು ನಿರ್ದಿಷ್ಟ ವಿಷಯ ಇಲ್ಲವಾದರೆ ಅವರ ಜೊತೆ ಮಾತುಕತೆ ಸಾಧ್ಯವೇ ಇಲ್ಲ ಅನ್ನುವಷ್ಟು ಕಠಿಣವಾಗಿ ಅವರು ತಮ್ಮ ಏಕಾಗ್ರತೆಯನ್ನು ಮತ್ತು ಸೃಜನಶೀಲತೆಗೆ ಅವಶ್ಯವಾದ ಏಕಾಂತವನ್ನು ಕೊನೆಯವರೆಗೂ ನಿರ್ವಹಿಸಿದರು. ಇದೇ ಕಾರಣದಿಂದ ನಿಷ್ಠುರತೆಯನ್ನೂ ಗಳಿಸಿಕೊಂಡಿದ್ದರು.

‘ಎಷ್ಟು ಬೇಕೋ ಅಷ್ಟೇ’ ಮಾಡುವುದು ಮತ್ತು ಆ ‘ಅಷ್ಟನ್ನು’ ತಮ್ಮ ಸರ್ವಸ್ವವನ್ನೂ ಧಾರೆಯೆರೆದು ಮಾಡುವುದು ಅವರ ರೀತಿಯಾಗಿತ್ತು. ಜೊತೆಗೆ ಸ್ವವಿಮರ್ಶೆಯ ಉಗ್ರ ವಸ್ತುನಿಷ್ಠತೆ ಅವರಿಗೆ ಸಾಧ್ಯವಾಗಿತ್ತು. ಈ ನಿಲುವನ್ನು ಪ್ರತಿಫಲಿಸುವಂತೆ ಅವರು ತೀರಿಕೊಂಡಾಗಲೂ ಸಹ ತಮ್ಮ ಸಾವಿನ ನಂತರದ ಯಾವ ಕಾರ್ಯಗಳನ್ನೂ ಸಾರ್ವಜನಿಕವಾಗಿ ಮಾಡಕೂಡದೆಂದು ಬಯಸಿದ್ದರು. ಇದನ್ನು ಅವರ ಕುಟುಂಬ ಅಪಾರವಾದ ಒತ್ತಡದ ನಡುವೆಯೂ ನೆರವೇರಿಸಿತು. ಸ್ಮಶಾನಭೂಮಿಗೆ ಅವರ ದೇಹವನ್ನು ಒಯ್ಯುವವರೆಗೂ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರ ಇದ್ದರು. ಜ್ಞಾನಪೀಠ ಪ್ರಶಸ್ತಿ ಸಂದುದಕ್ಕಾಗಿ ಸನ್ಮಾನ ಮಾಡಿಸಿಕೊಳ್ಳದೇ ಇರುವ ಏಕೈಕ ಕನ್ನಡ ಲೇಖಕ ಅವರಿರಬಹುದು. ಬಹುಶಃ ಅವರು ಎಂದಿಗೂ ಯಾವ ಸನ್ಮಾನವನ್ನೂ ಮಾಡಿಸಿಕೊಂಡಿಲ್ಲವೆಂಬುದು ನನ್ನ ಊಹೆ. ಪ್ರಶಸ್ತಿ ಪಡೆಯುವುದೇ ಸಾಧನೆಯಲ್ಲವೆಂಬುದು ಅವರ ನಂಬಿಕೆಯಾಗಿತ್ತು. ಈ ನಂಬಿಕೆಯನ್ನು ಅವರು ಸ್ವತಃ ಆಚರಣೆಗೂ ತಂದಿದ್ದರು.

ಇಪ್ಪತ್ತನೆಯ ಶತಮಾನದ ಶ್ರೇಷ್ಠ ನಾಟಕಕಾರರಲ್ಲಿ ಅವರಿಗೆ ಎತ್ತರದ ಸ್ಥಾನವಿದೆ. ಕನ್ನಡ ಮಾತ್ರವಲ್ಲ ಭಾರತೀಯ ರಂಗಭೂಮಿಗೆ ಅವರ ನಾಟಕಗಳು ಹೊಸ ತಿರುವನ್ನಿತ್ತವು. ಇಂಗ್ಲಂಡಿನ ಆಕ್ಸ್‌ಫರ್ಡಿಗೆ ರೋಡ್ಸ್ ಸ್ಕಾಲರ್‌ಶಿಪ್‌ಪಡೆದು ಹೋಗುವ ಮೊದಲು ಬರೆದ ಯಯಾತಿ ಹೇಗೆ ಅವರನ್ನು ಮತ್ತೆ ಕನ್ನಡಕ್ಕೆ ಮರಳಿ ತಂದಿತೆಂಬುದನ್ನು, ಕುರ್ತಕೋಟಿಯವರು ಇದಕ್ಕೆ ಹೇಗೆ ಕಾರಣರಾದರೆಂಬುದನ್ನು ಅವರು ತಮ್ಮ ಆತ್ಮಕತೆಯಲ್ಲಿ ವಿವರವಾಗಿ ಬರೆದಿದ್ದಾರೆ. ಇಂಗ್ಲಿಷ್ ಕವಿಯಾಗಲು ಹೊರಟವರು ‘ಕನ್ನಡ ನಾಟಕಕಾರ’ರಾಗುವ ಕನಸು ಹೊತ್ತು ಭಾರತಕ್ಕೆ ಬಂದರು. ದೇಶದ ರಂಗಪ್ರಿಯರನ್ನು ತನ್ನ ಉಜ್ವಲತೆಯಿಂದ, ವಿಸ್ತಾರವಾದ ಅರ್ಥವ್ಯಾಪ್ತಿಯಿಂದ ಬೆಚ್ಚಿಬೀಳಿಸಿದ ‘ತುಘಲಕ್’ ನಾಟಕ ಕಾರ್ನಾಡರ ಇಪ್ಪತ್ತಾರನೇ ವಯಸ್ಸಿಗೆ ಪ್ರಕಟವಾಯಿತೆಂಬುದನ್ನು ಗಮನಿಸಿದರೆ ಅವರ ಅಪಾರ ಪ್ರತಿಭೆಯ ಅರಿವಾಗುತ್ತದೆ. ಈ ನಾಟಕದ ಮೂಲಕ ಅವರ ಖ್ಯಾತಿ ದೇಶಾದ್ಯಂತ ಹರಡಿತು. ಪ್ರತಿ ಕಾಲದಲ್ಲೂ ತುಘಲಕ್ ಅತ್ಯಂತ ಪ್ರಸ್ತುತವೆನಿಸುತ್ತಿದೆಯೆನ್ನುವುದೇ ಅದರ ಮಹತ್ವವನ್ನು ಸಾರುತ್ತಿದೆ. ನಂತರದ ಹಯವದನ ಮತ್ತು ಮುಖ್ಯವಾಗಿ ಕಾರಂತರು ಅದನ್ನು ಪ್ರಯೋಗಿಸಿದ್ದು ರಂಗಭೂಮಿಗೆ ಹೊಸ ಚೈತನ್ಯವನ್ನೊದಗಿಸಿತು. ಎರಡು ದಿನಗಳ ಹಿಂದೆ ಈ ಹೊಸತನದ ಪ್ರಸ್ತಾಪ ಬಂದು ತನ್ನ ನಾಟಕ ಮತ್ತು ಕಾರಂತರ ಸಂಗೀತ ತಂದ ಈ ಹೊಸರುಚಿಯನ್ನು ಕನ್ನಡಿಗರು ಈಗಲೂ ವಿವಿಧ ರೂಪಗಳಲ್ಲಿ ಆಸ್ವಾದಿಸುತ್ತಿರುವುದು, ಇನ್ನೂ ಅದನ್ನು ತೊಡೆದುಹಾಕುವ ಹೊಸರುಚಿಗಳು ಪೂರ್ತಿಯಾಗಿ ಬೆಳೆದಿಲ್ಲವೆನ್ನುವುದು ಕನ್ನಡ ರಂಗಭೂಮಿಯ ಬಲಹೀನತೆಯೆಂಬರ್ಥದಲ್ಲಿ ಮಾತನಾಡಿದರು. ಅವರು ಯಾವುದನ್ನಾಗಲೀ ವಿಮರ್ಶಿಸುವಾಗ ಅಡ್ಡಗೋಡೆಯ ಮೇಲೆ ದೀಪವಿಟ್ಟ ಮಾತಾಡುತ್ತಿರಲಿಲ್ಲ. ಅದನ್ನು ಸ್ವತಃ ತನ್ನ ಬಗ್ಗೆ ಕೂಡ ಅನ್ವಯಿಸಿಕೊಳ್ಳುತ್ತಿದ್ದರು.

ಹತ್ತು ವರ್ಷಗಳ ಹಿಂದೊಮ್ಮೆ ಪ್ರಜಾವಾಣಿಯಲ್ಲಿ ಒಂದು ಕವಿತೆಯ ಅನುವಾದವನ್ನು ಪ್ರಕಟಿಸಿದರು. ಆಗ ಅವರ ಜೊತೆ ನಡೆದ ಮಾತುಕತೆ ನನಗಿನ್ನೂ ನೆನಪಿದೆ. ಒಂದು ಘಟನೆಗೆ ಪ್ರತಿಕ್ರಿಯೆಯಾಗಿ ಅವರು ಆ ಕವಿತೆಯ ಅನುವಾದ ಮಾಡಿದ್ದರೂ ಸಹ, ಅದಕ್ಕೂ ಮೊದಲು ಆ ಕವಿಯನ್ನು ಅಮೂಲಾಗ್ರ ಓದಿದ ನಂತರವೇ ಅನುವಾದವನ್ನು ಕೈಗೆತ್ತಿಕೊಂಡಿದ್ದರು. ಆ ಒಂದು ಕವಿತೆಯ ಅನುವಾದದ ಹಿಂದೆ ಎಷ್ಟೊಂದು ದಿನಗಳ ಶ್ರಮವಿದ್ದೀತೆಂದು ಎಣಿಸಿದರೆ ಅವರು ಯಾವ ತೀವ್ರತೆಯಲ್ಲಿ ಬರವಣಿಗೆಯಲ್ಲಿ ತೊಡಗುತ್ತಿದ್ದರೆಂಬುದು ಅರಿವಾಗುತ್ತದೆ. ಬರವಣಿಗೆ, ಸಿನೇಮಾ, ನಾಟಕ, ಲೇಖನ ಪ್ರತಿಯೊಂದರಲ್ಲೂ ಅವರು ಯಾವ ಸಣ್ಣ ವಿವರವನ್ನೂ ಅಲಕ್ಷಿಸುತ್ತಿರಲಿಲ್ಲ. ಅದು ಅವರ ಪುಸ್ತಕಗಳ ಮುಖಪುಟಗಳ ಬಗೆಗೂ ನಿಜ. ಕಲಾವಿದರ ಜೊತೆಯ ಅವರ ಒಡನಾಟದ ಬಗ್ಗೆಯೇ ದೀರ್ಘವಾಗಿ ಬರೆಯಬಹುದು. ಮದರಾಸಿನಲ್ಲಿದ್ದಾಗ ಅವರು ನಿಯಮಿತವಾಗಿ ಮೂರು ವರ್ಷಗಳ ಕಾಲ ಕಲಾವಿಮರ್ಶೆಯನ್ನು ಬರೆಯುತ್ತಿದ್ದರೆಂಬುದು ಬಹಳ ಜನರಿಗೆ ಗೊತ್ತಿಲ್ಲ. ಕಲಾವಿದ ವಾಸುದೇವ್ ಮತ್ತು ಗಿರೀಶರ ಸ್ನೇಹವು ಕನ್ನಡ ಸಾಹಿತ್ಯಕ್ಕೆ ಕಲಾಸ್ಪರ್ಶ ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ.

ಕಾರ್ನಾಡರ ಗದ್ಯಕ್ಕೆ ವಿಶೇಷ ಮೆರುಗಿದೆ. ಅವರ ಪದಪ್ರಯೋಗವೇ ವಿಶಿಷ್ಟ. ಅದು ಮರಾಠಿ ಮತ್ತು ಕೊಂಕಣಿಯಿಂದ ಪ್ರಭಾವಿತವಾದದ್ದು. ಕಾಕನಕೋಟೆ ನಾಟಕದ ಕುರಿತ ಅವರ ವಿಮರ್ಶಾ ಲೇಖನವು ಕನ್ನಡ ನಾಟಕಗಳ ಬಗ್ಗೆ ಬರೆದ ಅತ್ಯುತ್ತಮ ಲೇಖನಗಳಲ್ಲೊಂದು. ಅವರ ಕನ್ನಡ ಭಾಷಾಪ್ರಯೋಗದ ಬಗ್ಗೆ ಟೀಕೆಗಳು ಬಂದದ್ದನ್ನು ಸ್ಮರಿಸಿಕೊಂಡು ‘ಪ್ರಜಾವಾಣಿ ಸಾಹಿತ್ಯ ಪುರವಣಿ’ಗಾಗಿ ‘ನಾನು ಮತ್ತು ನನ್ನ ಕನ್ನಡ’ ಎಂಬ ಲೇಖನವನ್ನು ಬರೆಯಲು ಅವರನ್ನು ಪ್ರಚೋದಿಸಿದ್ದೆ. ಕೊಂಕಣಿ ಮನೆಮಾತಾದ, ಮರಾಠಿಯ ನಿಕಟ ಸಂಪರ್ಕದಲ್ಲಿ ಬೆಳೆದ ಲೇಖಕನೊಬ್ಬ ಕನ್ನಡವನ್ನು ತನ್ನದನ್ನಾಗಿ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ವಿವರಿಸಿದ ಆ ಲೇಖನ ಅವರ ಸೃಜನಶೀಲ ವ್ಯಕ್ತಿತ್ವವನ್ನು, ಅವರ ಪ್ರಾಮಾಣಿಕ ನಿಲುವುಗಳನ್ನು ಪ್ರತಿಫಲಿಸುತ್ತದೆ.

ನಾವಿಬ್ಬರೇ ಇದ್ದಾಗ ಕೊಂಕಣಿಯಲ್ಲಿ ಮಾತಾಡುತ್ತಿದ್ದೆವು. ಹಾಗಾಗಿ ಮಾತುಕತೆ ಭಾಷೆಗೆ ಸಹಜವಾದ ಏಕವಚನದಲ್ಲಿರುತ್ತಿತ್ತು. ಕನ್ನಡದಲ್ಲಿ ಸಾರ್ವಜನಿಕವಾಗಿ ಅವರ ಜೊತೆ ಮಾತಾಡುವಾಗ ಮಾತ್ರ ಬಹುವಚನ!

ಸಾಹಿತ್ಯ, ಸಿನೇಮಾ, ಆಡಳಿತ, ರಾಜಕೀಯ ಹೀಗೆ ಯಾವುದೇ ಕ್ಷೇತ್ರದಲ್ಲೂ ಸ್ಪಷ್ಟ ನಿರ್ದಿಷ್ಟ ಪ್ರಾಮಾಣಿಕ ನಿಲುವು ತಳೆಯಲು ಕಾರ್ನಾಡರು ಹಿಂಜರಿಯುತ್ತಿರಲಿಲ್ಲ. ಇಂಥ ಧೈರ್ಯಸ್ಥ ಪ್ರತಿಭಾವಂತ ವ್ಯಕ್ತಿತ್ವಗಳು ಅಳತೆಗೋಲುಗಳ ಹಾಗೆ ಆಯಾ ಕ್ಷೇತ್ರಗಳ ಗುಣಮಟ್ಟ ಮತ್ತು ನೈತಿಕತೆಯನ್ನು ಕಾಯುತ್ತವೆ. ಕಾರ್ನಾಡರ ಕಣ್ಮರೆಯಿಂದಾಗ ಕನ್ನಡದ ಸ್ಥೈರ್ಯ ತುಸು ಕುಗ್ಗಿದೆಯೆಂಬ ಭಾವನೆ ಹುಟ್ಟಿದೆ.

ಇವುಗಳನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT