ಭಾನುವಾರ, ಸೆಪ್ಟೆಂಬರ್ 26, 2021
28 °C
ಅಂಜುದೀವ್ ದ್ವೀಪದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ನೀಡಲು ಮನವಿ: ಚರ್ಚೆಗೆ ಗ್ರಾಸವಾದ ನಡೆ

ಅಂಜುದೀವ್ ದ್ವೀಪ: ಪೋರ್ಚುಗೀಸ್ ಪ್ರಧಾನಿ ಮಧ್ಯಪ್ರವೇಶಕ್ಕೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕಾರವಾರ: ಸೀಬರ್ಡ್ ನೌಕಾನೆಲೆಯ ವ್ಯಾಪ್ತಿಯಲ್ಲಿರುವ ಅಂಜುದೀವ್ ದ್ವೀಪದ ಚರ್ಚ್‌ನಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ನೀಡುವ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಗೋವಾದ ಹಿರಿಯರೊಬ್ಬರು ಪೋರ್ಚುಗೀಸ್ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಸ್ಥಳೀಯವಾಗಿ ಭಾರಿ ಚರ್ಚೆಯಾಗುತ್ತಿದೆ. 

ಕಾಣಕೋಣದ ನಿವಾಸಿ 78 ವರ್ಷದ ಹಿರಿಯ ನಟೆವಿಡ್ ಡೇಸಾ ಪತ್ರ ಬರೆದವರು. ಅಂಜುದೀವ್ ದ್ವೀಪವು ಕಾರವಾರದ ಬಿಣಗಾ ಕಡಲತೀರದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದೆ. ಇದು ಸೀಬರ್ಡ್ ನೌಕಾನೆಲೆಯ ವ್ಯಾಪ್ತಿಗೆ ಒಳಪಡುವ ಮೊದಲು ಗೋವಾ ರಾಜ್ಯಕ್ಕೆ ಸೇರಿತ್ತು. ಇಲ್ಲಿ ಪೋರ್ಚುಗೀಸರ ಕಾಲದಲ್ಲಿ ಸ್ಥಾಪಿಸಲಾದ ಎರಡು ಚರ್ಚ್‌ಗಳು ಗೋವಾದ ಕ್ರೈಸ್ತ ಧರ್ಮೀಯರಿಗೆ ಧಾರ್ಮಿಕ ಕೇಂದ್ರಗಳಾಗಿವೆ. ಇಲ್ಲಿ ಮೊದಲು ಪ್ರತಿ ವರ್ಷ ಫೆಬ್ರುವರಿ ಹಾಗೂ ಅಕ್ಟೋಬರ್‌ನಲ್ಲಿ ‘ಪೇಸ್ತ್’ (ಹಬ್ಬ) ಹಮ್ಮಿಕೊಳ್ಳಲಾಗುತ್ತಿತ್ತು.

1986ರಲ್ಲಿ ನೌಕಾದಳದೊಂದಿಗೆ ಒಪ್ಪಂದ ಮಾಡಿಕೊಂಡ ಗೋವಾ ಸರ್ಕಾರವು, ಈ ದ್ವೀಪವನ್ನು ನೌಕಾನೆಲೆಗೆ ಹಸ್ತಾಂತರಿಸಿತು. ಆ ಬಳಿಕ ದ್ವೀಪಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಯಿತು. 2000ನೇ ಇಸವಿಯ ಬಳಿಕ ಸಂಪೂರ್ಣವಾಗಿ ನಿಷೇಧಿಸಲಾಯಿತು. ದ್ವೀಪಕ್ಕೆ ಮೊದಲಿನಂತೆ ಪ್ರವೇಶಾವಕಾಶ ಕೊಡಬೇಕು ಎಂದು ಗೋವಾದ ಹಲವರು ಮೊದಲಿನಿಂದಲೂ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. 

ಈ ಸಂಬಂಧ ಪ‍ರಿಶೀಲನೆ ನಡೆಸುವಂತೆ ನಟೆವಿಡ್ ಅವರು ಈ ಹಿಂದೆ ಪ್ರಧಾನಮಂತ್ರಿಗೂ ಪತ್ರ ಬರೆದಿದ್ದರು. ಈ ಬಗ್ಗೆ ಪ್ರಧಾನಿ ಕಾರ್ಯಾಲಯವೂ ಕ್ರಮಕ್ಕೆ ಮುಂದಾಗಿದ್ದು, ದಕ್ಷಿಣ ಗೋವಾ ಜಿಲ್ಲಾಡಳಿತದಿಂದ ಮಾಹಿತಿ ಪಡೆದುಕೊಂಡಿದೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೇ ನಟೆವಿಡ್ ಅವರು ಪೋರ್ಚುಗಲ್ ದೇಶದ ಪ್ರಧಾನಿಗೆ ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ. ದೇಶದ ಆಂತರಿಕ ವಿಚಾರದಲ್ಲಿ, ಅದರಲ್ಲೂ ನೌಕಾನೆಲೆ ವ್ಯಾಪ್ತಿಯ ಪ್ರದೇಶದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಅಗತ್ಯವೇನಿದೆ ಎಂಬುದು ಹಲವರ ಆಕ್ಷೇಪವಾಗಿದೆ.

‘ಗೋವಾ ಮೂಲದವರೆಂದು ಪತ್ರ’: ‘ಪೋರ್ಚುಗಲ್‌ನ ಪ್ರಧಾನಿ ಆಂಟೋನಿಯೋ ಕೋಸ್ಟಾ ಅವರು ಗೋವಾ ಮೂಲದವರು. ಅವರಿಗೆ ಕೊಂಕಣಿ ಭಾಷಿಕರ ಮೇಲೆ ಅಭಿಮಾನವಿದೆ. ಹಾಗಾಗಿ ಅವರಿಗೆ ಪತ್ರ ಬರೆದೆ’ ಎಂದು ನಟೆವಿಡ್ ಡೇಸಾ ಪ್ರತಿಕ್ರಿಯಿಸಿದರು.

ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ನನ್ನ ಪತ್ರಕ್ಕೆ ಪೋರ್ಚುಗಲ್‌ನಿಂದ ಪ್ರತಿಕ್ರಿಯೆ ಬಂದಿದೆ. ಅಂಜುದೀವ್ ದ್ವೀಪ ಮತ್ತು ಅಲ್ಲಿನ ಚರ್ಚ್‌ಗಳ ವಿಚಾರ ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಧಾರ್ಮಿಕ ಕೇಂದ್ರಗಳಿಗೆ ಮೊದಲಿನಂತೆ ಪ್ರವೇಶಾವಕಾಶ ಸಿಗಬೇಕು ಎಂಬುದಷ್ಟೇ ನನ್ನ ಉದ್ದೇಶವಾಗಿದೆ. ಮುಂದೇನಾಗುತ್ತದೋ ನೋಡೋಣ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು