ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ರಾಮಚಂದ್ರಾಪುರ ಮಠದ ಸುಪರ್ದಿಗೆ ಗೋಕರ್ಣ ದೇಗುಲ: ಸುಪ್ರೀಂಕೋರ್ಟ್ ಆದೇಶ

Last Updated 3 ಅಕ್ಟೋಬರ್ 2018, 9:08 IST
ಅಕ್ಷರ ಗಾತ್ರ

ನವದೆಹಲಿ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನುಮುಂದಿನ ಆದೇಶದವರೆಗೆ ರಾಮಚಂದ್ರಾಪುರ ಮಠದ ಸುಪರ್ದಿಗೆ ಒಪ್ಪಿಸಲು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕುರಿಯನ್ ಜೋಸೆಫ್‌, ಎ.ಎಂ. ಖನ್ವಿಲ್ಕರ್ ಪೀಠ ಬುಧವಾರ ಆದೇಶ ಹೊರಡಿಸಿದೆ.

ಸೆ.7ರಂದು ನಡೆದ ವಿಚಾರಣೆ‌ ವೇಳೆ ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ಪೀಠ ನಿರಾಕರಿಸಿತ್ತು. ಇದೀಗದೇವಸ್ಥಾನವನ್ನು ಸುಪರ್ದಿಗೆ ಪಡೆಯಲು ಸೆ.16ರಂದು ಜಿಲ್ಲಾಧಿಕಾರಿ ಆದೇಶವನ್ನೂ ನ್ಯಾಯಪೀಠ ರದ್ದುಪಡಿಸಿದೆ.

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು, ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಹೈಕೋರ್ಟ್ ಆದೇಶದ ಮೇರೆಗೆ ಸೆ.19ರಂದುವಹಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ರಾಮಚಂದ್ರಾಪುರ ಮಠ ನ್ಯಾಯಪೀಠದ ಎದುರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠವು, ದೇಗುಲವನ್ನು ರಾಮಚಂದ್ರಾಪುರ ಮಠದ ಸುಪರ್ದಿಗೆ ಒಪ್ಪಿಸುವ ಮೊದಲು ಇದ್ದ ಸ್ಥಿತಿ, ಪೂಜಾಕೈಂಕರ್ಯ ಪದ್ಧತಿಗಳಬಗ್ಗೆ ಮಾಹಿತಿ ನೀಡಬೇಕು ಎಂದು ಸರ್ಕಾರ, ಮಠ ಮತ್ತು ದೇಗುಲದ ವಿಶ್ವಸ್ಥ ಮಂಡಳಿಗೆ ಸೂಚಿಸಿತು. ನವೆಂಬರ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗುವುದು. ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿರುವುದರಿಂದ ನ್ಯಾಯಾಂಗ ನಿಂದನೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿತು.

2008ರ ಆಗಸ್ಟ್‌ನಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಈ ದೇವಸ್ಥಾನದ ಆಡಳಿತವನ್ನು ವಹಿಸಿತ್ತು. ಇದನ್ನು ವಿರೋಧಿಸಿ ಹಿಂದಿನ ಮೇಲುಸ್ತುವಾರಿ ಟ್ರಸ್ಟಿ ಬಾಲಚಂದ್ರ ದೀಕ್ಷಿತ್ ಮತ್ತು ಅರ್ಚಕರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಗೋಕರ್ಣ ದೇವಾಲಯವು ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆ 1997ಕ್ಕೆ ಒಳಪಡುತ್ತದೆ. ಆದ್ದರಿಂದ ಅದನ್ನು ಹಸ್ತಾಂತರ ಮಾಡಿರುವುದು ಸರಿಯಲ್ಲ ಎಂದು ವಾದಿಸಿದ್ದರು. ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಹಾಗೂ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ದೇವಾಲಯವನ್ನು ಪುನಃ ಸರ್ಕಾರದ ವಶಕ್ಕೆ ನೀಡಬೇಕೆಂದು ಆದೇಶಿಸಿತ್ತು.

**

ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದೆವು​

ಜಿಲ್ಲಾಧಿಕಾರಿಗಳುಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ವಹಿಸಿಕೊಂಡಿದ್ದನ್ನುಪ್ರಶ್ನಿಸಿನಾವು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದೆವು. ಆದರೆ ಈಗ ಗೋಕರ್ಣ ದೇಗುಲವನ್ನು ಮತ್ತೆ ಮಠದ ಆಡಳಿತಕ್ಕೆ ವಹಿಸಿಕೊಟ್ಟಿರುವುದರಿಂದ ಅರ್ಜಿಯೂ ಮುಕ್ತಾಯವಾಗಲಿದೆ. ಈ ಹಿಂದೆ ಹೈಕೋರ್ಟ್‌ ಆದೇಶ ಹೊರ ಬಂದ ನಂತರ ಮೇಲ್ವಿಚಾರಣೆ ಸಮಿತಿ ನೇಮಿಸಬೇಕು ಎಂಬ ಆದೇಶವೂ ಪ್ರಕಟವಾಗಿತ್ತು. ಅದಕ್ಕೆ ಸ್ವತಃ ಹೈಕೋರ್ಟ್‌ ನಾಲ್ಕುವಾರಗಳ ಕಾಲ ತಡೆ ನೀಡಿತ್ತು. ಈ ಮಧ್ಯಂತರ ತಡೆ ಆದೇಶವನ್ನು ಸುಪ್ರೀಂ ಕೋರ್ಟ್‌ ಸಹ ಮುಂದುವರಿಸಿತ್ತು.

ಏತನ್ಮಧ್ಯೆ ಆದೇಶವನ್ನು ತಿರುಚಿದ್ದ ಸರ್ಕಾರ ದೇವಾಲಯದ ಆಡಳಿತವನ್ನು ವಶಕ್ಕೆ ಪಡೆಯಲು ಪ್ರಯತ್ನ ನಡೆಸಿತ್ತು. ಇದೀಗ ಸುಪ್ರೀಂ ಕೋರ್ಟ್‌ ಆದೇಶದಿಂದಾಗಿ ತತ್‌ಕ್ಷಣದಿಂದಲೇ ದೇವಾಲಯದ ಆಡಳಿತವನ್ನು ಮಠದ ಸುಪರ್ದಿಗೆ ನೀಡುವಂತಾಗಿದೆ.

–ಅರುಣ್ ಶ್ಯಾಂ,ಸುಪ್ರೀಂಕೋರ್ಟ್ ವಕೀಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT