ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಅಭಿವೃದ್ಧಿಗೆ ‘ದಾನಿಗಳ ಮೇಳ ’

ಸರ್ಕಾರಿ ಶಾಲೆಗಳ ಭೌತಿಕ ಸಬಲೀಕರಣಕ್ಕೆ ಶಿಕ್ಷಕಿ ಶೈಲಜಾ ಪ್ರಯತ್ನ
Last Updated 13 ಜನವರಿ 2019, 20:15 IST
ಅಕ್ಷರ ಗಾತ್ರ

ತುಮಕೂರು: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಶಿಕ್ಷಕರು, ಸಂಘ ಸಂಸ್ಥೆಗಳು ಹಾಗೂ ಸಮುದಾಯದಿಂದ ಅಲ್ಲೊಂದು ಇಲ್ಲೊಂದು ವಿಶಿಷ್ಟ ಪ್ರಯತ್ನಗಳು ನಡೆಯುತ್ತಿವೆ.

ನೆಲಮಂಗಲ ತಾಲ್ಲೂಕು ಡಾಬಸ್‌ಪೇಟೆ ಬಳಿಯ ಗೋವಿಂದಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಬಿ.ಶೈಲಜಾ, ‘ದಾನಿಗಳ ಮೇಳ’ ಸಂಘಟಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

‘ದಾನಿಗಳ ಮೇಳ’ದ ಟೀಚರ್ ಎಂದೇ ಈ ಭಾಗದಲ್ಲಿ ಅವರು ಪರಿಚಿತ. ದಾನಿಗಳು, ಸಂಘ ಸಂಸ್ಥೆಗಳು, ಖಾಸಗಿ ಕಂಪನಿಗಳ ಸಹಕಾರ ಪಡೆದು ತಾವು ಕಾರ್ಯನಿರ್ವಹಿಸುವ ಶಾಲೆಯನ್ನು ಭೌತಿಕವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ. ಅವರ ಈ ನಿಸ್ವಾರ್ಥ ಕೆಲಸಕ್ಕೆ ತಾಲ್ಲೂಕು ಹಂತದಿಂದ ರಾಷ್ಟ್ರ ಮಟ್ಟದವರೆಗೆ ‘ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ ಬಂದಿವೆ.

ಅಯ್ಯನತೋಟ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಅವರು ವೃತ್ತಿ ಜೀವನ ಆರಂಭಿಸಿದರು. ಅಂದು ಶಾಲೆ ಸೌಲಭ್ಯಗಳಿಲ್ಲದೆ ತೀರಾ ಹಿಂದುಳಿದಿತ್ತು. ಆಗ 2004ರಲ್ಲಿ ಮೊದಲ ಬಾರಿಗೆ ‘ದಾನಿಗಳ ಮೇಳ’ ಸಂಘಟಿಸಿದರು. ಗ್ರಾಮಸ್ಥರಿಂದ ₹ 5, 10 ಪಡೆದರು. ₹ 610 ಸಂಗ್ರಹವಾಯಿತು. ತಮ್ಮ ದುಡಿಮೆಯ ₹ 240 ಸೇರಿಸಿ ನಾಲ್ಕು ಕುರ್ಚಿ ಖರೀದಿಸಿದರು. ದಾನಿಗಳ ಮೇಳ ಅವರಿಗೆ ಶಾಲೆ ಅಭಿವೃದ್ಧಿಯ ಬೆಳಕಿಂಡಿಯಾಗಿ ಕಂಡಿತು.

ಎರಡು–ಮೂರು ವರ್ಷಗಳಿಗೆ ಒಮ್ಮೆ ಮೇಳ ಸಂಘಟಿಸಿದರು. ಗ್ರಾಮದ ಹೊರಗಿನವರನ್ನೂ ಮೇಳಕ್ಕೆ ಕರೆ ತಂದರು. ಪಾಠೋಪಕರಣ, ಪೀಠೋಪಕರಣ, ಮಕ್ಕಳಿಗೆ ಸಮವಸ್ತ್ರ, ಬಿಸಿಯೂಟಕ್ಕೆ ಪಾತ್ರೆಗಳು...ಹೀಗೆ ನಾನಾ ವಸ್ತುಗಳು ಕೊಡುಗೆಯಾಗಿ ಬಂದವು. ಅಷ್ಟೇಕೆ ಗ್ರಾಮಸ್ಥರ ಮನವೊಲಿಸಿ ಶಾಲೆ ಪಕ್ಕದ ಜಾಗವನ್ನು ದಾನವಾಗಿ ಪಡೆದರು. ಶಾಲೆ ಆವರಣ ವಿಸ್ತರಿಸಿದರು. ಮಕ್ಕಳ ಆಟಕ್ಕೂ ಮೈದಾನ ದೊರೆಯಿತು.

ಎರಡು ವರ್ಷಗಳಿಂದ ಗೋವಿಂದಪುರ ಶಾಲೆಯಲ್ಲಿ ಶೈಲಜಾ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ರೋಟರಿ ಸಂಸ್ಥೆ, ಆಟದ ಪರಿಕರಗಳು, ಶುದ್ಧ ಕುಡಿಯುವ ನೀರಿನ ಘಟಕ ನೀಡಿದೆ. ಕಂಪ್ಯೂಟರ್, ಶಾಲೆ ಆವರಣಕ್ಕೆ ತಗಡಿನ ಶೀಟುಗಳು ಮತ್ತಿತರ ಸೌಲಭ್ಯಗಳು ಶಾಲೆಗೆ ಒದಗಿವೆ.

‘ಅಯ್ಯನತೋಟ ಶಾಲೆಯಲ್ಲಿ ಒಂದು ಟೇಬಲ್ ಮತ್ತು ಒಂದು ಕುರ್ಚಿ ಮಾತ್ರ ಇತ್ತು. ಆ ಕುರ್ಚಿಯಲ್ಲಿ ಮತ್ತೊಬ್ಬ ಶಿಕ್ಷಕರು ಕೂರುತ್ತಿದ್ದರು. ನನ್ನ ಪಾಲಿನ ಪ್ಲಾಸ್ಟಿಕ್ ಕುರ್ಚಿ ಒಡೆದಿತ್ತು. ಮಣೆ ಮೇಲೆ ಕೂರುತ್ತಿದ್ದೆ. ನನ್ನ ಸಂಬಂಧಿಯೊಬ್ಬರು ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಸರ್ಕಾರಿ ಶಾಲೆಯಲ್ಲಿ ಕೂರಲು ಕುರ್ಚಿ ಇರುತ್ತದೆಯಾ ಎಂದು ವ್ಯಂಗ್ಯವಾಗಿ ಕೇಳಿದರು. ಇದು ನೋವು ತಂದಿತು. ಸರ್ಕಾರಿ ಶಾಲೆ ಅಭಿವೃದ್ಧಿಗೊಳಿಸಬೇಕು ಎನಿಸಿತು. ದಾನಿಗಳ ಮೇಳದ ಪರಿಕಲ್ಪನೆ ಮೂಡಿತು’ ಎಂದು ಸ್ಮರಿಸಿದರು.

‘ಬೆಳಗು’ ತಂದ ಅನುಕೂಲ
‘ಶಿಕ್ಷಕರ ದಿನದ ಅಂಗವಾಗಿ ಚಂದನ ವಾಹಿನಿಯ ‘ಬೆಳಗು’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದೆ. ಶಾಲೆ ಅಭಿವೃದ್ಧಿ, ‘ದಾನಿಗಳ ಮೇಳ’ದ ಬಗ್ಗೆ ಮಾತನಾಡಿದೆ. ನನ್ನ ದೂರವಾಣಿ ಸಂಖ್ಯೆ ಪಡೆದ ಬೆಂಗಳೂರಿನ ವೇಣುಗೋಪಾಲ್ ಎಂಬುವವರು ಶಾಲೆಗೆ ಭೇಟಿ ನೀಡಿ ನಾಲ್ಕು ಕಂಪ್ಯೂಟರ್ ಕೊಡಿಸಿದರು. ಅವರ ಸ್ನೇಹಿತರಿಂದಲೂ ಸೌಲಭ್ಯ ಕೊಡಿಸಿದರು. ಬಹಳಷ್ಟು ಜನ ಶಾಲೆಗೆ ಭೇಟಿ ನೀಡಿದರು. ನೆರವಾದರು’ ಎಂದು ನೆನಪಿಸಿಕೊಳ್ಳುವರು ಶೈಲಜಾ.

**

10 ಜನರನ್ನು ಕೇಳಿದರೆ ಕನಿಷ್ಠ ನಾಲ್ಕು ಜನರಾದರೂ ದಾನ ಕೊಡುತ್ತಾರೆ. ಮೇಳದಲ್ಲಿ ದಾನಿಗಳನ್ನು ಸನ್ಮಾನಿಸಲಾಗುತ್ತದೆ. ದಾನಿಗಳ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತಿದ್ದೇನೆ
- ಬಿ.ಶೈಲಜಾ, ಗೋವಿಂದಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ

**
ಮುಖ್ಯಾಂಶಗಳು
* ಎರಡು–ಮೂರು ವರ್ಷಗಳಿಗೆ ಒಮ್ಮೆ ಮೇಳ
* ಗ್ರಾಮಸ್ಥರ ಮನವೊಲಿಸಿ ಶಾಲೆ ಪಕ್ಕದ ಜಾಗ ದಾನವಾಗಿ ಪಡೆದರು
* ತಮ್ಮ ದುಡಿಮೆಯ ಸೇರಿಸಿ ಕುರ್ಚಿ ಖರೀದಿಸಿದ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT