ಸೋಮವಾರ, ಜೂಲೈ 6, 2020
22 °C
ಕೇಂದ್ರೀಯ ಸಮಗ್ರ ಕೀಟ ನಿರ್ವಹಣಾ ಕೇಂದ್ರದ ವಿಜ್ಞಾನಿಗಳ ಭರವಸೆ

ಕೋಲಾರ ಸಮೀಪ ಮಿಡತೆ ಹಿಂಡು ಪತ್ತೆ: ಬೆಳೆಗೆ ಸಮಸ್ಯೆಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ ದಿಂಬಗೇಟ್ ಸಮೀಪ ಅಪಾರ ಪ್ರಮಾಣದಲ್ಲಿ ಮಿಡತೆಗಳು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕೇಂದ್ರೀಯ ಸಮಗ್ರ ಕೀಟ ನಿರ್ವಹಣಾ ಕೇಂದ್ರದ ವಿಜ್ಞಾನಿಗಳು ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಿಡತೆಗಳಿಂದ ರೈತರ ಬೆಳೆಗಳಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಭರವಸೆ ನೀಡಿದರು.

ದಿಂಬಗೇಟ್ ಬಳಿ ಬುಧವಾರ ಮಿಡತೆಗಳು ಹಿಂಡು ಹಿಂಡಾಗಿ ಬಂದಿದ್ದವು. ರಸ್ತೆ ಬದಿಯ ಎಕ್ಕದ ಗಿಡಗಳಲ್ಲಿ ಮತ್ತು ವಿದ್ಯುತ್‌ ಕಂಬದ ಮೇಲೆ ಮಿಡತೆಗಳು ದಂಡು ಕಾಣಿಸಿಕೊಂಡಿತ್ತು. ಮಿಡತೆಗಳು ಎಕ್ಕದ ಗಿಡಗಳಲ್ಲಿನ ಎಲೆಗಳನ್ನು ಸಂಪೂರ್ಣವಾಗಿ ತಿಂದು ಖಾಲಿ ಮಾಡಿದ್ದವು. ಈ ಮಿಡತೆಗಳು ಜಮೀನುಗಳಿಗೆ ಲಗ್ಗೆಯಿಟ್ಟು ಬೆಳೆ ನಾಶ ಮಾಡುತ್ತೇವೆ ಎಂದು ರೈತರು ಆತಂಕಗೊಂಡಿದ್ದರು.

ಈ ಸಂಗತಿ ತಿಳಿದ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಬುಧವಾರ ರಾತ್ರಿಯೇ ಸ್ಥಳಕ್ಕೆ ಧಾವಿಸಿ ಮಿಡತೆಗಳನ್ನು ಓಡಿಸಲು ಬೆಂಕಿ ಹಚ್ಚಿಸಿದ್ದರು. ಉತ್ತರ ಭಾರತ ಹಾಗೂ ಅಕ್ಕಪಕ್ಕದ ರಾಜ್ಯಗಳಲ್ಲಿ ಮಿಡತೆಗಳ ಹಾವಳಿಯಿಂದ ರೈತರ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಾಲ್ಲೂಕಿನಲ್ಲಿ ಮಿಡತೆಗಳ ಹಿಂಡು ಕಾಣಿಸಿಕೊಂಡಿರುವ ಸಂಗತಿಯನ್ನು ಬುಧವಾರ ರಾತ್ರಿಯೇ ಕೇಂದ್ರೀಯ ಸಮಗ್ರ ಕೀಟ ನಿರ್ವಹಣಾ ಕೇಂದ್ರದ ವಿಜ್ಞಾನಿಗಳಿಗೆ ಗಮನಕ್ಕೆ ತಂದಿದ್ದರು.

ಹೀಗಾಗಿ ಗುರುವಾರ ದಿಂಬಗೇಟ್‌ ಬಳಿಯ ಜಮೀನುಗಳಿಗೆ ಭೇಟಿ ನೀಡಿದ ವಿಜ್ಞಾನಿಗಳ ತಂಡವು ಮಿಡತೆಗಳ ಚಲನವಲನ ಸಮಗ್ರವಾಗಿ ಪರಿಶೀಲಿಸಿತು. ಬಳಿಕ ಉತ್ತರ ಭಾರತದಲ್ಲಿ ಕಾಣಿಸಿಕೊಂಡಿರುವ ಹಾಗೂ ದಿಂಬಗೇಟ್‌ ಬಳಿ ಪತ್ತೆಯಾಗಿರುವ ಮಿಡತೆಗಳಿಗೂ ಸಾಕಷ್ಟು ವ್ಯತ್ಯಾಸ ಇರುವುದು ಗೊತ್ತಾಯಿತು.

ಬೆಳೆಗೆ ಹಾನಿಯಿಲ್ಲ: ‘ಉತ್ತರ ಭಾರತದಲ್ಲಿ ಕಾಣಿಸಿಕೊಂಡಿರುವ ಮಿಡತೆಗಳು ಮತ್ತು ಜಿಲ್ಲೆಯಲ್ಲಿ ಕಂಡುಬಂದಿರುವ ಮಿಡತೆಗಳು ಬೇರೆ ಪ್ರಬೇಧದವು. ಈ ಮಿಡತೆಗಳ ನಡುವೆ ಯಾವುದೇ ಸಾಮ್ಯತೆಯಿಲ್ಲ. ದಿಂಬಗೇಟ್‌ ಬಳಿ ಪತ್ತೆಯಾಗಿರುವ ಮಿಡತೆಗಳು ಸ್ಥಳೀಯ ಜಾತಿಯ ಮಿಡತೆಗಳಾಗಿವೆ. ಇವುಗಳಿಂದ ರೈತರ ಬೆಳೆಗಳಿಗೆ ಯಾವುದೇ ಹಾನಿಯಿಲ್ಲ’ ಎಂದು ಕೇಂದ್ರದ ಸಸ್ಯ ಸಂಕ್ಷರಣಾ ವಿಭಾಗದ ವಿಜ್ಞಾನಿ ಷಹೀರ್ ಕಾರ್ತಿಕ್ ಸ್ಪಷ್ಟಪಡಿಸಿದರು.

‘ದಿಂಬಗೇಟ್‌ ಬಳಿ ಕಾಣಿಸಿಕೊಂಡಿರುವ ಮಿಡತೆಗಳನ್ನು ಎಕ್ಕದ ಗಿಡದ ಮಿಡತೆಗಳೆಂದು ಕರೆಯಲಾಗುತ್ತದೆ. ಇವು ಎಕ್ಕದ ಗಿಡ ಹೊರತುಪಡಿಸಿ ಉಳಿದ ಸಸ್ಯಗಳನ್ನು ತಿನ್ನುವುದಿಲ್ಲ. ಹೀಗಾಗಿ ಜಿಲ್ಲೆಯ ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ವಿಜ್ಞಾನಿಗಳ ಪರಿಶೀಲನೆ ವೇಳೆ ದಿಂಬ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ತುಳಸಿರಾಮ್‌, ಕೃಷಿ ವಿಜ್ಞಾನಿ ಸುಧಾಕರ್, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.