ಗುಂಡ್ಲುಪೇಟೆ: ಸರ್ಕಾರಿ ಜಮೀನಿನಲ್ಲಿ ಬೀಟೆ ಮರ ಕಡಿಯುವುದನ್ನು ತಡೆಯಲು ಯತ್ನಿಸಿದ ಗುಂಡ್ಲುಪೇಟೆ ಪ್ರೊಬೇಷನರಿ ತಹಶೀಲ್ದಾರ್ (ಗ್ರೇಡ್–2) ಬಿ.ಕೆ.ಸುದರ್ಶನ್ ಅವರಿಗೆ ಚಿಕ್ಕಬಳ್ಳಾಪುರ ಎಸಿಬಿ ಡಿವೈಎಸ್‌ಪಿ ಬಿ.ಪಿ.ಪ್ರಸಾದ್ ಅವರು ದೂರವಾಣಿ ಕರೆ ಮಾಡಿ ಧಮಕಿ ಹಾಕಿದ್ದಾರೆ.
ಈ ಸಂಬಂಧ ಸುದರ್ಶನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ‘ಪ್ರಸಾದ್ ಅವರು ಕರೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಹಿಂಸೆ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.
ಪ್ರಸಾದ್ ಜೋರು ಮಾಡಿರುವ ಧ್ವನಿಯ ತುಣುಕು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ. ಬುಧವಾರ ಈ ಪ್ರಕರಣ ನಡೆದಿದೆ.
ದೂರಿನಲ್ಲಿ ಏನಿದೆ?: ‘ತಾಲ್ಲೂಕಿನ ಬೇಗೂರು ಗ್ರಾಮದ ಸರ್ವೆ ನಂ. 23ರ ಸರ್ಕಾರಿ ಜಮೀನಿನಲ್ಲಿ ಬೀಟೆ ಮರ ಕಡಿಯಲಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ಕರೆ ಮಾಡಿ ದೂರು ನೀಡಿದ್ದರು. ವಸ್ತು ಸ್ಥಿತಿಯನ್ನು ತಿಳಿದುಕೊಳ್ಳುವ ಸಲುವಾಗಿ ಬೆಳಚವಾಡಿ ಗ್ರಾಮ ಪಂಚಾಯಿತಿ ಸಹಾಯಕರಿಗೆ ಕರೆ ಮಾಡಿ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದೆ. ಬೆಳಿಗ್ಗೆ 11.05ರ ಸುಮಾರಿಗೆ ಪ್ರಸಾದ್ ಕರೆ ಮಾಡಿ (9480806218) ಅವಾಚ್ಯವಾಗಿ ನಿಂದಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಸಾದ್ ಅವರ ತಂದೆ ಬಿ.ಪಿ. ಪುಟ್ಟಸ್ವಾಮಿ ಆರಾಧ್ಯ ಅವರಿಗೆ ಸೇರಿದ ಜಮೀನಿನ ಪಕ್ಕದಲ್ಲಿರುವ ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮರ ಕಡಿಯಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಮರಗಳನ್ನು ಕಡಿದಿರುವುದು ದೃಢಪಟ್ಟಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿ ಓಂಕಾರ ಅರಣ್ಯ ವಲಯ ಕಚೇರಿಗೆ ರವಾನಿಸಿದ್ದಾರೆ. ಒಟ್ಟು 32 ಮರಗಳನ್ನು ಕಡಿಯಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
‘ಪ್ರಸಾದ್ ಅವರಿಗೂ, ಮರ ಕಡಿಯುತ್ತಿದ್ದವರಿಗೂ ಏನು ಸಂಬಂಧ ಎಂಬುದು ಗೊತ್ತಿಲ್ಲ. ಅವರ ಜಮೀನು ಸರ್ಕಾರಿ ಜಮೀನಿಗೆ ಹೊಂದಿಕೊಂಡಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮರಗಳನ್ನು ಜಪ್ತಿ ಮಾಡಿದ್ದಾರೆ’ ಎಂದು ಸುದರ್ಶನ್ ತಿಳಿಸಿದರು.
ಬೀಟೆ ಕೂಡ ಬೆಲೆಬಾಳುವ ಮರವಾಗಿದ್ದು, ಅನುಮತಿ ಇಲ್ಲದೆ ಕಡಿದರೆ ಜಾಮೀನು ರಹಿತ ವಾರೆಂಟ್ ಹೊರಡಿಸಬಹುದಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
‘ಬೂಟಲ್ಲಿ ಒದಿತೀನಿ’
ಕರೆ ಮಾಡಿದ ಸಂದರ್ಭದಲ್ಲಿ ಸುದರ್ಶನ್ ಅವರನ್ನು ಏಕವಚನದಲ್ಲೇ ಸಂಭೋದಿಸಿರುವ ಪ್ರಸಾದ್ ಅವರು, ‘ಸ್ಥಳಕ್ಕೆ ಜನ ಕಳುಹಿಸಲು ನೀನು ಯಾರು. ನಿನಗೂ ಅದಕ್ಕೂ ಸಂಬಂಧ ಏನು. ನಿನ್ನ ಮಂತ್ರಿಯ ಹತ್ತಿರ ಮಾತನಾಡುತ್ತೇನೆ. ಭಾರತಿಗೆ (ತಹಶೀಲ್ದಾರ್) ಮಾಹಿತಿ ನೀಡದೇ ನೀನು ಹೇಗೆ ಬಂದೆ. ನೀನು ಅಲ್ಲಿ ಎಷ್ಟು ವರ್ಷದಿಂದ ಇದ್ದೀಯಾ. ಏನೆಲ್ಲ ಮಾಡಿದ್ದೀಯಾ, ಎಲ್ಲವೂ ನನಗೆ ಗೊತ್ತು. ನಿನಗೆ ಸರಿಯಾದ ಪಾಠ ಕಲಿಸುತ್ತೇನೆ. ಡಿ.ಸಿ ಹತ್ತಿರ ಅಲ್ಲ, ಅವರ ಅಪ್ಪನ ಹತ್ತಿರ ಮಾತನಾಡುತ್ತೇನೆ. ಬೂಟಲ್ಲಿ ಒದಿತೀನಿ ಮಗನೆ. ಏನು ಮಾಡುತ್ತಿಯಾ. ಏನೂ ಮಾಡುವುಕ್ಕಾಗುವುದಿಲ್ಲ’ ಎಂದು ಹೇಳಿರುವುದು ಆಡಿಯೊ ತುಣುಕಿನಲ್ಲಿದೆ.
ಪ್ರಸಾದ್ ಮಾತೃ ಇಲಾಖೆಗೆ ಎತ್ತಂಗಡಿ
ಬೆಂಗಳೂರು: ಬೆದರಿಕೆ ಹಾಕಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಬಿ.ಪಿ.ಪ್ರಸಾದ್ ಅವರನ್ನು ಮಾತೃ ಘಟಕವಾದ ಪೊಲೀಸ್ ಇಲಾಖೆಗೆ ಗುರುವಾರ ಮಧ್ಯಾಹ್ನ ಎತ್ತಂಗಡಿ ಮಾಡಲಾಗಿದೆ.
ಬೆದರಿಕೆ ಹಾಕಿರುವುದನ್ನು ಕೆಎಎಸ್ ಅಧಿಕಾರಿಗಳ ಸಂಘ ಖಂಡಿಸಿದೆ. ಈ ಅಧಿಕಾರಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.