ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಪತ್ತೆಯಲ್ಲಿನ ವಿಳಂಬವೇ ಎಚ್‌1ಎನ್‌1 ಹೆಚ್ಚಲು ಕಾರಣ?

ಪ್ರಯೋಗಾಲಯ ಮಣಿಪಾಲ, ಬೆಂಗಳೂರು ಕೇಂದ್ರಿತ
Last Updated 18 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ವೈರಾಲಜಿ ಪ್ರಯೋಗಾಲಯಗಳು ಬೆಂಗಳೂರು ಹಾಗೂ ಮಣಿಪಾಲ ಕೇಂದ್ರಿತವಾಗಿದ್ದು, ರೋಗ
ಪತ್ತೆಯಲ್ಲಿ ಆಗುವ ವಿಳಂಬವೇ ಎಚ್‌1ಎನ್‌1ನಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂಬ ಅಭಿಪ್ರಾಯ ಆರೋಗ್ಯ ಇಲಾಖೆಯಲ್ಲಿ ವ್ಯಕ್ತವಾಗಿದೆ.

ಕೆಲವು ಜಿಲ್ಲೆಗಳ ಎಚ್‌1ಎನ್‌1 ರೋಗಿಗಳ ಗಂಟಲಿನ ಸೋಂಕು ಪರೀಕ್ಷೆಯ ವರದಿ, ನಾಲ್ಕು ದಿನಗಳಾದರೂ ಬರುತ್ತಿಲ್ಲ. ಇದರಿಂದ ರೋಗಿಗಳಿಗೆ ಆರಂಭದಲ್ಲೇ ಸಮರ್ಪಕವಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳಿವೆ.

ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಯವರು ನಗರದಲ್ಲಿರುವ ಮಣಿಪಾಲ ಆಸ್ಪತ್ರೆ, ನಿಮ್ಹಾನ್ಸ್‌, ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆ, ನಾರಾಯಣ ಹಾಗೂ ಕಮಾಂಡ್‌ ಆಸ್ಪತ್ರೆಗಳಿಗೆ ರೋಗಿಗಳ ಗಂಟಲಿನ ಸೋಂಕು ಪರೀಕ್ಷೆಗೆ ಮಾದರಿಗಳನ್ನು ಕಳುಹಿಸುತ್ತಾರೆ. ಪ್ರಯೋಗಾಲಯ ಇರುವ ಸಮೀಪದ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಮಂದಿಎಚ್‌1ಎನ್‌1ಗೆ ತುತ್ತಾಗಿದ್ದರೂ ಕೇವಲ ಒಬ್ಬರು ಮೃತಪಟ್ಟಿದ್ದಾರೆ. ಹಾಗೆಯೇ ಉಡುಪಿಯಲ್ಲಿ 101 ಪ್ರಕರಣಗಳಿದ್ದರೂ ಯಾವುದೇ ಸಾವಿನ ಪ್ರಕರಣಗಳೂ ದಾಖಲಾಗಿಲ್ಲ.

ಬೆಳಗಾವಿ, ಕಲಬುರ್ಗಿ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಶಿವಮೊಗ್ಗ, ಮೈಸೂರು ಜಿಲ್ಲೆಯವರು ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿರುವ ಕೇಂದ್ರಕ್ಕೇ ಮಾದರಿಗಳನ್ನು ಕಳುಹಿಸಬೇಕು. ಹಾಸನ, ತುಮಕೂರು ಜಿಲ್ಲೆಯವರು ಬೆಂಗಳೂರಿಗೆ ಕಳುಹಿಸುತ್ತಾರೆ. ರಜಾ ದಿನಗಳು ಬಂದರೆ ಕೆಲವೊಮ್ಮೆ ನಾಲ್ಕು ದಿನಗಳಾದರೂ ವರದಿ ಸಿಗುತ್ತಿಲ್ಲ.

‘ಸೋಂಕು ಇರುವ ಬಗ್ಗೆ ಅನುಮಾನ ಬಂದರೆ ನಾವು ಬೆಂಗಳೂರು ಅಥವಾ ಮಣಿಪಾಲಕ್ಕೆ ಮಾದರಿಯನ್ನು ಕೊರಿಯರ್‌ ಮೂಲಕ ಕಳುಹಿಸುತ್ತೇವೆ. ಸಾಮಾನ್ಯವಾಗಿ ಎರಡು ದಿನಗಳಲ್ಲಿ ವರದಿ ಬರುತ್ತದೆ. ರಜೆ ಇದ್ದರೆ ಮಾತ್ರ 4 ದಿನ ಆಗಬಹುದು’ ಎಂದು ಧಾರವಾಡದ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.

‘ಹುಬ್ಬಳ್ಳಿಯಲ್ಲಿ ಪ್ರಯೋಗಾಲಯ ಆರಂಭಿಸುವ ಕುರಿತು ನಾಲ್ಕೈದು ವರ್ಷಗಳಿಂದ ಚರ್ಚೆ ನಡೆದಿದೆ. ಇಲ್ಲಿ ಪ್ರಯೋಗಾಲಯ ಆದರೆ ಸಾಕಷ್ಟು ಜನರಿಗೆ ಬೇಗ ಚಿಕಿತ್ಸೆ ಸಿಗಲಿದೆ. ಎಚ್‌1ಎನ್‌1 ದೃಢವಾಗದಿದ್ದರೂ ಬಲವಾದ ಅನುಮಾನ ಇದ್ದರೆ, ಚಿಕಿತ್ಸೆ ಆರಂಭಿಸುತ್ತೇವೆ. ಪ್ರಯೋಗಾಲಯ ವರದಿ ಸಿಕ್ಕಿದ್ದರೆ ನಿಖರ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ’ ಎಂದು ವಿವರಿಸಿದರು.

ಮಾದರಿ ಜಿಲ್ಲೆ ಉಡುಪಿ

ಕಳೆದ ವರ್ಷ ಎಚ್‌1ಎನ್‌1ಗೆ ಉಡುಪಿ ಜಿಲ್ಲೆಯಲ್ಲಿ ಆರು ಮಂದಿ ಮೃತಪಟ್ಟಿದ್ದರು. 524 ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ಬಾರಿ ಪ್ರಕರಣಗಳೂ ಕಡಿಮೆ. ಸಾವೂ ಆಗಿಲ್ಲ.

‘ನಮ್ಮ ಜಿಲ್ಲೆಯಲ್ಲಿ ಜನರು ಜಾಗೃತರಾಗಿದ್ದಾರೆ. ಗಂಟಲು ನೋವು, ಜ್ವರ ಹೆಚ್ಚಿದ್ದರೆ ತಕ್ಷಣ ಆಸ್ಪತ್ರೆಗೆ ಬರುತ್ತಾರೆ. ಮಣಿಪಾಲ ಪ್ರಯೋಗಾಲಯ ಕೂಡ ಹತ್ತಿರದಲ್ಲೇ ಇದೆ. ಒಂದು ದಿನದಲ್ಲೇ ವರದಿ ಸಿಗುತ್ತದೆ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ರೋಗಿಗಳ ಆರೈಕೆಯಲ್ಲಿ ತೊಡಗುತ್ತಾರೆ. ಆರೋಗ್ಯ ಇಲಾಖೆಯಿಂದ ಕೂಡ ಸಾಕಷ್ಟು ಅರಿವು ಮೂಡಿಸಲಾಗಿದೆ’ ಎಂದು ಉಡುಪಿ ಜಿಲ್ಲೆಯ ಆರೋಗ್ಯಾಧಿಕಾರಿ ಹೇಳಿದರು.

ಸಾವಿನ ಸಂಖ್ಯೆ 31ಕ್ಕೆ ಏರಿಕೆ

ರಾಜ್ಯದಲ್ಲಿ ಈ ವರ್ಷ 1246 ಎಚ್‌1ಎನ್‌1 ಪ್ರಕರಣಗಳು ಕಂಡುಬಂದಿದ್ದು, 31 ಮಂದಿ ಸಾವನ್ನಪ್ಪಿದ್ದಾರೆ. ಶನಿವಾರ ಒಂದೇ ದಿನ 12 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ತುಮಕೂರು ಹಾಗೂ ಹಾಸನದಲ್ಲಿ ತಲಾ ನಾಲ್ಕು ರೋಗಿಗಳು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT