ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ವಿರುದ್ಧ ರಾಹುಲ್‌ಗೆ ದೇವೇಗೌಡ ದೂರು

ಕಾಂಗ್ರೆಸ್‌ ಅಧ್ಯಕ್ಷರನ್ನು ಭೇಟಿಮಾಡಿದ ದೇವೇಗೌಡ
Last Updated 10 ಜೂನ್ 2019, 19:24 IST
ಅಕ್ಷರ ಗಾತ್ರ

ನವದೆಹಲಿ: ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಮಾಡಿ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಹೊಸ್ತಿಲಲ್ಲಿ ನಡೆದ ಈ ಬೆಳವಣಿಗೆಯು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಇಲ್ಲಿನ ತುಘಲಕ್‌ ರಸ್ತೆಯಲ್ಲಿರುವ ರಾಹುಲ್‌ ಗಾಂಧಿ ನಿವಾಸಕ್ಕೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿದ ದೇವೇಗೌಡರು ಸುಮಾರು ಅರ್ಧ ಗಂಟೆ ಅವರ ಜೊತೆ ಮಾತುಕತೆ ನಡೆಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದ ಕಾಂಗ್ರೆಸ್‌ನ ಕೆಲವು ಹಿರಿಯ ಮುಖಂಡರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ದೇವೇಗೌಡರು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸಂಪುಟ ಪುನರ್‌ರಚನೆ ಮಾಡಬೇಕು ಎಂಬ ಕುಮಾರಸ್ವಾಮಿ ಅವರ ಅಭಿಪ್ರಾಯವನ್ನು ವಿರೋಧಿಸುತ್ತಿರುವ ಸಿದ್ದರಾಮಯ್ಯ ಅವರ ನಿಲುವಿಗೆ ದೇವೇಗೌಡರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಕೆಲವು ಮುಖಂಡರನ್ನು ನಿಯಂತ್ರಿಸದ ಹೊರತು ಸಮ್ಮಿಶ್ರ ಸರ್ಕಾರವನ್ನು ಸುಲಲಿತವಾಗಿ ನಡೆಸಲು ಸಾಧ್ಯವಿಲ್ಲ’ ಎಂದು ದೇವೇಗೌಡ ದೂರಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಆಂತರಿಕ ಕಲಹವನ್ನು ಪ್ರಸ್ತಾಪಿಸಿರುವ ದೇವೇಗೌಡರು,ಕಲಹ ಮುಂದುವರಿದರೆ ಮೈತ್ರಿ ಸರ್ಕಾರಕ್ಕೆ ತೊಂದರೆ ಆಗಬಹುದೆಂಬ ಎಚ್ಚರಿಕೆ ನೀಡಿದ್ದಾರೆ. ಬಳ್ಳಾರಿಯಲ್ಲಿ 3,700 ಎಕರೆ ಭೂಮಿಯನ್ನು ಜಿಂದಾಲ್‌ ಸಂಸ್ಥೆಗೆ ನೀಡುವ ಸಂಪುಟ ಸಮಿತಿಯ ತೀರ್ಮಾನವನ್ನು ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್‌.ಕೆ. ಪಾಟೀಲ ಹಾಗೂ ಇತರ ನಾಯಕರು ಬಹಿರಂಗವಾಗಿ ವಿರೋಧಿಸುತ್ತಿರುವ ವಿಚಾರವನ್ನೂ ಅವರು ರಾಹುಲ್‌ ಗಮನಕ್ಕೆತಂದಿದ್ದಾರೆ.

‘ಭೂಮಿಯನ್ನು ನೀಡುವ ಪ್ರಸ್ತಾವವನ್ನು ಕೈಗಾರಿಕಾ ಸಚಿವಾಲಯ ಮುಂದಿಟ್ಟಿದೆ. ಆ ಖಾತೆಯನ್ನು ಕಾಂಗ್ರೆಸ್‌ ಮುಖಂಡ ಕೆ.ಜೆ. ಜಾರ್ಜ್‌ ಅವರು ನಿರ್ವಹಿಸುತ್ತಿರುವಾಗ, ನಿಮ್ಮದೇ ಪಕ್ಷದ ಮುಖಂಡರು ಸಾರ್ವಜನಿಕವಾಗಿ ಆ ತೀರ್ಮಾನವನ್ನು ಟೀಕಿಸುವುದು ಎಷ್ಟು ಸರಿ’ ಎಂದು ದೇವೆಗೌಡರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಕಳೆದ ಒಂದು ವಾರದಿಂದ ದೇವೇಗೌಡರು ರಾಹುಲ್‌ ಅವರನ್ನು ಭೇಟಿಯಾಗುವ ಪ್ರಯತ್ನ ನಡೆಸುತ್ತಿದ್ದರು. ತಮ್ಮ ಮತಕ್ಷೇತ್ರ ವಯನಾಡ್‌ಗೆ ತೆರಳಿದ್ದ ರಾಹುಲ್‌, ಮೂರುದಿನಗಳ ಬಳಿಕ, ಭಾನುವಾರ ದೆಹಲಿಗೆ ಮರಳಿದ್ದರು. ಸೋಮವಾರ ಬೆಳಿಗ್ಗೆ ದೇವೇಗೌಡರು ಅವರನ್ನು ಭೇಟಿಮಾಡಿ, ಮಧ್ಯಾಹ್ನ ಬೆಂಗಳೂರಿಗೆ ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT