‘ನಾನೆಂದೂ ಕುಟುಂಬ ರಾಜಕಾರಣ ಮಾಡಿಲ್ಲ’– ಎಚ್‌.ಡಿ.ದೇವೇಗೌಡ

ಬುಧವಾರ, ಮಾರ್ಚ್ 20, 2019
23 °C

‘ನಾನೆಂದೂ ಕುಟುಂಬ ರಾಜಕಾರಣ ಮಾಡಿಲ್ಲ’– ಎಚ್‌.ಡಿ.ದೇವೇಗೌಡ

Published:
Updated:
Prajavani

ಬೆಂಗಳೂರು: ‘ನಾನು ಯಾವತ್ತೂ ಕುಟುಂಬ ರಾಜಕಾರಣ ಮಾಡಿಲ್ಲ. ಜೆಡಿಎಸ್‌ ಇರುವುದು ನನ್ನ ಕುಟುಂಬಕ್ಕೆ ಅಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡ ಅವರು, ಕುಟುಂಬದ ಸದಸ್ಯರು ಯಾವ ಕಾರಣಕ್ಕೆ ರಾಜಕಾರಣಕ್ಕೆ ಬಂದರು ಎಂಬುದನ್ನು ಉದಾಹರಣೆಗಳೊಂದಿಗೆ ಸಮರ್ಥಿಸಿಕೊಂಡರು.

‘ಕುಟುಂಬದ ಸದಸ್ಯರನ್ನು ನಾನು ಭ್ರಮೆ ಮೂಡಿಸಿ ಎಳೆದು ತಂದಿದ್ದರೆ, ಹಿಂದಿನ ಬಾಗಿಲಿನಿಂದ ವಿಧಾನಪರಿಷತ್ತಿಗೆ ಅಥವಾ ರಾಜ್ಯಸಭೆಗೆ ಸದಸ್ಯರನ್ನಾಗಿ ಮಾಡಿದ್ದರೆ ಎಲ್ಲರಿಗೂ ಪ್ರಶ್ನಿಸುವ ಹಕ್ಕು ಇದೆ. ಅವರು ಜನಗಳ ಮುಂದೆ ನಿಂತು ಪರೀಕ್ಷೆಯಲ್ಲಿ ಗೆದ್ದು ಬಂದರೆ ಯಾಕೆ ಹೊಟ್ಟೆಕಿಚ್ಚು ಪಡಬೇಕು’ ಎಂದು ಅವರು ಪ್ರಶ್ನಿಸಿದರು.

‘ಈಗ ಸಚಿವರಾಗಿರುವ ಡಿ.ಸಿ. ತಮ್ಮಣ್ಣ ಈ ಹಿಂದೆ ನನ್ನ ಜತೆಗೆ ಇರಲಿಲ್ಲ. ಅವರು ಮೊದಲು ಕಾಂಗ್ರೆಸ್‌ನಲ್ಲಿದ್ದರು. ಬಳಿಕ ಬಿಜೆಪಿಗೆ ಹೋದರು. ಸಂಬಂಧ ಆಗಿದ್ದು ಆಮೇಲೆ. ಬೀಗನ ಕರೆದುಕೊಂಡು ಶಾಸಕರನ್ನಾಗಿ ಹಾಗೂ ಮಂತ್ರಿಯನ್ನಾಗಿ ಮಾಡಿದ್ದಾರೆ ಎನ್ನುತ್ತಿದ್ದೀರಿ. ಅದಕ್ಕೆ ನಾನು ಏನು ಹೇಳಲಿ’ ಎಂದು ಗೌಡರು ನಕ್ಕರು.

ರೇವಣ್ಣ ಬಂದಿದ್ದು ಹೇಗೆ?: ‘ತುರ್ತು ಪರಿಸ್ಥಿತಿಯ ವೇಳೆಯಲ್ಲಿ ನಾನು ಜೈಲಿನಲ್ಲಿದ್ದೆ. ನನ್ನ ಕ್ಷೇತ್ರದಲ್ಲಿ ಪುಟ್ಟಸ್ವಾಮಿ ಗೌಡ ಅವರನ್ನು ವಿಧಾನ ‍ಪರಿಷತ್‌ ಸದಸ್ಯರನ್ನಾಗಿ ಮಾಡಿದೆ. ಅವರು ನನ್ನ ಬಂಧುವೇ, ಬಾವ ಮೈದುನನಾ’ ಎಂದು ಪ್ರಶ್ನಿಸಿದ ಗೌಡರು, ‘ ನಾನು ಜೈಲಿಗೆ ಹೋದಾಗ ಹಾರನಹಳ್ಳಿ ರಾಮಸ್ವಾಮಿ ಅವರು ಕಾಂಗ್ರೆಸ್‌ಗೆ ಹೊರಟರು.

ಸಿ.ಎಸ್‌.ಕೃಷ್ಣಪ್ಪ, ಮಂಜಪ್ಪ ಮತ್ತಿತರರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಆಗ ರೇವಣ್ಣ ಐಐಟಿಯಲ್ಲಿದ್ದ. ಅವನನ್ನು ಉದ್ಯಮಿ ಮಾಡಬೇಕು ಅಂತ ಇದ್ದೆ. ಈ ವೇಳೆಯಲ್ಲಿ ಊರಿಗೆ ಹೋಗಿ ರಾಜಕಾರಣಕ್ಕೆ ಬರಲು ಮುಂದಾದ. ಆವನಿಗೆ ಬುದ್ಧಿ ಹೇಳಿದೆವು. ಕೇಳಲಿಲ್ಲ. ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದ. ಆದರೆ, ಆವನನ್ನು ನಾನು ಅಧ್ಯಕ್ಷನನ್ನಾಗಿ ಮಾಡಲಿಲ್ಲ. ನಾನು ದಲಿತ ಹುಡುಕನನ್ನು ಅಧ್ಯಕ್ಷನನ್ನಾಗಿ ಹಾಗೂ ನಾಯಕ ಸಮುದಾಯದ ಯುವಕನನ್ನು ಉಪಾಧ್ಯಕ್ಷನನ್ನಾಗಿ ಮಾಡಿದೆ. ಇದರ ಮೂಲಕವೇ, ದೇವೇಗೌಡ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ತೀಕ್ಷ್ಮವಾಗಿ ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿ ಪ್ರವೇಶ: ‘ರಾಮಕೃಷ್ಣ ಹೆಗಡೆ ಅವರು ಪಿ.ಜಿ.ಆರ್‌. ಸಿಂಧ್ಯ ಅವರನ್ನು ಗೃಹ ಸಚಿವರನ್ನಾಗಿ ಮಾಡಿದರು. ಆ ವೇಳೆ, ಲೋಕಸಭಾ ಚುನಾವಣೆಗೆ ನಿಲ್ಲಿ ಎಂದು ಹೆಗಡೆ ಅವರು ಸಿಂಧ್ಯ ಮೇಲೆ ಒತ್ತಡ ಹೇರಿದರು. ಅದಕ್ಕೆ ಸಿಂಧ್ಯ ಒಪ್ಪಲಿಲ್ಲ. ವರದೇಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಯತ್ನಿಸಿದರು. ಅದಕ್ಕೆ ಅವರ ಕುಟುಂಬದವರು ಒಪ್ಪಲಿಲ್ಲ. ಆ ಸಂದರ್ಭದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪಕರಾಗಿದ್ದರು. ಅವರನ್ನು ಕರೆದುಕೊಂಡು ಬಂದರು. ಆತನ ಬಿ–ಫಾರಂ ತಂದಾಗ ಅದನ್ನು ಎಸೆದೆ. ಈಗಲೇ ಒಬ್ಬ ಮಗ ರಾಜಕಾರಣದಲ್ಲಿದ್ದಾನೆ. ಮತ್ತೊಬ್ಬ ಮಗ ಯಾಕೆ. ಪ್ರಾಣವನ್ನೇಕೆ ತೆಗೆಯುತ್ತೀರಿ ಎಂಬುದಾಗಿ ಪ್ರಶ್ನಿಸಿದೆ’ ಎಂದರು.

‘ಸಿದ್ದರಾಮಯ್ಯ, ಮೆರಾಜುದ್ದೀನ್‌ ಪಟೇಲ್‌ ಹಾಗೂ ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದು ಯಾರು. ಎ.ಕೃಷ್ಣಪ್ಪ ಅವರನ್ನು ಮನೆಗೆ ಹೋಗಿ ಕರೆದುಕೊಂಡು ಬಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿಲ್ಲವೇ. ಕಷ್ಟ ಬಂದಾಗ ಎಲ್ಲರೂ ಬಿಟ್ಟು ಹೋದರು’ ಎಂದರು.

ಎಂ.ಟೆಕ್‌ ಓದದೇ ರಾಜಕೀಯಕ್ಕೆ ಬಂದ ಪ್ರಜ್ವಲ್

‘ನನ್ನ ಮೊಮ್ಮಗ ಪ್ರಜ್ವಲ್‌ ಬಿ.ಇ. ಪದವೀಧರ. ಎಂ.ಟೆಕ್‌ ಮಾಡುವಂತೆ ಆತನಿಗೆ ಹೇಳಿದೆ. ವಿಧಾನಸಭಾ ಚುನಾವಣೆ ಮುಗಿದ ಮೇಲೆ ಮಾಡುತ್ತೇನೆ ಎಂದ. ಚುನಾವಣೆ ಮುಗಿದ ಮೇಲೆ ಈ ಬಗ್ಗೆ ಪ್ರಶ್ನಿಸಿದೆ. ಜಿಲ್ಲಾ ಪಂಚಾಯಿತಿ ಚುನಾವಣೆಯಾದ ಮೇಲೆ ಹೋಗುತ್ತೇನೆ ಎಂದ. ಹೀಗೆ ಸಮಯ ತಳ್ಳುತ್ತಾ ಹೋದ. ಆತನಿಗೆ ಆಸಕ್ತಿ ಇಲ್ಲ ಎಂಬುದು ಗೊತ್ತಾಯಿತು’ ಎಂದು ಗೌಡರು ವಿವರಿಸಿದರು.

‘ಆತನಿಗೆ ವಿಧಾನಸಭೆಗೆ ಹೋಗಲು ಮನಸ್ಸಿತ್ತು. ಆದರೆ, ಅವಕಾಶ ನೀಡಲಿಲ್ಲ. ಕೆಲವು ತಿಂಗಳುಗಳ ಹಿಂದೆ ಹಾಸನದ ಕಾರ್ಯಕ್ರಮವೊಂದರಲ್ಲಿ ‘ನನಗೆ ಈಗ 86 ವರ್ಷ. ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಪ್ರಜ್ವಲ್‌ ಸ್ಪರ್ಧೆ ಮಾಡುತ್ತಾನೆ’ ಎಂದು ಪ್ರಕಟಿಸಿದ್ದೆ. ಅದಕ್ಕೂ ಮುನ್ನ ಜಿಲ್ಲೆಯ ಎಲ್ಲ ನಾಯಕರ ಜತೆಗೆ ಸಮಾಲೋಚನೆ ಮಾಡಿದ್ದೆ’ ಎಂದು ಗೌಡರು ಸಮರ್ಥಿಸಿಕೊಂಡರು.

ಜನರ ಒತ್ತಡಕ್ಕೆ ಮಣಿದು ನಿಖಿಲ್ ಸ್ಪರ್ಧೆ

‘ನಿಖಿಲ್‌ ಕುಮಾರಸ್ವಾಮಿ ರಾಜಕೀಯ ಪ್ರವೇಶದಲ್ಲಿ ನನ್ನ ಪಾತ್ರ ಇಲ್ಲ’ ಎಂದು ದೇವೇಗೌಡರು ಹೇಳಿದರು.

‘ಆತ ಉದಯೋನ್ಮುಖ ಚಿತ್ರ ನಟ. ಎರಡು ತಿಂಗಳ ಹಿಂದೆ ಮಂಡ್ಯದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ. ಚುನಾವಣೆಗೆ ಸ್ಪರ್ಧಿಸುವಂತೆ ಯುವಕರು ಪ್ರೇರೇಪಿಸಿದರು. ದೊಡ್ಡವರು ತೀರ್ಮಾನ ಮಾಡಿದರೆ ನೋಡೋಣ ಎಂದು ನಿಖಿಲ್‌ ಉತ್ತರಿಸಿದ. ಬೆಂಗಳೂರಿನಲ್ಲಿ ತಿಂಗಳ ಹಿಂದೆ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಎಲ್ಲ ಮುಖಂಡರು ನಿಖಿಲ್‌ ರಾಜಕೀಯಕ್ಕೆ ಬರಬೇಕು ಎಂದು ಒತ್ತಾಯಿಸಿದರು. ಆಗ ನಾನು ಮತ್ತು ಕುಮಾರಸ್ವಾಮಿ ಉತ್ತರ ನೀಡಲಿಲ್ಲ. ಜನರ ಒತ್ತಡಕ್ಕೆ ಮಣಿದು ಸ್ಪರ್ಧೆಗೆ ಒಪ್ಪಿಗೆ ನೀಡಿದ್ದೇವೆ’ ಎಂದು ಸಮಜಾಯಿಷಿ ನೀಡಿದರು.

* ವೈದ್ಯರ ಮಗ ವೈದ್ಯನಾಗುವುದಿಲ್ಲವೇ, ವಕೀಲರ ಮಗ ವಕೀಲನಾಗುವುದಿಲ್ಲವೇ. ರಾಜಕಾರಣಿಗಳ ಮಕ್ಕಳು ರಾಜಕಾರಣಿಯಾದರೆ ತಪ್ಪೇನು

- ಎಚ್‌.ಡಿ. ದೇವೇಗೌಡ, ಜೆಡಿಎಸ್‌ ವರಿಷ್ಠ

ಬರಹ ಇಷ್ಟವಾಯಿತೆ?

 • 5

  Happy
 • 5

  Amused
 • 2

  Sad
 • 3

  Frustrated
 • 70

  Angry

Comments:

0 comments

Write the first review for this !