ಶನಿವಾರ, ಜನವರಿ 25, 2020
27 °C
‘ಕುಮಾರಸ್ವಾಮಿ ಅಡ್ರೆಸ್‌ಗೆ ಇಲ್ಲದಂತಾಗಿದ್ದಾರೆ’ ಎಂಬ ಬಿಎಸ್‌ವೈ ಹೇಳಿಕೆಗೆ ಮಾಜಿ ಸಿಎಂ ಎಚ್‌ಡಿಕೆ ಆಕ್ರೋಶ

ಜನ ನಿಮಗೆ ನನ್ನ ಅಡ್ರೆಸ್‌ ತೋರಿಸುತ್ತಾರೆ: ಬಿಎಸ್‌ವೈ ವಿರುದ್ಧ ಎಚ್‌ಡಿಕೆ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮುಂದಿನ ಮೂರುವರೆ ವರ್ಷ ರಾಜ್ಯದಲ್ಲಿ ನಾನೇ ಸಿಎಂ. ಕುಮಾರಸ್ವಾಮಿ ಅಡ್ರೆಸ್‌ಗೆ ಇಲ್ಲದಂತಾಗಿದ್ದಾರೆ,’ ಎಂಬ ಬಿ.ಎಸ್‌ ಯಡಿಯೂರಪ್ಪ ಅವರ ಹೇಳಿಕೆ ವಿರುದ್ಧ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. 

‘ಅತೀ ಶೀಘ್ರದಲ್ಲೇ ಜನ ನಿಮಗೆ ನನ್ನ ಅಡ್ರೆಸ್‌ ತೋರಿಸುತ್ತಾರೆ. ಅಷ್ಟಕ್ಕೂ 2006ರಲ್ಲಿ ಒಂದು ಸಚಿವ ಸ್ಥಾನಕ್ಕಾಗಿ ನನ್ನ ‘ಅಡ್ರೆಸ್‌‘ ಹುಡುಕಿಕೊಂಡು ಬಂದವರು ನೀವೇ ಅಲ್ಲವೇ? ನೆನಪಿಲ್ಲದಿದ್ದರೆ ಒಂದು ಬಾರಿ ನೆನಪಿಸಿಕೊಳ್ಳಿ,’ ಎಂದು ಕುಮಾರಸ್ವಾಮಿ ಅವರು ಟ್ವೀಟ್‌ ಮಾಡಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಮೃತಪಟ್ಟ ಮಂಗಳೂರಿನ ಯುವರಕ ಮನೆಗಳಿಗೆ ಇಂದು ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‌ಡಿಕೆ, ಯಡಿಯೂರಪ್ಪ ಅವರು ಅಧಿಕಾರದಲ್ಲಿ ಎಷ್ಟು ದಿನ ಇರುತ್ತಾರೆ ನೋಡೋಣ ಎಂದು ಹೇಳಿದ್ದರು. ಈ ವಿಷಯವಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯ ವೇಳೆ ಮಾತನಾಡಿದ್ದ ಯಡಿಯೂರಪ್ಪ, ’ಮುಂದಿನ ಮೂರುವರೆ ವರ್ಷಗಳ ಕಾಲ ನಾನೇ ಸಿಎಂ. ನನ್ನನ್ನು ಏನೂ ಮಾಡಲಾಗದು. ನೀವು (ಕುಮಾರಸ್ವಾಮಿ) ಅಡ್ರೆಸ್ಗೆ ಇಲ್ಲದಂತಾಗಿದ್ದೀರಿ ಎಂದು ಹೇಳಿದ್ದರು. ಇದೇ ವಿಚಾರವಾಗಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ಬಿಎಸ್‌ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಏನಿದೆ ಎಚ್‌ಡಿಕೆ ಟ್ವೀಟ್‌ನಲ್ಲಿ  

'ಮೂರೂವರೆ ವರ್ಷ ನಾನೇ ಸಿಎಂ, ಕುಮಾರಸ್ವಾಮಿ ಅಡ್ರೆಸ್‌ಗೆ ಇಲ್ಲದಂತಾಗಿದ್ದಾರೆ' ಎಂದಿದ್ದಾರೆ ಬಿಎಸ್‌ವೈ. ಶತಮಾನಗಳ ಕಾಲ ಭಾರತವನ್ನು ದಾಸ್ಯದಲ್ಲಿಟ್ಟುಕೊಂಡ ಬ್ರಿಟಿಷರ ಅಂಕುಶವಿಲ್ಲದಂತಿದ್ದ ಸಾಮ್ರಾಜ್ಯವನ್ನೇ ಈ ನೆಲದ ಜನ ಕೊನೆಗಾಣಿಸಿದ್ದಾರೆ. ಇನ್ನು ನಿಮ್ಮ ಮೂರು ವರ್ಷ ಯಾವ ಲೆಕ್ಕ? ನನ್ನ ಅಡ್ರೆಸ್‌ ಬಗ್ಗೆ ನೀವು ಮಾತನಾಡಿದ್ದೀರಿ ಬಿಎಸ್ವೈ ಅವರೇ. ನನ್ನ ಅಡ್ರೆಸ್‌ ತೋರಿಸುವುದು ಈ ನೆಲ, ಈ ಜನ. ಅತೀ ಶೀಘ್ರದಲ್ಲೇ ಜನ ನಿಮಗೆ ನನ್ನ ಅಡ್ರೆಸ್‌ ತೋರಿಸುತ್ತಾರೆ. ಅಷ್ಟಕ್ಕೂ 2006ರಲ್ಲಿ ಒಂದು ಸಚಿವ ಸ್ಥಾನಕ್ಕಾಗಿ ನನ್ನ ‘ಅಡ್ರೆಸ್‌‘ ಹುಡುಕಿಕೊಂಡು ಬಂದವರು ನೀವೇ ಅಲ್ಲವೇ? ನೆನಪಿಲ್ಲದಿದ್ದರೆ ಒಂದು ಬಾರಿ ನೆನಪಿಸಿಕೊಳ್ಳಿ,’ ಎಂದು ಕುಮಾರಸ್ವಾಮಿ ಅವರು ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ನೆನಪಿಸಿದ್ದಾರೆ.   

‘ಅಧಿಕಾರದ ಅಮಲು ನಿಮ್ಮ ಮೂಲಕ ಏನೇನನ್ನೋ ಹೇಳಿಸುತ್ತಿದೆ. ಅಂಕುಶವಿಲ್ಲದಂತಿದ್ದ ಬಿಳಿಯರ ಸಾಮ್ರಾಜ್ಯವನ್ನೇ ಈ ಜನ ಅಂತ್ಯಗೊಳಿಸಿದ್ದಾರೆ. ಸಣ್ಣ ಪ್ರಾಂತ್ಯವನ್ನು ಮುನ್ನಡೆಸಿದರೂ, ಉತ್ತಮ ಆಡಳಿತ ನೀಡಿದ ಕೆಂಪೇಗೌಡರ ಪ್ರಾಂತ್ಯವೂ ಇದೇ ನೆಲದಲ್ಲೇ ಅಳಿದಿದೆ. ಆದರೆ, ಇಲ್ಲಿ ಉಳಿದಿದ್ದು ಹೆಸರು. ನಿಮ್ಮ–ನಮ್ಮ ವಿಚಾರದಲ್ಲೂ ಇದು ಅನ್ವಯ.  ಅಧಿಕಾರದ ಮದದಲ್ಲಿ ಆಣೆಗಳನ್ನಿಟ್ಟವರನ್ನೇ ನಮ್ಮ ಜನ ಬಿಟ್ಟಿಲ್ಲ. ಅವರಿಗೆ ನನ್ನ ಅಡ್ರೆಸ್‌ ತೋರಿಸಿದ್ದಾರೆ. ಇನ್ನು ನೀವು ಅಡ್ರೆಸ್‌ ಕೇಳಿದಾಗ್ಯೂ ಜನ ನನ್ನ ಅಡ್ರೆಸ್‌ ತೋರಿಸದೇ ಬಿಟ್ಟಾರೆಯೇ? ಎಚ್ಚರದಿಂದಿರಿ,’ ಎಂದು ಬಿ.ಎಸ್‌ ಯಡಿಯೂರಪ್ಪ ಅವರನ್ನು ಟೀಕಿಸುವ ಜೊತೆಗೇ, ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು