ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಜನರ ಜೀವ ಉಳಿಸಿ, ಕಾಂಗ್ರೆಸ್ ವಿಶ್ವಾಸ ಗಳಿಸಿ: ಸರ್ಕಾರಕ್ಕೆ ಎಚ್‌ಡಿಕೆ ಸಲಹೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸರ್ಕಾರದ ಲೋಪ ಎತ್ತಿಕೊಂಡು ಆರೋಪ ಮಾಡುವ ಕಾಲ ಇದಲ್ಲ. ಜನರ ಜೀವದ ಜತೆಗೆ ಚೆಲ್ಲಾಟವಾಡದೆ ಅವರ ಜೀವ ಉಳಿಸುವತ್ತ ಗಮನ ಹರಿಸಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಈ ಬಗ್ಗೆ ಗುರುವಾರ ಹೇಳಿಕೆ ನೀಡಿರುವ ಅವರು, ‘ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಸದ್ಯ ಜೆಡಿಎಸ್ ಅಂತಹ ಆರೋಪ ಮಾಡುವುದಿಲ್ಲ. ಸರ್ಕಾರ ಎಲ್ಲಿ ಲೋಪ ಎಸಗಿದೆ ಎಂಬುದನ್ನು ಇನ್ನಾದರೂ ಅರ್ಥ ಮಾಡಿಕೊಂಡು ಜನರ ರಕ್ಷಣೆಗೆ ಮುಂದಾಗಬೇಕು’ ಎಂದು ಹೇಳಿದ್ದಾರೆ.

‘ಹಣ ದುರುಪಯೋಗ ಆಗಿದೆ ಎಂಬ ಆರೋಪಕ್ಕೆ ಇನ್ನು ಮುಂದಾದರೂ ಅವಕಾಶ ಇಲ್ಲದ ರೀತಿಯಲ್ಲಿ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ. ಪ್ರಮುಖ ಹಣಕಾಸು ನಿರ್ಧಾರ ಕೈಗೊಳ್ಳುವಾಗ ಅವರನ್ನೂ ಸೇರಿಸಿಕೊಳ್ಳಿ. ಈ ಮೂಲಕ ಪಾರದರ್ಶಕ ವ್ಯವಹಾರ ಮಾಡಿ’ ಎಂದು ಅವರು ಸಲಹೆ ನೀಡಿದ್ದಾರೆ.

‘ಬೆಂಗಳೂರಿನಲ್ಲಿ ಎಂಟು ವಲಯ ಮಾಡಿ, ಎಂಟು ಸಚಿವರಿಗೆ ಹೊಣೆ ನೀಡುವ ಮಾತನಾಡಿದ್ದೀರಿ. ಅದರೆ ಪರಸ್ಪರ ಹೊಂದಾಣಿಕೆಯ ಕೊರತೆಯನ್ನು ಮೊದಲಾಗಿ ನಿವಾರಿಸಿ. ಖಾಸಗಿ ವೈದ್ಯರಿಗೆ, ಸಿಬ್ಬಂದಿಗೆ ಸರ್ಕಾರದ ಸೌಲಭ್ಯ ವಿಸ್ತರಿಸಿ, ಬಿಐಇಸಿಗೆ ದಿನಕ್ಕೆ ₹ 80 ಲಕ್ಷ ಬಾಡಿಗೆ ಕೊಡುವ ನೀವು ಸಣ್ಣಪುಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ಸೌಲಭ್ಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಿ. ಆಗ ರೋಗಿಗಳ ಕಷ್ಟವೂ ನಿವಾರಣೆಯಾಗುತ್ತದೆ. ಎಂದು ಕುಮಾರಸ್ವಾಮಿ ಹೇಳಿದ್ದಾರೆ.‌

‘ಕೋವಿಡ್‌ ಪರೀಕ್ಷೆ ನಡೆದು ಒಂದು ವಾರವಾದರೂ ಫಲಿತಾಂಶ ಬರದೆ ಇರುವ ಸ್ಥಿತಿ ಇದ್ದು, ಅದನ್ನು ಮೊದಲಾಗಿ ಸರಿಪಡಿಸಿ' ಎಂದು ಕೇಳಿಕೊಂಡಿದ್ದಾರೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು