ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗೋಚರ ಯುದ್ಧ: ರೈತರ ರಕ್ಷಣೆಗೆ ಎಚ್‌ಡಿಕೆ ಒತ್ತಾಯ

Last Updated 30 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ವೈರಸ್‌ನ ಅಗೋಚರ ಯುದ್ಧದ ವಿರುದ್ಧ ಹೋರಾಡುವುದರ ಜತೆಗೆ ನಮ್ಮವರನ್ನು ಮತ್ತು ರೈತರನ್ನು ರಕ್ಷಿಸುವುದು ಎಲ್ಲರ ಕರ್ತವ್ಯ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ಬೆಳಿಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಡ್ಯದಲ್ಲಿ ಸಪೋಟ ರಸ್ತೆಗೆ ಸುರಿದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ದ್ರಾಕ್ಷಿಯನ್ನು ತಿಪ್ಪೆಗೆ ಸುರಿದಿದ್ದಾರೆ. ಶಿವಮೊಗ್ಗದಲ್ಲಿ ಹಾಲು ನಿಲ್ಲಿಸಿರುವ ಮತ್ತು ಕೋಲಾರದಲ್ಲಿ ಟೊಮೆಟೊ ನಾಶ ಮಾಡಿರುವ ಘಟನೆಗಳು ನಡೆದಿವೆ. ಇದು ರೈತರ ಸಂಕಷ್ಟಗಳನ್ನು ವಿವರಿಸುವ ದಾರುಣ ಘಟನೆಗಳು’ ಎಂದು ಅವರು ಹೇಳಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಇದು ವಿಕೋಪಕ್ಕೆ ಹೋಗಲೂ ಬಹುದು ಎಂಬ ಆತಂಕ ಕಾಡುತ್ತಿದೆ ಎಂದು ತಿಳಿಸಿದ್ದಾರೆ.

‘ಕೃಷಿ ಉತ್ಪನ್ನಗಳ ಖರೀದಿಗೆ ಸರ್ಕಾರ ತಕ್ಷಣವೇ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲದಿದ್ದರೆ ಕೃಷಿ ವಲಯ ತೊಂದರೆಗೆ ಸಿಲುಕುತ್ತದೆ. ಅದರ ಪರಿಣಾಮಗಳು ಊಹಿಸಲೂ ಅಸಾಧ್ಯ. ರೈತ ಕುಟುಂಬಗಳನ್ನು ಆಪೋಷನ ತೆಗೆದುಕೊಳ್ಳುವ ಜತೆಗೆ ಆರ್ಥಿಕತೆಗೂ ಪೆಟ್ಟು ನೀಡುತ್ತದೆ. ಇದನ್ನು ನೆನೆದರೆ ನನಗಂತೂ ಆತಂಕವಾಗುತ್ತದೆ’ ಎಂದು ಹೇಳಿದ್ದಾರೆ.

‘ವೈರಸ್‌ ಹರಡುವುದನ್ನು ತಡೆಯಲು ಗ್ರಾಮ ಪಂಚಾಯಿತಿ, ವಾರ್ಡ್‌ ಮಟ್ಟದಲ್ಲಿ ಸ್ವಯಂ ಸೇವಕರು, ಸಂಘ ಸಂಸ್ಥೆಗಳು, ಅಧಿಕಾರಿಗಳ ಸಮಿತಿ ರಚಿಸಬೇಕು. ಅಲ್ಲದೆ, ಹಾಪ್‌ಕಾಮ್ಸ್‌, ಕೆಎಂಎಫ್‌ ಅನ್ನು ಬಳಸಿಕೊಂಡು ಸ್ವಯಂ ಸೇವಕರ ಗುಂಪುಗಳನ್ನು ರಚಿಸಿ ರೈತರಿಂದ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ, ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ರೈತರಿಂದ ಖರೀದಿಸಿದ ಉತ್ಪನ್ನಗಳನ್ನು ನಗರಗಳ ವಾರ್ಡ್‌ ಮಟ್ಟದಲ್ಲಿ ವಿತರಣೆ ಮಾಡಲು ವ್ಯವಸ್ಥೆ ಮಾಡಬೇಕು. ದೊಡ್ಡ ದೊಡ್ಡ ಮಾಲ್‌ಗಳನ್ನೂ ಮೀರಿ ಸಣ್ಣ ಪುಟ್ಟ ಅಂಗಡಿಗಳಿಗೆ ರೈತರ ಉತ್ಪನ್ನಗಳನ್ನು ತಲುಪಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT