ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರ ಚರ್ಚೆಗೆ ಗ್ರಾಸವಾದ ಎಚ್‌ಡಿಕೆ ಟ್ವೀಟ್‌: ಸಾರ್ವಜನಿಕ ವಲಯದಲ್ಲಿ ಆಕ್ರೋಶ

Last Updated 11 ಡಿಸೆಂಬರ್ 2019, 1:53 IST
ಅಕ್ಷರ ಗಾತ್ರ

ಬೆಂಗಳೂರು: ಉಪ ಚುನಾವಣೆ ಸೋಲಿನ ಬಳಿಕ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಮಾಡಿದ ಟ್ವೀಟ್‌ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜಕೀಯ ನಾಯಕರೂ ಕಟುವಾಗಿ ಟೀಕಿಸಿದ್ದಾರೆ.

ಫಲಿತಾಂಶದ ಕುರಿತು ಟ್ವೀಟ್‌ ಮಾಡಿದ್ದ ಕುಮಾರಸ್ವಾಮಿ, ‘ಇದೊಂದು ‘ಅಸಹ್ಯ’ ಸರ್ಕಾರ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಮೂದಲಿಸಿದ್ದ ಮಾತಿಗೆ ಸಹಮತ ವ್ಯಕ್ತಪಡಿಸುವಂತೆ ರಾಜ್ಯದ 15 ಕ್ಷೇತ್ರಗಳ ಪ್ರಜ್ಞಾವಂತ ಮತದಾರರು ‘ಪವಿತ್ರ’ ಮತ್ತು ‘ಸುಭದ್ರ’ಸರ್ಕಾರಕ್ಕೆ ಮುದ್ರೆ ಒತ್ತಿರುವುದಕ್ಕೆ ಮನದಾಳದ ಅಭಿನಂದನೆಗಳು’ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಶ್ರೀರಾಮುಲು, ‘ಯಾರು ಸಹ್ಯ, ಯಾರು ಅಸಹ್ಯ ಎಂಬುದನ್ನು ಪ್ರಜ್ಞಾವಂತ ಮತದಾರರು ನಿರ್ಧರಿಸಿದ್ದಾರೆ. ರಾಜಕೀಯ ಹೋರಾಟದಲ್ಲಿ ಸೋಲು, ಗೆಲುವು ಸಾಮಾನ್ಯ. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಬಳಸಿಕೊಳ್ಳುವುದೇ ನಿಜವಾದ ರಾಜಕಾರಣಿಯ ಗುಣ. ಅದನ್ನು ಬಿಟ್ಟು ಜನರ ತೀರ್ಪಿನ ಬಗ್ಗೆ ವ್ಯಂಗ್ಯದ ಟೀಕೆಗಳು ವ್ಯಕ್ತಿಯ ಮನಸ್ಥಿತಿಯನ್ನು ಹೇಳುತ್ತದೆ. ಸೋಲನ್ನು ಒಪ್ಪಿಕೊಂಡು ಜನರನ್ನು ಗೌರವಿಸುವ ಗುಣ ಬರುವವರೆಗೆ ಗೆಲುವಿನ ರುಚಿ ನೋಡಲು ಸಾಧ್ಯವಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಮತ್ತೊಬ್ಬ ಸಚಿವ ಸಿ.ಟಿ. ರವಿ, ‘ಅಪ್ಪ-ಮಕ್ಕಳ ನಾಟಕ ಕಂಪನಿ ಈ ಬಾರಿ ಎಷ್ಟೇ ಕಣ್ಣೀರು ಸುರಿಸಿದರೂ ನಂಬದ ಪ್ರಜ್ಞಾವಂತ ಮತದಾರರು ಮತ್ತೊಮ್ಮೆ ‘ಅಪವಿತ್ರ ಮೈತ್ರಿ’ ಮತ್ತು ‘ಅಭದ್ರ ಸರ್ಕಾರ’ ರಚಿಸುವ ಕನಸು ಕಂಡವರನ್ನು ‘ಅಸಹ್ಯ’ ಪಟ್ಟುಕೊಳ್ಳುವ ರೀತಿಯಲ್ಲಿ ತಿರಸ್ಕರಿಸಿದ್ದಾರೆ. ಎಡಬಿಡಂಗಿ ರಾಜಕಾರಣ ಮಾಡುವವರ ಠೇವಣಿ ಕಳೆದ ಜನರಿಗೆ ಮನದಾಳದ ಅಭಿನಂದನೆಗಳು’ ಎಂದು ತಿರುಗೇಟು ನೀಡಿದ್ದಾರೆ.

‘37 ಸೀಟು ಗೆದ್ದು, ಬಹುಮತ ಇರದಿದ್ದರೂ ಸಿಎಂ ಕುರ್ಚಿಗೆ ಫೆವಿಕಾಲ್‌ ಹಾಕಿಕೊಂಡು ಕೂತಿದ್ರು. ಆಗ ಅಸಹ್ಯ ಅನ್ನೋ ಪದ ನಿಮಗೆ ನೆನಪಿಗೆ ಬರಲಿಲ್ವೆ ಕುಮಾರಣ್ಣ’ ಎಂದು ಪೂರ್ವಿ ರಾಜ್‌ ಅರಸು ಎಂಬುವರು ಟ್ವೀಟ್‌ ಮಾಡಿದ್ದಾರೆ.

‘ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿರುವುದು ಬೇರೆ ಪಕ್ಷಗಳಿಗೆ ಪಾಠ ಆಗಬಹುದು. ರೈತರಿಗೆ ಮೋಸ ಮಾಡುವುದನ್ನು, ರೈತರ ಹೆಸರಲ್ಲಿ ರಾಜಕೀಯ ಮಾಡುವವರನ್ನು ಯಾರೂ ಸಹಿಸಲಾರರು. ಮುಂದಿನ ದಿನಗಳಲ್ಲಿ ಚಿಂತನೆ ಬದಲಾಗಲಿ, ಮಾತಿಗಿಂತ ಕೃತಿ ಬಲವಾಗಲಿ’ ಎಂದು ಚಂದ್ರು ಕೆನ್ನಾಳು ಎಂಬುವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT