ಮಂಗಳವಾರ, ಫೆಬ್ರವರಿ 18, 2020
27 °C
₹ 10 ಕಾರ್ಡ್‌ಗೆ ₹ 200 ಸಂಗ್ರಹ * 20ಕ್ಕೂ ಅಧಿಕ ಕೇಂದ್ರಗಳ ಪರವಾನಗಿ ರದ್ದು

ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಕಾರ್ಡ್‌ಗೆ ವಸೂಲಿ ಕಾಟ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ (ಎಬಿ–ಎಆರ್‌ಕೆ) ₹10 ಶುಲ್ಕದಲ್ಲಿ ವಿತರಿಸಬೇಕಾದ ಕಾರ್ಡ್‌ಗೆ ₹200 ರವರೆಗೂ ವಸೂಲಿ ಮಾಡುತ್ತಿರುವುದು ಬಯಲಿಗೆ ಬಂದಿದ್ದು, ದೂರುಗಳು ದಾಖಲಾಗಿದೆ.

ಮಾರಣಾಂತಿಕ ಕಾಯಿಲೆಗಳ ವ್ಯಾಪ್ತಿಯಲ್ಲಿ ಬರುವ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಸೇರಿದಂತೆ ಒಟ್ಟು 1,650 ಚಿಕಿತ್ಸೆಗಳನ್ನು ಯೋಜನೆಯಡಿ ನೀಡಲಾಗುತ್ತಿದೆ. ಇದರ ಲಾಭ ಪಡೆಯಲು ಆರೋಗ್ಯ ಕಾರ್ಡ್ ಅಗತ್ಯ. ಆರೋಗ್ಯ ಇಲಾಖೆ ನೀಡುವ ಕಾರ್ಡ್‌ಗಳಿಗೆ ₹10 ಹಾಗೂ ಪಿವಿಸಿ ಕಾರ್ಡ್‌ಗಳಿಗೆ ₹35 ನಿಗದಿಪಡಿಸಿದ್ದು, 1 ಕೋಟಿಗೂ ಅಧಿಕ ಮಂದಿ ಈಗಾಗಲೇ ಆರೋಗ್ಯ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ.

ಕಾರ್ಡ್‌ಗಳನ್ನು ಸರ್ಕಾರಿ ಆಸ್ಪತ್ರೆ, ಕರ್ನಾಟಕ ಒನ್, ಬೆಂಗಳೂರು ಒನ್, ಸೇವಾಸಿಂಧು ಕೇಂದ್ರ ಹಾಗೂ ಬಾಪೂಜಿ ಸೇವಾ ಕೇಂದ್ರದಲ್ಲಿ ನೀಡಲಾಗುತ್ತಿದೆ. ಆದರೆ, ರಾಜ್ಯದ ವಿವಿಧೆಡೆ ಕಾರ್ಡ್‌ ವಿತರಕರು ಅಧಿಕ ಹಣ ವಸೂಲಿ ಮಾಡಿರುವ ಬಗ್ಗೆ ದಾಖಲಾತಿಗಳು ‘ಪ್ರಜಾವಾಣಿ’ಗೆ ದೊರೆತಿವೆ. ಇನ್ನೊಂದೆಡೆ ಆರೋಗ್ಯ ಸಹಾಯವಾಣಿ 104ಕ್ಕೂ ಈ ಬಗ್ಗೆ ದೂರುಗಳು ಬರುತ್ತಿದ್ದು, ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ದೂರು ದಾಖಲಾಗಿದ್ದು, ಮಂಗಳೂರು ಒಂದರಲ್ಲೇ 13 ಕೇಂದ್ರಗಳಿಗೆ ನೋಟಿಸ್ ನೀಡಲಾಗಿದೆ. ಅದರಲ್ಲಿ 7 ಕೇಂದ್ರಗಳ ಮುಖ್ಯಸ್ಥರಿಗೆ ನೀಡಿದ್ದ ಕಾರ್ಡ್‌ ವಿತರಣೆಯ ಐ.ಡಿ.ಯನ್ನೇ ರದ್ದುಪಡಿಸಲಾಗಿದೆ. ಯಾದಗಿರಿಯ ವಡಗೇರಾ ತಾಲ್ಲೂಕಿನ ಜನರಿಗೆ ವ್ಯಕ್ತಿಯೊಬ್ಬ ₹150 ಪಡೆದು ಕಾರ್ಡ್‌ಗಳನ್ನು ವಿತರಿಸಿದ್ದಾನೆ. ಬೆಳಗಾವಿಯ ಕೆಲ ಕೇಂದ್ರಗಳಲ್ಲಿ ₹200 ಪಡೆದು ಕಾರ್ಡ್‌ಗಳನ್ನು ನೀಡಲಾಗಿದೆ. 

ಅನುಮತಿ ಪಡೆಯದೇ ಶಿಬಿರ: ಆರೋಗ್ಯ ಕಾರ್ಡ್‌ಗಳನ್ನು ಪಲಾನುಭವಿಗಳಿಗೆ ತಲುಪಿಸಲು ಶಿಬಿರಗಳನ್ನು ನಡೆಸಲಾಗುತ್ತಿದೆ. ಆದರೆ, ಕೆಲ ವ್ಯಕ್ತಿಗಳು ಇಲಾಖೆಯ ಅನುಮತಿ ಪಡೆಯದೆಯೇ ಶಿಬಿರ ನಡೆಸಿ, ಕಾರ್ಡ್‌ಗಳನ್ನು ವಿತರಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ‌ಕಾರ್ಡ್‌ ಹೆಸರಿನಲ್ಲಿ 898 ಅರ್ಜಿಗಳನ್ನು ಸಂಗ್ರಹಿಸಿ, ಅವರಿಂದ ತಲಾ ₹100 ಪಡೆದುಕೊಂಡಿದ್ದಾನೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆಯಲ್ಲಿ ಕೂಡ ಅನುಮತಿ ಪಡೆಯದೇ ಶಿಬಿರ ನಡೆಸಲಾಗಿದೆ. ಇದೇ ರೀತಿ ಮಂಡ್ಯ, ರಾಮನಗರ ಸೇರಿದಂತೆ ವಿವಿಧೆಡೆ ಆರೋಗ್ಯ ಕಾರ್ಡ್‌ ಹೆಸರಿನಲ್ಲಿ ಜನರನ್ನು ಮೋಸದ ಜಾಲಕ್ಕೆ ಬೀಳಿಸುವ ಪ್ರಕರಣ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರವಾನಗಿ ರದ್ದು

ಆರೋಗ್ಯ ಕಾರ್ಡ್‌ ಹೆಸರಿನಲ್ಲಿ ಅಧಿಕ ಹಣ ವಸೂಲಿ ಮಾಡಿದ 20ಕ್ಕೂ ಅಧಿಕ ಮಂದಿಯ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿ, ಅವರ ಪರವಾನಗಿ ರದ್ದು ಮಾಡಲಾಗಿದೆ. 

‘ಹೆಚ್ಚುವರಿ ಹಣ ವಸೂಲು ಮಾಡಿದಲ್ಲಿ ಆರೋಗ್ಯಾಧಿಕಾರಿಗೆ ದೂರು ನೀಡಬೇಕು. ಸಹಾಯವಾಣಿ ಸಂಖ್ಯೆ 104ರ ಮೂಲಕವೂ ತಿಳಿಸಬಹುದು. ಏಜೆಂಟ್‌ಗಳು ತಮ್ಮ ಐ.ಡಿ. ಮತ್ತು ಪಾಸ್‌ವರ್ಡ್‌ಗಳನ್ನು ಬೇರೆಯವರಿಗೆ ನೀಡಿ, ಕಾರ್ಡ್ ವಿತರಿಸಿದರೂ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ಹೇಗೆ ಹಣ ವಸೂಲಿ?

ಕೇಂದ್ರಗಳಲ್ಲಿ ಕಾರ್ಡ್‌ಗಳ ದರಪಟ್ಟಿಯನ್ನು ಕಡ್ಡಾಯವಾಗಿ ಹಾಕಿರಬೇಕು. ಆದರೆ, ಕೆಲವು ಕೇಂದ್ರಗಳು ದರ ಪಟ್ಟಿ ಪ್ರದರ್ಶಿಸುತ್ತಿಲ್ಲ. ಫಲಾನುಭವಿಗಳಿಗೆ ತಪ್ಪು  ಮಾಹಿತಿ ನೀಡಿ, ಅಧಿಕ ಹಣ ಪಡೆಯಲಾಗುತ್ತಿದೆ. ಕೆಲವೆಡೆ ದಾಖಲಾತಿ ಲೋಪ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಹಣ ವಸೂಲಿ ಮಾಡಲಾಗುತ್ತಿದೆ.

ಅಂಕಿ–ಅಂಶಗಳು

* ₹5 ಲಕ್ಷ - ಬಿಪಿಎಲ್ ಕುಟುಂಬಗಳಿಗೆ ಸಿಗುವ ಚಿಕಿತ್ಸಾ ಮೊತ್ತ

* ₹1.50 ಲಕ್ಷ - ಎಪಿಎಲ್ ಕುಟುಂಬಗಳಿಗೆ ಸಿಗುವ ಚಿಕಿತ್ಸಾ ಮೊತ್ತ

* 1.07 ಕೋಟಿ - ಯೋಜನೆಯಡಿ ಆರೋಗ್ಯ ಕಾರ್ಡ್ ಪಡೆದವರು

* 776 - ಚಿಕಿತ್ಸೆ ಒದಗಿಸುತ್ತಿರುವ ಆಸ್ಪತ್ರೆಗಳು

***

ಅಧಿಕ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಕೆಲವರ ವಿರುದ್ಧ ಕ್ರಮ ಕೈಗೊಂಡಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು
–ಪಂಕಜ್ ಕುಮಾರ್ ಪಾಂಡೆ, ಆರೋಗ್ಯ ಇಲಾಖೆ ಆಯುಕ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು