ಸೋಮವಾರ, ಏಪ್ರಿಲ್ 19, 2021
32 °C
ಗಾಳಿ, ಮಳೆ: ಐದು ಸಾವಿರ ಕೋಳಿ ಸಾವು, ಅಪಾರ ಹಾನಿ

ರಾಜ್ಯದ ವಿವಿಧೆಡೆ ಮಳೆ: ಸಿಡಿಲಿಗೆ ರೈತ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು/ ಕಾರವಾರ: ರಾಜ್ಯದ ವಿವಿಧೆಡೆ ಶನಿವಾರ ಸಂಜೆ ಮಳೆಯಾಗಿ ತಂಪೆರೆದಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ನೇರಲಗ ಗ್ರಾಮದಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು ರೈತ ನರಸಪ್ಪ ಜಯವಂತ ಕದಂ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ, ಮಂಡ್ಯ ಜಿಲ್ಲೆಯ ಪಾಂಡವಪುರ, ಚಾಮರಾಜನಗರ ಜಿಲ್ಲೆಯ ಬಂಡೀಪುರ ಜೊತೆಗೆ ಕೊಡಗು, ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ.

ಮುಂಡಗೋಡ ತಾಲ್ಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಭಾರಿ ಗಾಳಿ, ಮಳೆಗೆ ಕೋಳಿ ಫಾರಂನ ಚಾವಣಿ ಬಿದ್ದು ಅಂದಾಜು 5,000 ಕೋಳಿಗಳು ಸತ್ತಿವೆ. ಸ್ಥಳೀಯ ನಿವಾಸಿ ಹಜರತ್ ಅಲಿ ತಮ್ಮ ಹೊಲದಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿದ್ದರು. ಈ ಅವಘಡದಲ್ಲಿ ಸುಮಾರು ₹ 15 ಲಕ್ಷದಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಭಾರಿ ಗಾಳಿಯಿಂದಾಗಿ ಇದೇ ಗ್ರಾಮದಲ್ಲಿ 15ರಿಂದ 20 ಎಕರೆಗಳಷ್ಟು ಬಾಳೆ ಮತ್ತು ಮಾವಿನ ತೋಟಕ್ಕೆ ಹಾನಿಯಾಗಿದೆ. ಬಾಳೆ ಗಿಡಗಳು ಮುರಿದು ಬಿದ್ದಿವೆ. ಫಸಲಿಗೆ ಬಂದಿದ್ದ ಮಾವು ಬೆಳೆಯೂ ನೆಲಕಚ್ಚಿದೆ. ಬೆಳೆಗಾರರು ಕಂಗಾಲಾಗಿದ್ದಾರೆ.

ತಾಲ್ಲೂಕಿನ ಹುನಗುಂದ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಎತ್ತು ಸತ್ತಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳ ಮೇಲೆ ಹೊದಿಸಲಾಗಿದ್ದ ಸಿಮೆಂಟ್, ಕಬ್ಬಿಣದ ಶೀಟ್‌ಗಳು ಹಾರಿಹೋಗಿವೆ.

ಹಳಿಯಾಳ ಪಟ್ಟಣದಲ್ಲೂ ಅರ್ಧ ಗಂಟೆ ಗಾಳಿ ಮಳೆಯಾಗಿದ್ದು, ಹತ್ತಾರು ವಿದ್ಯುತ್ ಕಂಬಗಳು, ತೆಂಗಿನ ಮರಗಳು ಮುರಿದುಬಿದ್ದಿವೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಸುತ್ತಮುತ್ತ ದಟ್ಟವಾದ ಮೋಡ ಕವಿದು, ನಾಲ್ಕಾರು ಹನಿ ತುಂತುರು ಮಳೆಯಾಯಿತು.

ಧಾರವಾಡ, ಬೆಳಗಾವಿ, ಗದಗ, ವಿಜಯಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಶನಿವಾರ ಸಾಧಾರಣ ಮಳೆಯಾಗಿದೆ. ಹಾವೇರಿ ಜಿಲ್ಲೆಯ ಅಕ್ಕಿಆಲೂರು ಹಾಗೂ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.

ಬೆಳಗಾವಿ ಹಾಗೂ ಖಾನಾಪುರ ಸುತ್ತಮುತ್ತಲು ಸುಮಾರು ಅರ್ಧ ಗಂಟೆ ಮಳೆಯಾಗಿದೆ. ಗಾಳಿ ಜೋರಾಗಿ ಬೀಸಿದ್ದರಿಂದ ಹಲವು ಕಡೆ ಮರಗಳು ಧರೆಗುರುಳಿವೆ. ವಿದ್ಯುತ್‌ ಕಂಬಗಳು ಕುಸಿದು ಬಿದ್ದಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು