ಮಂಗಳವಾರ, ಆಗಸ್ಟ್ 20, 2019
25 °C
ವರುಣನ ಅಬ್ಬರಕ್ಕೆ ಪ್ರವಾಹ ಸ್ಥಿತಿ, ನೂರಾರು ಎಕರೆ ಗದ್ದೆ ಮುಳುಗಡೆ  

ಕೊಡಗಿನಲ್ಲಿ ಮಹಾಮಳೆ: ಭಾಗಮಂಡಲ ಜಲಾವೃತ

Published:
Updated:
Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಹಾಮಳೆ ಸುರಿಯುತ್ತಿದ್ದು ಜನಜೀವನ ಸಂ‍ಪೂರ್ಣ ಅಸ್ತವ್ಯಸ್ತವಾಗಿದೆ. ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳಲ್ಲಿ ಕ್ಷಣಕ್ಷಣಕ್ಕೂ ನೀರಿನಮಟ್ಟ ಏರಿಕೆ ಕಂಡು ಬರುತ್ತಿದೆ. ಪಾಲೂರು, ಕೊಟ್ಟಮುಡಿ, ಹೊದ್ದೂರು, ಬಲಮುರಿ, ಕರಡಿಗೋಡು ಗ್ರಾಮದಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ.

ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು ಭಾಗಮಂಡಲ ಮುಳುಗಡೆಯಾಗಿದೆ. ಭಗಂಡೇಶ್ವರ ದೇಗುಲದ ಮೆಟ್ಟಿಲು ತನಕ ನೀರು ನಿಂತಿದೆ. ಭಾಗಮಂಡಲ –ತಲಕಾವೇರಿ ಹಾಗೂ ಭಾಗಮಂಡಲ – ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ. ಸ್ಥಳೀಯರಿಗೆ ರಸ್ತೆ ದಾಟಲು ಬೋಟ್ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರನ್ನು ನಿಯೋಜಿಸಲಾಗಿದೆ. ತಲಕಾವೇರಿಗೆ ಪ್ರವಾಸಿಗರಿಗೆ ತೆರಳದಂತೆ ನಿರ್ಬಂಧಿಸಲಾಗಿದೆ. ಮಳೆಯ ನೀರಿನಲ್ಲಿ ನೂರಾರು ಎಕರೆ ಭತ್ತದ ಗದ್ದೆ ಮಳುಗಡೆಯಾಗಿವೆ.

ಮಡಿಕೇರಿಯ ಇಂದಿರಾನಗರದ ಮನೆಯೊಂದರ ಮೇಲೆ ಮಣ್ಣು ಕುಸಿದಿದೆ. ರೇಸ್‌ಕೋರ್ಸ್‌ ರಸ್ತೆಯಲ್ಲೂ ಮಣ್ಣು ಕುಸಿದು ಸಂಚಾರಕ್ಕೆ ಅಡಚಣೆಯಾಗಿತ್ತು. ದಕ್ಷಿಣ ಕೊಡಗಿನ ವಿರಾಜಪೇಟೆ, ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ ವ್ಯಾಪ್ತಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಗಾಳಿ ಹಾಗೂ ಮಳೆಗೆ ಅಲ್ಲಲ್ಲಿ ವಿದ್ಯುತ್‌ ಕಂಬಗಳು ಉರುಳಿದ್ದು ಎಮ್ಮೆಮಾಡು, ನೆಲಜಿ, ಕಕ್ಕಬ್ಬೆ, ನಾಲಾಡಿ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಕಡಿತವಾಗಿದೆ.

24 ಗಂಟೆಯ ಅವಧಿಯಲ್ಲಿ ಪೊನ್ನಂಪೇಟೆಯಲ್ಲಿ 180 ಮಿ.ಮೀ, ಭಾಗಮಂಡಲದಲ್ಲಿ 170, ಶಾಂತಳ್ಳಿ 129 ಮಿ.ಮೀ ಮಳೆಯಾಗಿದೆ.

Post Comments (+)