ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ದಸರಾ ಆನೆ ‘ದ್ರೋಣ’ ಹಠಾತ್‌ ಸಾವು

Last Updated 26 ಏಪ್ರಿಲ್ 2019, 16:45 IST
ಅಕ್ಷರ ಗಾತ್ರ

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಮೂರು ವರ್ಷದಿಂದ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಲಕ್ಷಾಂತರ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದ 37ರ ವರ್ಷದ ‘ದ್ರೋಣ’ ಇನ್ನಿಲ್ಲ. ಶುಕ್ರವಾರ ಹೃದಯಾಘಾತದಿಂದ ಹಠಾತ್‌ ಮೃತಪಟ್ಟಿದೆ.

ತಿತಿಮತಿ ಬಳಿಯ ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಕಳೆದ 6 ವರ್ಷಗಳಿಂದ ನೆಲೆಸಿದ್ದ ‘ದ್ರೋಣ’ ಶುಕ್ರವಾರ ಬೆಳಿಗ್ಗೆ ಶಿಬಿರದ ನೀರಿನ ತೊಟ್ಟಿಬಳಿ ನಿಂತು ದಾಹ ನೀಗಿಸಿಕೊಳ್ಳುವ ವೇಳೆ ಅಸ್ವಸ್ಥಗೊಂಡಿತ್ತು. ಕೂಡಲೇ ಮಾವುತ ರವಿ ಹಾಗೂ ಕಾವಾಡಿಯೊಬ್ಬರು ಗುಂಡು ಆನೆಯನ್ನು ಆರೈಕೆ ಮಾಡಲು ಮುಂದಾಗಿದ್ದಾರೆ. ಈ ವೇಳೆಗೆ ಆನೆ ಕುಸಿದು ಬಿದ್ದು ಅಸು ನೀಗಿತ್ತು.

ಕಳೆದ ಮೂರು ವರ್ಷಗಳಿಂದ (2016ರಿಂದ 2018ರ ತನಕ) ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ಆನೆಯ ಜತೆಗೆ ‘ದ್ರೋಣ’ ಹೆಜ್ಜೆ ಹಾಕಿ ಗಮನ ಸೆಳೆದಿದ್ದ.

ಮತ್ತಿಗೋಡು ಶಿಬಿರದಲ್ಲಿದ್ದ ಆನೆಗಳಲ್ಲಿಯೇ ಹಿರಿಯದಾದ ‘ದ್ರೋಣ’ನನ್ನು ಅಭಿಮನ್ಯು ಆನೆಯೊಂದಿಗೆ ದಾಂಧಲೆ ನಡೆಸಿ ಜನರ ಪ್ರಾಣಕ್ಕೆ ಕಂಟಕವಾಗುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯಲು ಕಳಿಸಲಾಗುತ್ತಿತ್ತು. ಹಾಸನ, ಚಾಮರಾಜನಗರ, ಕೊಳ್ಳೆಗಾಲ, ಬಿಳಿಗಿರಿರಂಗನ ಬೆಟ್ಟ ಮೊದಲಾದ ಭಾಗದಲ್ಲಿ ಕಾಡಾನೆಗಳನ್ನು ಬಗ್ಗು ಬಡಿದು ಎಳೆದೊಯ್ಯುತ್ತಿತ್ತು.

ಬಳಿಕ ದೊಡ್ಡಿಗೆ ಕೂಡಿ ಅವುಗಳ ಸುತ್ತ ನಿಂತು ಪಳಗಿಸುತ್ತಿತ್ತು. ಜತೆಗೆ, ಹುಲಿ ದಾಳಿ ಸಂದರ್ಭದಲ್ಲಿಯೂ ಈ ಆನೆಯನ್ನು ಹುಲಿ ಸೆರೆಗೆ ಬಳಸಿಕೊಳ್ಳಲಾಗುತ್ತಿತ್ತು. ಶಿಬಿರದ ಆನೆಗಳಲ್ಲಿಯೇ ಅತೀ ಬುದ್ಧಿವಂತ ಆನೆ ಎನಿಸಿಕೊಂಡಿದ್ದ ‘ದ್ರೋಣ’ನ ನಿಧನ ಮಾವುತರು ಮತ್ತು ಕಾವಾಡಿಗಳ ಕಣ್ಣಿನಲ್ಲಿ ನೀರು ತರಿಸಿದೆ. ಜತೆಗೆ, ಶಿಬಿರದಲ್ಲಿಯೂ ಮಂಕು ಕವಿಸಿದೆ.

ಅರಣ್ಯ ಇಲಾಖೆಯ ವೈದ್ಯಾಧಿಕಾರಿಗಳಾದ ನಾಗರಾಜ್, ಮಜೀಬ್ ರೆಹಮಾನ್, ಶಿಬಿರದ ವಲಯ ಅರಣ್ಯಾಧಿಕಾರಿ ಶಿವಾನಂದ್ ಪರಿಶೀಲಿಸಿ ಶಿಬಿರದ ಬಳಿಯೇ ಹೊಂಡ ತೆಗೆದು ಮಣ್ಣು ಮುಚ್ಚು ಆನೆಯ ಶವ ಸಂಸ್ಕಾರ ನಡೆಸಿದರು. ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆಯಿದೆ. ಮರಣೋತ್ತರ ವರದಿ ಬಂದ ಬಳಿಕ ನಿಖರ ಮಾಹಿತಿ ತಿಳಿಯಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಮೃತ ಆನೆ ‘ದ್ರೋಣ’
ಮೃತ ಆನೆ ‘ದ್ರೋಣ’

ಆಲೂರು ಅರಣ್ಯದಲ್ಲಿ ಸೆರೆ

ಹಾಸನ ಜಿಲ್ಲೆಯ ಆಲೂರು ಅರಣ್ಯ ವ್ಯಾಪ್ತಿಯಲ್ಲಿ ದಾಂದಲೆ ನಡೆಸುತ್ತಿದ್ದ ಆನೆಯನ್ನು 2014ರಲ್ಲಿ ಸೆರೆ ಹಿಡಿದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮೂರ್ಕಲ್ಲು ಶಿಬಿರದಲ್ಲಿ ಪಳಗಿಸಲಾಗಿತ್ತು.

ಬಳಿಕ ಮತ್ತಿಗೋಡು ಶಿಬಿರಕ್ಕೆ ಕರೆ ತರಲಾಗಿತ್ತು. ಮೂರ್ಕಲ್ಲು ಶಿಬಿರದಲ್ಲಿ ಇದ್ದ ಆನೆಗಳೆಲ್ಲೆಲ್ಲ ಬೃಹತ್ತಾದ ಮತ್ತು ಬುದ್ಧಿವಂತ ಆನೆಯಾದ ಇದಕ್ಕೆ ಮಾವುತರು ‘ದ್ರೋಣ’ ಎಂದು ನಾಮಕರಣ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT