ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ: ಕೆರೆಗಳ ಸರ್ವೆ ನಡೆಸಲು ಸಮಿತಿ ರಚಿಸಿ

Last Updated 4 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಎಲ್ಲ ಕೆರೆಗಳ ಸರ್ವೆ ನಡೆಸಲು ಒಂದು ತಿಂಗಳಲ್ಲಿ ಜಿಲ್ಲಾ ಮಟ್ಟದ ಕೆರೆ ಸಂರಕ್ಷಣಾ ಸಮಿತಿ ರಚಿಸಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಕೆರೆ ಸಂರಕ್ಷಣೆ ಕುರಿತು ‘ಸಿಟಿಜನ್ ಆ್ಯಕ್ಷನ್ ಫೋರಂ’ ಸೇರಿದಂತೆ ಮೂವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

‘ರಾಜ್ಯ ಮಟ್ಟದಲ್ಲಿ ಉನ್ನತ ಸಮಿತಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕೆರೆ ಸಂರಕ್ಷಣಾ ಸಮಿತಿ ರಚಿಸಬೇಕು. ಈ ಸಮಿತಿಗಳು ಕೆರೆಗಳ ಸರ್ವೆ ನಡೆಸಿ, ಗಡಿ ಗುರುತಿಸಬೇಕು, ಬೇಲಿ ಅಳವಡಿಸಬೇಕು. ಸಮಿತಿ ರಚನೆ ಮಾಡಿದ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕು. ಈ ಕುರಿತು ಕೋರ್ಟ್‌ಗೆ ಅನುಪಾಲನಾ ವರದಿ ಸಲ್ಲಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

‘ಕೆರೆ ಪ್ರದೇಶದ 30 ಮೀಟರ್ ಒಳಗಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು 2012ರ ಏಪ್ರಿಲ್ 11ರಂದು ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿತ್ತು. ಈ ದಿಸೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಆದರೆ, ಈ ಸಮಿತಿ ಈತನಕ ಕೇವಲ ಐದು ಸಭೆ ನಡೆಸಿದೆ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಆಕ್ಷೇಪ: ಕೆರೆಗಳ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ವಹಿಸಿ ಆ ಕುರಿತಂತೆ ಒಪ್ಪಂದ ಮಾಡಿಕೊಂಡಿರುವ ರಾಜ್ಯ ಸರ್ಕಾರದ ಕ್ರಮಕ್ಕೂ ನ್ಯಾಯಪೀಠ ಇದೇ ವೇಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ಒಪ್ಪಂದದ ಕಾನೂನು ಸಿಂಧುತ್ವವನ್ನು ನ್ಯಾಯಾಲಯ ಪರಿಶೀಲಿಸಲಿದೆ. ಅಲ್ಲಿಯವರೆಗೆ ಈ ರೀತಿಯ ಬೇರಾವುದೇ ಒಪ್ಪಂದ ಮಾಡಿಕೊಳ್ಳಬಾರದು. ಆದರೆ, ಕೆರೆಗಳ ಅಭಿವೃದ್ಧಿ ಹಾಗೂ ಪುನರುಜ್ಜೀವನಕ್ಕೆ ಕಾರ್ಪೋರೇಟ್ ಸಂಸ್ಥೆಗಳು ಸರ್ಕಾರಕ್ಕೆ ಹಣ ನೀಡುವುದಕ್ಕೆ ಈ ಆದೇಶ ಅಡ್ಡಿ ಬರುವುದಿಲ್ಲ’ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸರ್ವೆ ಕಾರ್ಯ ಬಾಕಿ: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 205 ಕೆರೆಗಳಿವೆ. ಅವುಗಳಲ್ಲಿ 160 ಕೆರೆಗಳ ಸರ್ವೆ ನಡೆಸಲಾಗಿದೆ. ಉಳಿದ 45 ಕೆರೆಗಳ ಸರ್ವೆ ಕಾರ್ಯ ಬಾಕಿ ಇದೆ’ ಎಂದು ಬಿಬಿಎಂಪಿ ನ್ಯಾಯಪೀಠಕ್ಕೆ ಮಾಹಿತಿ ನೀಡಿದೆ.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಎರಡು ತಿಂಗಳಲ್ಲಿ ಉಳಿದ 45 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಳಿಸಬೇಕು. ಒತ್ತುವರಿ ಮತ್ತು ಬಫರ್ ಝೋನ್‌ನಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಲು ಸರ್ಕಾರ ಮತ್ತು ಬಿಬಿಎಂಪಿ ಜಂಟಿಯಾಗಿ ಕ್ರಮ ಜರುಗಿಸಬೇಕು’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಏಪ್ರಿಲ್‌ 20ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT