ಶನಿವಾರ, ಸೆಪ್ಟೆಂಬರ್ 18, 2021
22 °C
ಇತಿಹಾಸ ಸಮ್ಮೇಳನ

ಬಲವಂತದ ಇತಿಹಾಸ ಪುನಾರಚನೆ ಸಲ್ಲದು: ಇತಿಹಾಸಕಾರ ಡಾ.ಎಚ್.ಎಸ್.ಗೋಪಾಲರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಇತಿಹಾಸ ಪುನರ್ ರಚಿಸುವ ಕೆಲಸ ಆಗಾಗ ಆಗಬೇಕು. ಇದು ಶೋಧ ಮತ್ತು ಪರಿಶೋಧಗಳನ್ನು ಅನುಸರಿಸಿ ನಡೆಯುವ ಪ್ರಕ್ರಿಯೆಯಾಗಿರುವುದರಿಂದ ಇತಿಹಾಸ ಪುನಾರಚನೆ ಯಾವುದೇ ಬಲವಂತ ಅಥವಾ ಒತ್ತಡದಿಂದ ಆಗಬಾರದು ಎಂದು ಇತಿಹಾಸಕಾರ ಡಾ.ಎಚ್.ಎಸ್.ಗೋಪಾಲರಾವ್ ಹೇಳಿದರು.

ಜಾಗೃತ ವೇದಿಕೆಯು ವಿವಿಧ ಸಂಘಟನೆಗಳ ಸಹಕಾರದಲ್ಲಿ ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಶನಿವಾರದಿಂದ ಎರಡು ದಿನ ಆಯೋಜಿಸಿರುವ ಇತಿಹಾಸ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. ಬದಲಾವಣೆಗಾಗಿ ಬದಲಾವಣೆ ಸರಿಯಲ್ಲ. ಇತಿಹಾಸ ಸರಿಪಡಿಸುವ ಕಾರಣದಿಂದ ತಿದ್ದುಪಡಿಯಾಗಬೇಕು. ಉತ್ಖನನ ಸಂದರ್ಭದಲ್ಲಿ ಸಿಗುವ ಶಾಸನಗಳು, ದಾಖಲೆಗಳು, ಆಗುತ್ತಿರುವ ಶೋಧಗಳು ಇತಿಹಾಸ ಪುನಾರಚನೆಯ ಮಹತ್ವವನ್ನು ಹೇಳುತ್ತವೆ ಎಂದರು.

‘ಪಾಶ್ಚಾತ್ಯ ವಿಶ್ವವಿದ್ಯಾಲಯಗಳ ಮಾದರಿಗಳನ್ನೇ ಅನುಸರಿಸಿ, ಭಾರತದ ಶಿಕ್ಷಣ ಪದ್ಧತಿ ಬದಲಾವಣೆ ಮಾಡುವುದು ಸಾಧುವಲ್ಲ. ಹಾಗೆಂದು ಅಲ್ಲಿನ ಇತಿಹಾಸ ಅಧ್ಯಯನ ಮಾದರಿ ಸರಿಯಿಲ್ಲವೆಂದು ಹೇಳುವ ಧೈರ್ಯ ನನಗಿಲ್ಲ. ಏಕೆಂದರೆ ಭಾರತ ಎಷ್ಟೋ ವಿಶ್ವವಿದ್ಯಾಲಯಗಳ ಇತಿಹಾಸ ಅಧ್ಯಯನ ಮತ್ತು ಸಂಶೋಧನೆ ಮಾದರಿಗಳ ಬಗೆಗೆ ಸ್ಪಷ್ಟವಾದ ಅರಿವಿಲ್ಲವೆಂದಾದ ಮೇಲೆ, ಪಾಶ್ಚಾತ್ಯ ವಿಶ್ವವಿದ್ಯಾಲಯಗಳ ವಿಚಾರದಲ್ಲಿ ಸೊಲ್ಲೆತ್ತುವುದು ಸರಿಯಲ್ಲ. ಯಾವುದೇ ವಿಷಯದ ಪಠ್ಯಕ್ರಮವನ್ನು ನಿರ್ಧರಿಸುವವರು ಆಯಾ ವಿಷಯಗಳ ಪರಿಣಿತ ಶಿಕ್ಷಕರು ಮತ್ತು ವಿಷಯ ತಜ್ಞರು. ವಿದ್ಯಾರ್ಥಿಗಳ ನಿರೀಕ್ಷೆ ಲಕ್ಷ್ಯದಲ್ಲಿಟ್ಟುಕೊಂಡೇ ಪಠ್ಯಕ್ರಮ ನಿರ್ಧಾರವಾಗುತ್ತದೆ’ ಎಂದು ಹೇಳಿದರು.

ತಂತ್ರಜ್ಞಾನ ಮತ್ತು ವೈದ್ಯಕೀಯ ಶಿಕ್ಷಣಕ್ಕಿರುವ ಆದ್ಯತೆ ಕಲೆ, ಇತಿಹಾಸ, ಭೂಗೋಳ ವಿಜ್ಞಾನಗಳಿಗೆ ಸಿಗುತ್ತಿಲ್ಲ. ಎಷ್ಟೊ ಕಾಲೇಜುಗಳಲ್ಲಿ ಇತಿಹಾಸ ವಿಭಾಗವಿರಲಿ, ವಿಜ್ಞಾನ ವಿಭಾಗವೂ ಮುಚ್ಚಿಹೋಗುತ್ತಿದೆ. ಶಿಕ್ಷಣ ತಜ್ಞರು ಈ ವಿಚಾರದ ಬಗ್ಗೆ ಗಮನಹರಿಸಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈವರೆಗೆ ಆಗಿರುವ ಇತಿಹಾಸದ ಅಧ್ಯಯನವು ತೃಪ್ತಿಕರವೆನಿಸಿದರೂ ಸಮಗ್ರವಾಗಿಲ್ಲ. ಈ ಅಧ್ಯಯನದಿಂದ ಇತಿಹಾಸದ ಕೆಲವು ವ್ಯಕ್ತಿಗಳು, ಘಟನೆಗಳು, ಕೆಲವು ತಿರುವುಗಳನ್ನು ಮಾತ್ರ ತಿಳಿಯಲು ಸಾಧ್ಯ. ಪ್ರಾಥಮಿಕ ಹಂತದಲ್ಲಿ ಸ್ಥಳೀಯ ಇತಿಹಾಸ, ಪ್ರೌಢ ಹಂತದಲ್ಲಿ ವಿಶ್ವ ಮತ್ತು ಭಾರತೀಯ ಇತಿಹಾಸ, ಪದವಿಪೂರ್ವ ಹಂತದಲ್ಲಿ ರಾಜ್ಯ ಇತಿಹಾಸ, ಸ್ನಾತಕ ಹಂತದಲ್ಲಿ ಭಾರತೀಯ ಇತಿಹಾಸ ಹಾಗೂ ಸ್ನಾತಕೋತ್ತರ ಹಂತದಲ್ಲಿ ವಿದ್ಯಾರ್ಥಿಗಳ ತಿಳಿವಳಿಕೆ ಓರೆಗೆ ಇಡುವಂತಹ ಪ್ರಮುಖ ವಿಚಾರಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕು. ರಾಜಕೀಯ ಇತಿಹಾಸದ ಜತೆಗೆ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಇತಿಹಾಸಗಳೂ ಸೇರಬೇಕು ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಪ್ರಮೋದ ಗಾಯಿ ಸಮ್ಮೇಳನ ಉದ್ಘಾಟಿಸಿದರು. ಮಾನವನ ಇತಿಹಾಸ ಬಹು ದೀರ್ಘವಾಗಿದೆ. ಇತಿಹಾಸ ಅಧ್ಯಯನದಲ್ಲಿ ಮಾನವ ಉಗಮವನ್ನು ಕಂಡುಹಿಡಿಯುವ ಕ್ರಮ ವೈಜ್ಞಾನಿಕವಾಗಿ ನಡೆಯುತ್ತಿದೆ. ಅನೇಕ ಸಾಕ್ಷ್ಯಗಳು, ಇತಿಹಾಸದ ದಾಖಲೆಗಳು ದೊರೆಯುವ ಮೊದಲು ಎಲ್ಲವನ್ನು ಶಿಲ್ಪಕಲೆಗಳೇ ಹೇಳುತ್ತಿದ್ದವು. ಅವುಗಳ ನಿರಂತರ, ನಿಷ್ಪಕ್ಷಪಾತ ಅಧ್ಯಯನದಿಂದ ಮಾನವನ ಉಗಮದ ರಹಸ್ಯ ಕೂಡ ತಿಳಿಯಬಹುದು ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು