ಶನಿವಾರ, ಜುಲೈ 24, 2021
23 °C

ಮಟ್ಕಾ, ಜೂಜು ಕಿಂಗ್‌ಪಿನ್‌ಗಳ ಮಟ್ಟಹಾಕಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ‘ತುಮಕೂರು ಜಿಲ್ಲೆಯು ಬೆಂಗಳೂರಿಗೆ ಸಮೀಪವಿದೆ. ಮಟ್ಕಾ, ಜೂಜು, ಗಾಂಜಾ ಇತರ ಮಾದಕ ವಸ್ತುಗಳ ಸೇವನೆ ಪ್ರಕರಣಗಳು ವರದಿ ಆಗುತ್ತಿವೆ. ಈ ಪ್ರಕರಣಗಳ ಕಿಂಗ್‌ಪಿನ್‌ಗಳ ಪತ್ತೆಗೂ ಕ್ರಮವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜೂಜು, ಮಟ್ಕಾ, ಗಾಂಜಾ, ಡ್ರಗ್ಸ್ ಬಗ್ಗೆ ವಿಶೇಷ ಗಮನವಹಿಸಿ ಕೆಲಸ ಮಾಡಬೇಕು. ದೂರು ಬರುವವರೆಗೂ ಕಾಯದೆ ಸ್ವಯಂ ಪ್ರೇರಿತರಾಗಿ ದಾಳಿ ಮಾಡಬೇಕು ಎಂದು ನಿರ್ದೇಶನ ನೀಡಿದ್ದೇನೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದಾಗಿ ಐಜಿಪಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಲಾಕ್‍ಡೌನ್ ಸಂದರ್ಭದಲ್ಲಿ ಜೂಜು, ಮಟ್ಕಾ ಅಡ್ಡೆಗಳ ಮೇಲೆ ಜಿಲ್ಲೆಯ ಪೊಲೀಸರು ದಾಳಿ ಮಾಡಿದ್ದಾರೆ. ಕೊರೊನಾ ಸಂದರ್ಭವನ್ನು ಬಹಳ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ ಎಂದರು.

‘ಬೆಂಗಳೂರಿಗೆ ಸಮೀಪವಿರುವ ಜಿಲ್ಲೆಯಲ್ಲಿ ಕೊರೊನಾ ನಿಗ್ರಹ ಸವಾಲಾಗಿತ್ತು. ಈ ಸವಾಲಿನ ಕೆಲಸವನ್ನು ಪೊಲೀಸರು ಚಾಕಚಕ್ಯತೆಯಿಂದ ನಿರ್ವಹಿಸಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆಯೂ ಕಡಿಮೆ ಇತ್ತು. ಮತ್ತೆ ಲಾಕ್‍ಡೌನ್ ಸಡಿಲಗೊಂಡ ಮೇಲೆ ಒಂದೊಂದೇ ಪ್ರಕರಣಗಳು ವರದಿ ಆಗುತ್ತಿವೆ. ಲಾಕ್‍ಡೌನ್ ಸಂದರ್ಭದಲ್ಲಿ ಇದ್ದಂತೆಯೇ ಅಪರಾಧ ಪ್ರಕರಣ ಇಳಿಮುಖವಾಗಲು ಶ್ರಮಿಸಲು ಸೂಚಿಸಿದ್ದೇನೆ’ ಎಂದು ವಿವರಿಸಿದರು.

ಈಗ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸ್ ಠಾಣೆಗಳಿಗೆ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದ ಠಾಣೆಗಳಿಗೆ ಹೊಸ ಕಟ್ಟಡ ಹಾಗೂ ಸಿಬ್ಬಂದಿಗೆ ವಸತಿಗೃಹಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಎಡಿಜಿಪಿ ಅಮರ್‌ಕುಮಾರ್ ಪಾಂಡೆ, ಕೇಂದ್ರ ವಲಯ ಐಜಿಪಿ ಶರತ್ಚಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.