ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಪ್ರೇರಣೆಯಿಂದ ನಿಯಮ ಪಾಲಿಸಿ, ಕೊರೊನಾ ನಿಯಂತ್ರಿಸಿ: ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ಫೋನ್–ಇನ್ ಕಾರ್ಯಕ್ರಮ: ಸ್ವಯಂ ಶಿಸ್ತಿನಿಂದ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಲು ಗೃಹ ಸಚಿವರ ಮನವಿ
Last Updated 2 ಜುಲೈ 2020, 5:38 IST
ಅಕ್ಷರ ಗಾತ್ರ

ಬೆಂಗಳೂರು: ‘ಲಾಕ್‌ಡೌನ್‌ ಸಡಿಲಿಕೆ ನಂತರ ಆರ್ಥಿಕ ಚಟುವಟಿಕೆ ಚೇತರಿಸಿಕೊಂಡು ಜನರ ಓಡಾಟ ಶುರುವಾಗಿದೆ. ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಳ್ಳುವಂತೆ ನಿಯಮ ರೂಪಿಸಲಾಗಿದೆ. ಇವುಗಳನ್ನು ಪ್ರತಿಯೊಬ್ಬರು ಸ್ವಯಂಪ್ರೇರಣೆಯಿಂದ ಪಾಲಿಸಿದರೆ ಮಾತ್ರ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

‘ಪ್ರಜಾವಾಣಿ’ ಫೋನ್–ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಿಯಮಗಳ ಜಾರಿಗೆ ಪೊಲೀಸರು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಪ್ರಜೆಯೂ ಸ್ವಯಂ ಶಿಸ್ತಿನಿಂದ ಮಾಸ್ಕ್ ಹಾಕಿಕೊಂಡು ಅಂತರ ಕಾಯ್ದುಕೊಂಡು ಓಡಾಡಬೇಕು’ ಎಂದು ಮನವಿ ಮಾಡಿದರು.

‘ಕೊರೊನಾ ಸಂದರ್ಭದಲ್ಲಿ ಆಸ್ಪತ್ರೆ, ರೋಗಿಗಳ ಸ್ಥಳಾಂತರ, ಔಷಧಿ ಪೂರೈಕೆ ಸೇರಿದಂತೆ ಎಲ್ಲ ಕಡೆಯೂ ಪೊಲೀಸರು ಕೆಲಸ ಮಾಡಿದ್ದಾರೆ. ಪೊಲೀಸರು ನಡೆದುಕೊಂಡಿರುವ ರೀತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸರ ಮಾನವೀಯ ಮುಖದ ಪರಿಚಯವಾಗಿ ಅವರ ಬಗ್ಗೆ ಜನರಲ್ಲಿ ಒಳ್ಳೆಯ ಭಾವನೆ ಬಂದಿದೆ’ ಎಂದರು.

‘ಎಲ್ಲ ಸವಾಲು ಎದುರಿಸಲು ನಾವು ಸಿದ್ಧ. ಕೊರೊನಾ ಸಂಪೂರ್ಣ ನಿಯಂತ್ರಣ ಮಾಡುವ ಆತ್ಮವಿಶ್ವಾಸ ನಮಗಿದೆ’ ಎಂದೂ ಹೇಳಿದರು.

226 ಪೊಲೀಸರಿಗೆ ಕೊರೊನಾ: ‘ರಾಜ್ಯದಲ್ಲಿರುವ 226 ಪೊಲೀಸರು ಕೊರೊನಾ ಸೋಂಕಿತರಾಗಿದ್ದಾರೆ. ಬೆಂಗಳೂರಿನಲ್ಲೇ 190 ಸೋಂಕಿತರು ಇದ್ದು, ಅದರಲ್ಲಿ 76 ಮಂದಿ ಚಿಕಿತ್ಸೆ ಪಡೆದು ಗುಣಮುಖವಾಗಿದ್ದಾರೆ. ಐವರು ಸಾವನ್ನಪ್ಪಿದ್ದಾರೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

‘ಪೊಲೀಸರೂ ಮನುಷ್ಯರು. ಅವರ ಸುರಕ್ಷತೆಗೆ ನಮ್ಮ ಇಲಾಖೆ ನಿರಂತರವಾಗಿ ಕ್ರಮ ಕೈಗೊಂಡಿದೆ. ಶೇ 60ರಷ್ಟು ಪೊಲೀಸರನ್ನು ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲೇ 9,378 ಪೊಲೀಸರ ಗಂಟಲಿನ ದ್ರವದ ಪರೀಕ್ಷೆ ನಡೆಸಲಾಗಿದೆ. ಸೋಂಕಿತರು ಕಂಡುಬಂದ 23 ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ಪಕ್ಕದ ಠಾಣೆಯಿಂದ ಕೆಲಸ ನಡೆಯುತ್ತಿದೆ’ ಎಂದರು.

‘ಹೆಚ್ಚುವರಿ ಕೆಲಸಕ್ಕೆ ಗೃಹ ರಕ್ಷಕರನ್ನು ಬಳಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕರ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಎಂಥಾ ಪರಿಸ್ಥಿತಿಗೂ ಸದಾ ಸಿದ್ಧ ಎನ್ನುತ್ತಿರುವ ಪೊಲೀಸರು, ಸ್ವಯಂಪ್ರೇರಣೆ ಹಾಗೂ ಆತ್ಮಸ್ಥೈರ್ಯದಿಂದ ಕೆಲಸ ಮಾಡುತ್ತಿದ್ದಾರೆ’ ಎಂದರು.

ಪೊಲೀಸರ ವ್ಯವಸ್ಥೆಗೆ 20 ಕೋಟಿ: ‘ಕೊರೊನಾ ಯೋಧರಾದ ಪೊಲೀಸರಿಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕು ತಗುಲುವ ಹಾಗೂ ಕ್ವಾರಂಟೈನ್ ಆಗುವ ಪೊಲೀಸರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಈಗಾಗಲೇ 10 ಕೋಟಿ ಬಿಡುಗಡೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಪುನಃ 10 ಕೋಟಿ ಬಿಡುಗೆ ಮಾಡಲಿದ್ದೇವೆ’ ಎಂದೂ ಬೊಮ್ಮಾಯಿ ತಿಳಿಸಿದರು.

‘ಪೊಲೀಸರು ಹಾಗೂ ಅವರ ಕುಟುಂಬದವರಿಗಾಗಿ ಆರೋಗ್ಯ ಭಾಗ್ಯ ಯೋಜನೆ ಇದೆ. ಕೊರೊನಾದಿಂದ ಮೃತಪಟ್ಟರೆ ಅನುಕಂಪದ ಆಧಾರದಲ್ಲಿ ಕೆಲಸ, ಬೇರೆ ಬೇರೆ ವಿಮೆ ಹೊರತುಡಿಸಿ ₹ 30 ಲಕ್ಷ ಪರಿಹಾರ ನೀಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT