ಭಾನುವಾರ, ಮಾರ್ಚ್ 29, 2020
19 °C
ವಿಡಿಯೋ ಸುದ್ದಿ: ತಗ್ಗು ಪ್ರದೇಶ ಜಲಾವೃತ– ಎರಡು ಸಾವಿರ ಮನೆಗಳಿಗೆ ನುಗ್ಗಿದ ನೀರು

ಹುಳಿಮಾವು ಕೆರೆ ಕೋಡಿ ಒಡೆದು ಹರಿದ ನೀರು, ರಜೆ ಮೂಡ್‌‌ನಲ್ಲಿದ್ದವರಿಗೆ ನೀರಿನ ಶಾಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಬೆಂಗಳೂರು: ಬೊಮ್ಮನಹಳ್ಳಿ ವಲಯದ ಅರಕೆರೆ ವಾರ್ಡ್‌ನಲ್ಲಿರುವ (ವಾಡ್೯ -193 ) ಹುಳಿಮಾವು ಕೆರೆಯ ಕೋಡಿ ಒಡೆದು ಅಕ್ಷಯ ಗಾರ್ಡನ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ಆಸುಪಾಸಿನ ಪ್ರದೇಶಗಳು ಜಲಾವೃತವಾಗಿವೆ. ಇಲ್ಲಿ ತಗ್ಗು ಪ್ರದೇಶದಲ್ಲಿರುವ ಅನೇಕ ಮನೆಗಳಿಗೂ ನೀರು ನುಗ್ಗಿದೆ. 

ನೀರು ನುಗ್ಗಿದ್ದರಿಂದ ಆಸುಪಾಸಿನಲ್ಲಿರುವ ಆರೇಳು ಬಡಾವಣೆಗಳಲ್ಲಿರುವ ಎರಡು ಸಾವಿರ ಮನೆಗಳು ಜಲಾವೃತವಾಗಿವೆ. ಇದರಿಂದಾಗಿ ಜನರು ತೀವ್ರ ಪರದಾಟ ನಡೆಸುತ್ತಿದ್ದಾರೆ. 

ಸ್ಥಳಕ್ಕೆ ಧಾವಿಸಿರುವ ಬಿಬಿಎಂಪಿ ಅಧಿಕಾರಿಗಳು ಕೋಡಿ ಒಡೆದಿರುವ  ಜಾಗಕ್ಕೆ ಜೆಸಿಬಿಯಿಂದ ಮಣ್ಣು ತುಂಬಿ, ಕೆರೆಯ ನೀರು ಖಾಲಿ ಆಗದಂತೆ ತಡೆಯುವ ‍ಪ್ರಯತ್ನ ನಡೆಸಿದ್ದಾರೆ. ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಒಡೆದ ಕೆರೆ ಕೋಡಿಯನ್ನು ದುರಸ್ತಿ ಪಡಿಸುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

 

ಭಾನುವಾರ ರಜೆಯಾದ್ದರಿಂದ ನಿವಾಸಿಗಳೆಲ್ಲಾ ರಜೆಯ ಮೂಡ್‌‌ನಲ್ಲಿದ್ದರು ಆದರೆ, ಇದ್ದಕ್ಕಿದ್ದಂತೆ ನೀರು ಮನೆಯೊಳಗೆ ನುಗ್ಗಿದ್ದರಿಂದ ಪರದಾಡುವಂತಾಗಿದೆ. ಕಾರು, ದ್ವಿಚಕ್ರ ವಾಹನಗಳು ಓಡಾಡದಂತಹ ಪರಿಸ್ಥಿತಿ ರಸ್ತೆಗಳಲ್ಲಿ ನಿರ್ಮಾಣವಾಗಿದ್ದರೆ, ಮನೆಯೊಳಗೆ ನೀರು ನುಗ್ಗಿದ್ದರಿಂದ ಅಡುಗೆ, ದಿನಸಿ ಸಾಮಾನು ನೀರಿನಲ್ಲಿ ಕೊಚ್ಚಿಹೋಗಿವೆ.

ಈ ಬಾರಿ ನಗರದಲ್ಲಿ ಭಾರಿ ಮಳೆಯಾದ್ದರಿಂದ ಹುಳಿಮಾವು ಕೆರೆ ಭರ್ತಿಯಾಗಿತ್ತು. ಕಳೆದ ವರ್ಷಕ್ಕಿಂತ ಅಧಿಕ ನೀರು ಶೇಖರಣೆಯಾಗಿತ್ತು.

ಬಿಡಿಎ ಸುಪರ್ದಿಯಲ್ಲಿರುವ ಕೆರೆಯನ್ನು ದುರಸ್ತಿ ಮಾಡಿ ಅಭಿವೃದ್ದಿ ಪಡಿಸುವ ಸಲುವಾಗಿ ನೀರು ಖಾಲಿ ಮಾಡುವ ಕೆಲಸ ಆರಂಭವಾಗಿತ್ತು. ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ರಭಸದಲ್ಲಿ ನೀರು ಹರಿದಿದ್ದರಿಂದ ಹತೋಟಿಗೆ ತರಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಕೆಲಸಗಾರರು ಅರ್ಧದಲ್ಲಿ ಕೆಲಸ ನಿಲ್ಲಿಸಿ ಜಾಗ ಖಾಲಿ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು