ಮಂಗಳವಾರ, ಜನವರಿ 21, 2020
27 °C
ಫಾನಾ ನಿರ್ಧಾರಕ್ಕೆ ವಿವಿಧ ಸಂಘಟನೆಗಳು ಬೆಂಬಲ

ನಗದು ರಹಿತ ಸೇವೆ ಸ್ಥಗಿತ: ಕೇಂದ್ರಕ್ಕೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇಂದ್ರ ಸರ್ಕಾರವು ಆರೋಗ್ಯ ಯೋಜನೆಗಳಡಿ ಬಾಕಿ ಹಣವನ್ನು ಪಾವತಿಸದಿದ್ದರೆ ನಗದು ರಹಿತ ವೈದ್ಯಕೀಯ ಸೇವೆಯನ್ನು ರದ್ದುಗೊಳಿಸುವುದಾಗಿ ಎಚ್ಚರಿಸಿರುವ ಖಾಸಗಿ ಆಸ್ಪತ್ರೆಗಳು, ಕೇಂದ್ರ ಸರ್ಕಾರಕ್ಕೆ ಆರು ವಾರಗಳ ಗಡುವು ನೀಡಿವೆ.

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್‌) ಹಾಗೂ ಮಾಜಿ ಸೈನಿಕರ ನೆರವಿನ ಆರೋಗ್ಯ ಯೋಜನೆಯಡಿ (ಇಸಿಎಚ್‌ಎಸ್‌) ಕೇಂದ್ರ ಸರ್ಕಾರವು ರಾಜ್ಯದ ಆಸ್ಪತ್ರೆಗಳಿಗೆ ಸುಮಾರು ₹ 200 ಕೋಟಿ ಪಾವತಿಸಬೇಕಿದೆ. ಯೋಜನೆಗಳಡಿ ಚಿಕಿತ್ಸಾ ವೆಚ್ಚವನ್ನೂ ಪರಿಷ್ಕರಿಸುವಂತೆ ಖಾಸಗಿ ಆಸ್ಪತ್ರೆಗಳು ಬೇಡಿಕೆ ಇಟ್ಟಿದ್ದವು. ಆದರೆ ಕೇಂದ್ರ, ಈ ಬೇಡಿಕೆ ತಿರಸ್ಕರಿಸಿದೆ. ಅದೇ ರೀತಿ, ಜನರಲ್ ಇನ್ಶುರೆನ್ಸ್ ಪಬ್ಲಿಕ್ ಸೆಕ್ಟರ್ ಅಸೋಸಿಯೇಷನ್ (ಜಿಪ್ಸಾ) ಅಡಿ ಕಾರ್ಯ ನಿರ್ವಹಿಸುತ್ತಿರುವ ವಿಮಾ ಕಂಪನಿಗಳೂ ಚಿಕಿತ್ಸೆಗಳಿಗೆ ಪರಿಷ್ಕೃತ ಪ್ಯಾಕೇಜ್ ದರವನ್ನು ಪಾವತಿಸಿಲ್ಲ ಎಂದು ಆರೋಪಿಸಿ, ನಗದು ರಹಿತ ವಿಮಾ ಸೌಲಭ್ಯ ಕೈಬಿಡಲು ಆಸ್ಪತ್ರೆಗಳು ನಿರ್ಧರಿಸಿವೆ.

ಭಾರತೀಯ ವೈದ್ಯಕೀಯ ಸಂಘ (ಐಎಂಎ), ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‍ಗಳ ಅಸೋಸಿಯೇಷನ್ (ಫಾನಾ), ಆರೋಗ್ಯ ಪೂರೈಕೆದಾರರ ಸಂಘ (ಎಎಚ್‌ಪಿಐ) ಸೇರಿದಂತೆ ವಿವಿಧ ಸಂಘಟನೆಗಳು ನಗದು ರಹಿತ ಸೇವೆ ಸ್ಥಗಿತ ಮಾಡುವ ನಿರ್ಧಾರಕ್ಕೆ ಬೆಂಬಲ ಸೂಚಿಸಿವೆ. 

ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಸೇವೆ ಒದಗಿಸುವ ವಿಚಾರವಾಗಿ ‘ಫಾನಾ’ ಮತ್ತು ‘ಜಿಪ್ಸಾ’ ಜತೆಗೆ 2014ರಲ್ಲಿ ಒಪ್ಪಂದವಾಗಿತ್ತು. ಜಿಪ್ಸಾದಡಿ ನ್ಯಾಷನಲ್‌ ಇನ್ಶುರೆನ್ಸ್‌, ನ್ಯೂ ಇಂಡಿಯಾ ಅಶ್ಯುರೆನ್ಸ್‌, ಓರಿಯೆಂಟಲ್‌ ಇನ್ಶುರೆನ್ಸ್‌, ಯುನೈಟೆಡ್‌ ಇಂಡಿಯಾ ಇನ್ಶುರೆನ್ಸ್‌ ವಿಮಾ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

ಚಿಕಿತ್ಸಾ ವೆಚ್ಚದಲ್ಲಿ ಶೇ 40ರಷ್ಟು ವ್ಯತ್ಯಯವಾಗುತ್ತಿದೆ ಎಂಬ ಕಾರಣ ನೀಡಿ, ನಗದು ರಹಿತ ಸೇವೆಯನ್ನು ನಿಲ್ಲಿಸುವುದಾಗಿ ಕಳೆದ ವರ್ಷ ಖಾಸಗಿ ಆಸ್ಪತ್ರೆಗಳು ಘೋಷಿಸಿದ್ದವು. ಬಳಿಕ ಚಿಕಿತ್ಸಾ ವೆಚ್ಚ ಪರಿಷ್ಕರಣೆಗೆ ಜಿಪ್ಸಾ ಒಪ್ಪಿದ ಹಿನ್ನೆಲೆಯಲ್ಲಿ ನಗದು ರಹಿತ ಸೇವೆ ಮುಂದುವರೆದಿತ್ತು. ಈಗ ನಿಗದಿತ ಮೊತ್ತವನ್ನು ಪಾವತಿಸದ ಹಿನ್ನೆಲೆಯಲ್ಲಿ ಒಪ್ಪಂದ ಕಡಿದುಕೊಳ್ಳಲು ಮುಂದಾಗಿದೆ.

‘ರೋಗಿಗಳಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಅಷ್ಟರೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ನಗದು ರಹಿತ ಸೇವೆಯನ್ನು ಸ್ಥಗಿತಗೊಳಿಸುವುದು ಅನಿವಾರ್ಯ. ಜಿಪ್ಸಾ ಕೂಡ ಒಪ್ಪಂದದ ಅನುಸಾರ ಹಣ ಪಾವತಿಸಿಲ್ಲ. ಇದರಿಂದ ಆಸ್ಪತ್ರೆಗಳಿಗೆ ಆರ್ಥಿಕ ಹೊರೆ ಹೆಚ್ಚುತ್ತಿದೆ’ ಎಂದು ಫಾನಾ ಅಧ್ಯಕ್ಷ ಡಾ.ಆರ್.ರವೀಂದ್ರ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು