ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಕುಸಿದು ಮೂವರು, ರೆಂಬೆ ಬಿದ್ದು ಒಬ್ಬ ಸಾವು

Last Updated 1 ಜೂನ್ 2019, 18:52 IST
ಅಕ್ಷರ ಗಾತ್ರ

ಕಲಬುರ್ಗಿ: ಕಾಳಗಿ ತಾಲ್ಲೂಕಿನ ಮಂಗಲಗಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮನೆ ಕುಸಿದು ಮೂವರು ಮೃತಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ.

ಚಿಂಚೋಳಿ ತಾಲ್ಲೂಕಿನ ಕಪನೂರ ಗ್ರಾಮದ ಅಬ್ದುಲ್‌ನಬಿಮುಜಾವರ (60), ಮಂಗಲಗಿಯ ಅಲ್ಫಿಯಾ ಮಹ್ಮದ್‌ ಶಫಿ ಮುಸ್ತಾಫ್‌ (12), ಶಫೀಕ್ ನಬಿಲಾಲ್ ಬಂಟನಳ್ಳಿ (10) ಮೃತಪಟ್ಟವರು. ಮನೆಯೊಳಗೆ ಒಟ್ಟು ಏಳು ಜನ ಮಲಗಿದ್ದರು.

ರಾಯಚೂರು ಜಿಲ್ಲೆಚಿನ್ನಾಪುರದಲ್ಲಿ ಮರದ ರೆಂಬೆ ಮುರಿದು ಬಿದ್ದು ಹನುಮಂತಪ್ಪ ನಾಯಕ (60) ಮೃತಪಟ್ಟಿದ್ದಾರೆ. ಅವರು ಬೇವಿನ ಮರದ ಕೆಳಗಿನ ಕಟ್ಟೆಯ ಮೇಲೆ ಮಲಗಿದ್ದರು.

ಕಲಬುರ್ಗಿ ನಗರ ಸೇರಿದಂತೆ ಜಿಲ್ಲೆಯ ಅಫಜಲಪುರ, ಆಳಂದ, ಚಿತ್ತಾಪುರದಲ್ಲಿ ಶುಕ್ರವಾರ ರಾತ್ರಿ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಸರಾಸರಿ 2.10 ಮಿ.ಮೀ ಮಳೆಯಾಗಿದೆ.

ಒಂದು ವಾರದಿಂದ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿತ್ತು. ಬಿಸಿಲು, ಸೆಖೆಯಿಂದ ತತ್ತರಿಸಿದ್ದ ಜನ ಮಳೆ ಆಗಿದ್ದರಿಂದ ನಿಟ್ಟುಸಿರು ಬಿಡುವಂತಾಗಿದೆ.

ತುಮಕೂರು ನಗರ ಹಾಗೂ ಜಿಲ್ಲೆಯ ಕೆಲವು ಭಾಗಗಳಲ್ಲಿ ಶುಕ್ರವಾರ ರಾತ್ರಿ ಮಳೆ ಸುರಿದಿದೆ. ತುಮಕೂರಿನಲ್ಲಿ ಬಿರುಗಾಳಿಯ ಪರಿಣಾಮ ಗಿಡ, ಮರಗಳು ನೆಲಕ್ಕುರುಳಿವೆ.

ವಿದ್ಯುತ್ ಕಂಬಗಳು ಬಿದ್ದ ಕಾರಣ ಶನಿವಾರ ನಗರದ ಬಹುತೇಕ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಚಿಕ್ಕನಾಯಕನಹಳ್ಳಿ, ತುರುವೇಕೆರೆ ಮತ್ತು ಗುಬ್ಬಿ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಮಳೆ ಸುರಿದಿದೆ.

ಮಳೆ ತಂದಿತು ಸಂತಸ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆ ಸುರಿಯುತ್ತಿದ್ದು ರೈತರಲ್ಲಿ ಸಂತಸ ಮೂಡಿಸಿದೆ.

ಇನ್ನೊಂದೆಡೆ ಮಳೆಯೊಂದಿಗೆ ಕಾಣಿಸಿಕೊಳ್ಳುತ್ತಿರುವ ಬಿರುಗಾಳಿ ಮತ್ತು ಆಲಿಕಲ್ಲುಗಳು ದ್ರಾಕ್ಷಿ ಮತ್ತು ಮಾವು ಬೆಳೆಗಾರರ ನಿದ್ದೆಗೆಡಿಸುತ್ತಿವೆ. ಇತ್ತೀಚೆಗೆ ಸುರಿದ ಜೋರು ಮಳೆಗೆ 329 ಹೆಕ್ಟೇರ್ ಮಾವು ಮತ್ತು ದ್ರಾಕ್ಷಿ ಬೆಳೆ ನಾಶವಾಗಿದೆ.

ಕೋಲಾರ ಜಿಲ್ಲೆಯಲ್ಲಿ ಮಳೆಗೆ 310 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಕೋಲಾರ ತಾಲೂಕು, ಮುಳಬಾಗಿಲು, ದುಗ್ಗಸಂದ್ರದ ರಸ್ತೆ ಬದಿ ಬೃಹತ್‌ ಮರಗಳು ಹಾಗೂವಿದ್ಯುತ್ ಕಂಬಗಳು ಉರುಳಿವೆ.

ಕೋಲಾರದ ಚಿಟ್ನಹಳ್ಳಿ ಬಸ್‌ ನಿಲ್ದಾಣದ ಮರವು ಗಾಳಿಸಹಿತ ಮಳೆಗೆ ನೆಲಕ್ಕೆ ಉರುಳಿದ ಪರಿಣಾಮ ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ಮುಳಬಾಗಿಲಿನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳ ಮೇಲೆ ಮರಗಳು ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT