ಮಂಗಳವಾರ, ಮಾರ್ಚ್ 2, 2021
31 °C
ಕೇಂದ್ರ ಸರ್ಕಾರದ ಸಾಧನೆ ಬಿಚ್ಚಿಟ್ಟ ಯಡಿಯೂರಪ್ಪ,

ಸರ್ಕಾರ ಕಿತ್ತೊಗೆಯಲು ಸಂಕಲ್ಪ ಮಾಡಿ: ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಎಸ್‌ವೈ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ರಾಜ್ಯದ 175 ತಾಲ್ಲೂಕುಗಳಲ್ಲಿ ಭೀಕರ ಬರಗಾಲವಿದ್ದರೂ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯಾಗಲಿ, ಆಡಳಿತ ಪಕ್ಷದ ಯಾವ ನಾಯಕರೂ ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಆದ್ದರಿಂದ ಕಾಂಗ್ರೆಸ್‌–ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯದ ಜನತೆ ಸಂಕಲ್ಪ ಮಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕರೆ ನೀಡಿದರು.

ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಭಾನುವಾರ ಗಬ್ಬೂರು ಕ್ರಾಸ್‌ ಬಳಿ ಹಮ್ಮಿಕೊಳ್ಳಲಾಗಿದ್ದ ಬೃಹತ್‌ ಸಾರ್ವಜನಿಕ ಸಭೆಯ ‘ಅಟಲ್‌ ಜೀ’ ವೇದಿಕೆಯಲ್ಲಿ ಅವರು ಮಾತನಾಡಿದರು.

‘ಆಡಳಿತ ಪಕ್ಷ ಮಾಡಬೇಕಿದ್ದ ಕೆಲಸವನ್ನು ನಮ್ಮ ಪಕ್ಷ ಮಾಡಿದೆ. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಬಿಜೆಪಿಯವರು ಬರ ಪರಿಶೀಲನೆ ಮಾಡಿದ್ದಾರೆ.
ಕಾಂಗ್ರೆಸ್‌ ಹಾಗೂ ಜೆಡಿಎಸ್ ಕಚ್ಚಾಡುವುದಲ್ಲಿ ಜನರನ್ನು ಮರೆತುಬಿಟ್ಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸರ್ದಾರ ವಲ್ಲಭಬಾಯಿ ಪಟೇಲ್‌ ವ್ಯಕ್ತಿತ್ವವನ್ನು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ನೋಡುತ್ತಿದ್ದೇವೆ. 2014ರಲ್ಲಿ 120 ಮಿಲಿಯನ್‌ ಡಾಲರ್‌ನಷ್ಟಿದ್ದ ವಿದೇಶಿ ವಿನಿಮಯ 2019ರಲ್ಲಿ 230 ಮಿಲಿಯನ್‌ಗೆ ಏರಿದೆ. ವಿಶ್ವದ ನಕಾಶೆಯಲ್ಲಿ ಭಾರತ ಎತ್ತರದ ಸ್ಥಾನಕ್ಕೆ ಏರುತ್ತಿದೆ. ಇದಕ್ಕೆಲ್ಲ ಮೋದಿನಾಮಿಕ್ಸ್‌ ಕಾರಣ’ ಎಂದು ಪ್ರಶಂಸಿಸಿದರು.

‘ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ರಾಜ್ಯದ ಪ್ರತಿಯೊಬ್ಬರ ಮೇಲೆ ₹ 49ರಿಂದ 50 ಸಾವಿರ ಸಾಲವಿದೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್‌ ಹೇಳಿ ಈಗ ಮಾತು ತಪ್ಪಿ ರೈತರಿಗೆ ಮೋಸ ಮಾಡಿದೆ. ಈ ಸಲದ ಬಜೆಟ್‌ನಲ್ಲಿ ಆಲಮಟ್ಟಿ ಯೋಜನೆಗೆ ಆದ್ಯತೆ ಕೊಟ್ಟಿಲ್ಲ. ನೀರಾವರಿ ಇಲಾಖೆಗೆ ಅಗತ್ಯವಿರುವಷ್ಟು ಅನುದಾನ ಮೀಸಲಿಟ್ಟಿಲ್ಲ. ಇಂಥ ಸರ್ಕಾರಿ ಯಾರಿಗೆ ಬೇಕು. ರಾಜ್ಯದ ಶೇ 90ರಷ್ಟು ಜನ ಈಗಿನ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಬಯಸುತ್ತಿದ್ದಾರೆ’ ಎಂದರು.

ರಮೇಶ ಜಿಗಜಿಣಗಿ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಶಿವಕುಮಾರ ಉದಾಸಿ, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಸಿ.ಎಂ. ಉದಾಸಿ, ಪಿ.ಸಿ. ಗದ್ದಿಗೌಡರ, ಕಳಕಪ್ಪ ಬಂಡಿ, ಲಿಂಗರಾಜ ಪಾಟೀಲ, ಸಂಕನೂರು, ವಿಶ್ವೇಶ್ವರ ಹೆಗಡೆ ಕಾಗೇರಿ, ಅಮೃತ ದೇಸಾಯಿ, ಪ್ರದೀಪ ಶೆಟ್ಟರ್‌, ಶಂಕರಪಾಟೀಲ ಮುನೇನಕೊಪ್ಪ, ಪ್ರಭಾಕರ ಕೋರೆ, ಸುರೇಶ ಅಂಗಡಿ, ಅರವಿಂದ ಬೆಲ್ಲದ ಇದ್ದರು.

ರಾಜ್ಯದಲ್ಲಿ ಎಚ್‌ ಎಂ. ಸರ್ಕಾರ
70 ವರ್ಷಗಳಿಂದ ದೇಶದ ಜನ ಅತ್ಯಾಚಾರ, ಭ್ರಷ್ಟಾಚಾರ ನೋಡಿ ರೋಸಿ ಹೋಗಿದ್ದರು. ಇದನ್ನು ಶುದ್ಧ ಮಾಡಲು ನರೇಂದ್ರ ಮೋದಿ ಅವರೇ ಬರಬೇಕಾಯಿತು.

ಜೆಡಿಎಸ್‌ ಆಪರೇಷನ್‌ ಬಗ್ಗೆ ಮಾತನಾಡುತ್ತಿದೆ. ಆದರೆ, ದೇವೇಗೌಡರು ಹೋಲ್‌ ಸೇಲ್‌ ಆಗಿ ಕಾಂಗ್ರೆಸ್‌ ಪಕ್ಷವನ್ನು ಆಪರೇಷನ್‌ ಮಾಡಿದ್ದನ್ನು ರಾಜ್ಯದ ಜನತೆ ಮರೆತಿಲ್ಲ. ರೆಸಾರ್ಟ್‌ ರಾಜಕಾರಣ ಮಾಡುವ ಜೆಡಿಎಸ್‌ಗೆ ಅಷ್ಟೊಂದು ಹಣ ಎಲ್ಲಿಂದ ಬಂತು. ರಾಜ್ಯ ಸರ್ಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಇದು ಎಚ್‌ಎಂ (ಹಾಸನ–ಮಂಡ್ಯ) ಸರ್ಕಾರವಾಗಿದೆ. ಭ್ರಷ್ಟ ಹಾಗೂ ಅನಿಷ್ಠ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು.

ಕೇಂದ್ರ ಸರ್ಕಾರ ಮಾಡಿದ ಸರ್ಜಿಕಲ್‌ ಸ್ಟ್ರೈಕ್‌ ಅನ್ನು ‘ಉರಿ’ ಸಿನಿಮಾ ಮಾಡಲಾಗಿದೆ. ಇದರಿಂದ ದೇಶದ ಕೋಟ್ಯಂತರ ಯುವಕರು ಜಾಗೃತಗೊಂಡಿದ್ದಾರೆ. ಆದರೆ, ಸಿನಿಮಾ ನೋಡಿ ಕಾಂಗ್ರೆಸ್ಸಿಗರಿಗೆ ಉರಿ ಶುರುವಾಗಿದೆ.
– ಬಸವರಾಜ ಬೊಮ್ಮಾಯಿ, ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು