ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ನಾಶಕ್ಕೆ ಪಿಸಿಸಿಎಫ್‌ ಕುಮ್ಮಕ್ಕು?

ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ, ಕಪ್ಪತ್ತಗುಡ್ಡ ಡಿನೋಟಿಫೈಗೆ ಒತ್ತಡ
Last Updated 9 ಜನವರಿ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಅಮೂಲ್ಯ ಕಾಡುಗಳ ನಾಶ ಮಾಡುವಂತಹ ಎರಡು ಯೋಜನೆಗಳಿಗೆ ಒಪ್ಪಿಗೆ ನೀಡುವಂತೆ ಅರಣ್ಯ ಇಲಾಖೆಯ ಇಬ್ಬರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳೇ (ಪಿಸಿಸಿಎಫ್‌) ಒತ್ತಡ ಹೇರಿರುವ ಪ್ರಕರಣ ನಡೆದಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬುಧವಾರ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗಕ್ಕೆ ಒಪ್ಪಿಗೆ ಹಾಗೂ ಚಿನ್ನದ ಗಣಿಗಾರಿಕೆಗಾಗಿ ಕಪ್ಪತ್ತಗುಡ್ಡ ಸಂರಕ್ಷಣಾ ಅರಣ್ಯಪ್ರದೇಶವನ್ನು ಡಿನೋಟಿಫೈ ಮಾಡುವ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ಹಿರಿಯ ಅಧಿಕಾರಿಗಳಿಬ್ಬರು ಯೋಜನೆಗಳ ಪರ ಲಾಬಿ ನಡೆಸಿದರು. ಇದಕ್ಕೆ ವನ್ಯಜೀವಿ ಮಂಡಳಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಅವರೂ ಸದಸ್ಯರ ಪರವಾಗಿ ನಿಂತರು. ಬಳಿಕ, ಇದಕ್ಕೆ ಸದ್ಯ ಒಪ್ಪಿಗೆ ನೀಡದಿರಲು ನಿರ್ಧರಿಸಲಾಯಿತು.

‘ಅಭಿವೃದ್ಧಿ ಯೋಜನೆಗೆ ತಕರಾರು ಎತ್ತುವುದು ಸರಿಯಲ್ಲ. ಹುಬ್ಬಳ್ಳಿ–ಅಂಕೋಲಾ ಯೋಜನೆಗೆ ಅನುಮೋದನೆ ನೀಡುವುದು ಉತ್ತಮ’ ಎಂದು ಪಿಸಿಸಿಎಫ್‌ (ವನ್ಯಜೀವಿ) ಜಯರಾಮ್‌ ಅವರು ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಿದರು. ಆದರೆ, ಕುಮಾರಸ್ವಾಮಿ ಅವರು ಯೋಜನೆಗೆ ಒಪ್ಪಿಗೆ ನೀಡಲು ಹೆಚ್ಚು ಆಸಕ್ತಿ ತೋರಲಿಲ್ಲ ಎಂದು ಮೂಲಗಳು ತಿಳಿಸಿವೆ.

‘ಸೂಕ್ಷ್ಮ ಪರಿಸರ ವ್ಯವಸ್ಥೆಯ ಪಶ್ಚಿಮಘಟ್ಟಗಳ ನಡುವೆ ಹಾದು ಹೋಗಲಿರುವ ಈ ರೈಲು ಮಾರ್ಗದಿಂದ ಇಡೀ ಪರಿಸರ ವ್ಯವಸ್ಥೆಗೆ ತೀವ್ರ ರೀತಿಯ ಧಕ್ಕೆ ಉಂಟಾಗಲಿದೆ. ಈ ಯೋಜನೆಗೆ 595 ಹೆಕ್ಟೇರ್ ಅರಣ್ಯದಲ್ಲಿ 2 ಲಕ್ಷ ಮರಗಳ ಹನನವಾಗಲಿದೆ. ವನ್ಯಜೀವಿಗಳಿಗೂ ಅಪಾಯವಿದೆ’ ಎಂದು ಮಂಡಳಿಯ ಹಲವು ಸದಸ್ಯರು ‍ಪ್ರತಿಪಾದಿಸಿದರು.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ದಟ್ಟವಾಗಿದೆ. ಪಶ್ಚಿಮಘಟ್ಟ ಹಾದುಹೋಗಿರುವ ಇದು ಪಾರಂಪರಿಕ ತಾಣವೂ ಹೌದು. ಹುಲಿ ಸಂತತಿ ಅಭಿವೃದ್ಧಿಗೆ ಸಾಕಷ್ಟು ಅವಕಾಶ ಇದೆ. ಒಂದು ವೇಳೆ ಈ ಯೋಜನೆ ಅನುಷ್ಠಾನಗೊಳಿಸಿದರೆ, ಹುಲಿ ಸಂರಕ್ಷಣೆ ಕಾರ್ಯಕ್ಕೆ ಹಿನ್ನಡೆಯಾಗಲಿದೆ’ ಎಂದರು.

‘ಈ ಯೋಜನೆಯನ್ನು ಕೇಂದ್ರ ಸರ್ಕಾರ ಎರಡು ಸಲ ತಿರಸ್ಕರಿಸಿದೆ. ಈ ಯೋಜನೆ ಕೈಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳುವುದು ಉತ್ತಮ’ ಎಂದರು.

‘ಈ ಯೋಜನೆಯನ್ನು ಈಗಲೇ ಕೈಬಿಡುವುದು ಬೇಡ. ಸದ್ಯ ‍ಪ್ರಸ್ತಾವವನ್ನು ಮುಂದೂಡೋಣ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಇದಕ್ಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ ಸಹಮತ ವ್ಯಕ್ತಪಡಿಸಿದರು.

ಕಪ್ಪತಗುಡ್ಡ ಪರ ಲಾಬಿ: ಅಮೂಲ್ಯ ಖನಿಜ ಸಂಪತ್ತು, ವನ್ಯಜೀವಿಗಳು ಹಾಗೂ ಔಷಧೀಯ ಸಸ್ಯಗಳ ತಾಣವಾದ ಗದಗ ಜಿಲ್ಲೆಯ ಕಪ್ಪತಗುಡ್ಡದ ‘ಸಂರಕ್ಷಿತ ಪ್ರದೇಶ’ದಲ್ಲಿ ಚಿನ್ನದ ಗಣಿ ಇರುವ 37 ಹೆಕ್ಟೇರ್‌ ಪ್ರದೇಶವನ್ನು ಡಿನೋಟಿಫೈ ಮಾಡಬೇಕು ಎಂದು ಪಿಸಿಸಿಎಫ್‌ ಪುನಟಿ ಶ್ರೀಧರ್‌ ಕೋರಿದರು. ಇದಕ್ಕೆ ಎಲ್ಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

‘ಗದಗ, ಶಿರಹಟ್ಟಿ, ಮುಂಡರಗಿ ತಾಲ್ಲೂಕಿನಲ್ಲಿ 17,872 ಹೆಕ್ಟೇರ್‌ನಲ್ಲಿ ಹರಡಿಕೊಂಡಿರುವ ಕಪ್ಪತ್ತಗುಡ್ಡ ಔಷಧೀಯ ಸಸ್ಯಗಳ ಆಗರ. ಗದಗಿನ ಬಿಂಕದಕಟ್ಟಿಯಿಂದ ಆರಂಭವಾಗಿ ಮುಂಡರಗಿ ತಾಲ್ಲೂಕಿನ ಸಿಂಗಟಾಲೂರಿನವರೆಗೆ ಹಬ್ಬಿಕೊಂಡಿರುವ ಈ ವನದ ಒಡಲಿನಲ್ಲಿ ನೂರಾರು ಜಾತಿಯ ಔಷಧಿ ಸಸ್ಯಗಳಿವೆ. ಒಂದು ವೇಳೆ, ಡಿನೋಟಿಫೈ ಮಾಡಿದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ’ ಎಂದರು.

‘ಚಿನ್ನದ ಗಣಿಯಲ್ಲಿ ಶುದ್ಧೀಕರಣಕ್ಕೆ ಸಯನೈಡ್‌ ಬಳಕೆ ಮಾಡಲಾಗುತ್ತದೆ. ಇದರ ತ್ಯಾಜ್ಯ ನೀರು ಕೆರೆ ಕುಂಟೆಗಳಿಗೆ ಹರಿದು ಪರಿಸರ ನಾಶವಾಗುತ್ತದೆ’ ಎಂದೂ ಕಿವಿಮಾತು ಹೇಳಿದರು. ಈ ಮಾತಿಗೆ ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

**

ಪ್ರಾಣಿ ಸಂಘರ್ಷದಿಂದ ಪ್ರಾಣಹಾನಿಗೆ ₹10 ಲಕ್ಷ

ಮಾನವ–ಪ್ರಾಣಿ ಸಂಘರ್ಷದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲು ರಾಜ್ಯ ವನ್ಯಜೀವಿ ಮಂಡಳಿ ಸಭೆ ನಿರ್ಧರಿಸಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ವಿಷಯ ಪ್ರಸ್ತಾಪಿಸಿದ ಮಂಡಳಿಯ ಸದಸ್ಯ ಸಂಜಯ್‌ ಗುಬ್ಬಿ , ‘ಸತ್ತವರ ಕುಟುಂಬಕ್ಕೆ ಸದ್ಯ ₹5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಇದು ಮಕ್ಕಳ ಶಿಕ್ಷಣಕ್ಕೂ ಸಾಕಾಗುವುದಿಲ್ಲ. ಇದನ್ನು ₹10 ಲಕ್ಷಕ್ಕೆ ಏರಿಸಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದರು.

**

ಇತರ ತೀರ್ಮಾನಗಳು

* ಕೋಲಾರ ಜಿಲ್ಲೆಯ ಮುಳಬಾಗಿಲಿನ ಹನುಮನಹಳ್ಳಿ ಎಲೆಮೂತಿ ಬಾವಲಿ ಬೆಟ್ಟಕ್ಕೆ ಸಂರಕ್ಷಿತ ಪ್ರದೇಶ ಸ್ಥಾನಮಾನ

* ನಾಗರಹೊಳೆ ಅಭಯಾರಣ್ಯದ 14 ಹಾಡಿಗಳಿಗೆ ಸೌರವಿದ್ಯುಚ್ಛಕ್ತಿ ಒದಗಿಸಲು ನಿರ್ಧಾರ

* ತುಮಕೂರು ಬುಕ್ಕಾಪಟ್ಟಣ ಪ್ರದೇಶವನ್ಯಜೀವಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT