ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಸರ್ಕಾರ ಬೀಳಲೆಂದು ಬಯಸುವುದಿಲ್ಲ: ಎಚ್.ಡಿ. ದೇವೇಗೌಡ

Last Updated 19 ಫೆಬ್ರುವರಿ 2020, 9:31 IST
ಅಕ್ಷರ ಗಾತ್ರ

ಬೆಳಗಾವಿ: ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬೀಳಲೆಂದು ಬಯಸುವುದಿಲ್ಲ. ಮುಂದುವರಿಯಲಿ ಎಂದೇ ಆಶಿಸುತ್ತೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಗಾಗಿ ಪಕ್ಷ ಕಟ್ಟಲು ಹಾಗೂ ಶಕ್ತಿಗಳಿಸಲು ನಮಗೂ ಸಮಯ ಬೇಕಾಗಿದೆ. ಪಕ್ಷ ಸಂಘಟಿಸುವುದಕ್ಕಾಗಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ. ತಳಮಟ್ಟದಿಂದ ಬಲಪಡಿಸಬೇಕಾಗಿದೆ ಎಂದರು.

'ಭ್ರಷ್ಟಾಚಾರವಿಲ್ಲದಂತೆ ಆಡಳಿತ ನಡೆಸುತ್ತೇನೆ ಎಂದಿದ್ದ ಯಡಿಯೂರಪ್ಪ ಅವರು ಈಗ ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಸ್ವತಃ ಹೇಳಿದ್ದಾರೆ. ಹೀಗಾಗಿ ಸರ್ಕಾರದ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಖಜಾನೆಯ ಸ್ಥಿತಿಗತಿಯ ಕುರಿತು ಶ್ವೇತಪತ್ರ ಬಿಡುಗಡೆ ಮಾಡಿ ಎಂದೂ ಕೇಳುವುದಿಲ್ಲ. ಖಜಾನೆಯ ಸ್ಥಿತಿ ಏನಿತ್ತು, ಈಗ ಏನಾಗಿದೆ ಎನ್ನುವುದನ್ನು ಸದನದಲ್ಲಿ ಮಾತನಾಡಲು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಸಮರ್ಥರಿದ್ದಾರೆ. ಅವರೇ ಎಲ್ಲವನ್ನೂ ಬಹಿರಂಗಪಡಿಸುತ್ತಾರೆ' ಎಂದರು.

ಸಿದ್ದರಾಮಯ್ಯ ಹಾಗೂ ಸ್ಪೀಕರ್ ಆಗಿದ್ದ ಕೆ.ಆರ್. ರಮೇಶ್ ಕುಮಾರ್ ಹೇಳಿದ್ದರಿಂದ ನಾವು ಮುಂಬೈಗೆ ಹೋದೆವು. ದೇವೇಗೌಡರನ್ನು ಮುಗಿಸಬೇಕು ಎಂದು ತಿಳಿಸಿದ್ದರಿಂದ ಹೋಗಿದ್ದೆವು ಎಂದು ಹಿಂದಿನ ಅನರ್ಹ ಶಾಸಕರು ಹೇಳಿದ್ದಾರೆ. ಇದರಿಂದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಿದ್ದಿತು. ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.

ಜಿ.ಟಿ. ದೇವೇಗೌಡ ಬಿಟ್ಟರೆ ಬೇರಾರೂ ಪಕ್ಷ‌ ಬಿಟ್ಟು ಹೋಗುವುದಿಲ್ಲ. ಕ್ಷೇತ್ರದ ಕೆಲಸ ಮಾಡಿಸುವುದಕ್ಕಾಗಿ, ವಿಧಾನಪರಿಷತ್ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರ ಪರ ಮತ ಚಲಾಯಿಸಿದೆ ಎಂದು ಅವರೇ ಹೇಳಿದ್ದಾರೆ. ಹಿಂದೆ ಅವರು ಬಿಜೆಪಿಗೆ ಹೋಗಿದ್ದರು. ಈಗ ಬಿಜೆಪಿಗೆ ಹೋಗುತ್ತಾರೋ, ಕಾಂಗ್ರೆಸ್ಸಿಗೋ ಅವರಿಗೇ ಬಿಟ್ಟದ್ದು. ಯಾರನ್ನೂ ಕಟ್ಟಿ ಹಾಕಲು ಆಗುವುದಿಲ್ಲ ಎಂದು ತಿಳಿಸಿದರು.

ಮುಖಂಡರಾದ ಎನ್.ಎಚ್. ಕೋನರೆಡ್ಡಿ, ನಾಸಿರ ಬಾಗವಾನ, ಅಶೋಕ ಪೂಜಾರಿ, ಶಂಕರ ಮಾಡಲಗಿ, ಫೈಜುಲ್ಲ ಮಾಡಿವಾಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT