ಭಾನುವಾರ, ಸೆಪ್ಟೆಂಬರ್ 19, 2021
29 °C

ಐಐಎಸ್‌ಸಿ ಸಿಲಿಂಡರ್ ಸ್ಫೋಟ ಪ್ರಕರಣ: ಸಂಶೋಧಕರ ಎದೆಯಲ್ಲಿ ಸಿಲಿಂಡರ್ ಚೂರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಏರೋಸ್ಪೇಸ್‌ ಎಂಜಿನಿಯರಿಂಗ್‌ ವಿಭಾಗದ ಲ್ಯಾಬ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಗಾಯಗೊಂಡಿರುವ ಮೂವರು ಸಂಶೋಧಕರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ದೇಹ ಹೊಕ್ಕಿದ್ದ ಸಿಲಿಂಡರ್‌ನ ಚೂರುಗಳನ್ನು ವೈದ್ಯರು ಹೊರತೆಗೆದಿದ್ದಾರೆ.

ಬುಧವಾರ ಮಧ್ಯಾಹ್ನ ಸಂಶೋಧನೆಯಲ್ಲಿ ತೊಡಗಿದ್ದ ವೇಳೆ ದುರಂತ ಸಂಭವಿಸಿ ಮೈಸೂರಿನ ಮನೋಜ್ ಕುಮಾರ್ (32) ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡ ಅತುಲ್ಯ ಉದಯ್ ಕುಮಾರ್, ನರೇಶ್ ಕುಮಾರ್ ಹಾಗೂ ಕಾರ್ತಿಕ್ ಶೆಣೈ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನರೇಶ್ ಆಂಧ್ರಪ್ರದೇಶದ ಚಿತ್ತೂರಿನವರು. ಅವರ ತಂದೆ ಕೃಷಿಕರು. ಐಐಎಸ್‌ಸಿಯ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಸ್ಥಾಪಿಸಲಾಗಿರುವ ‘ಸೂಪರ್-ವೇವ್ ಪ್ರೈವೇಟ್ ಲಿಮಿಟೆಡ್‌’ ಕಂಪನಿಯಲ್ಲಿ ನರೇಶ್ ಒಂದೂವರೆ ವರ್ಷದಿಂದ ಪ್ರಾಜೆಕ್ಟ್ ಎಂಜಿನಿಯರ್ ಹಾಗೂ ರೇಡಿಯೇಷನ್ ಸೇಫ್ಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದರು. ಸ್ಫೋಟದಿಂದ ಅವರ ಬಲಗಾಲಿನ ಮೂಳೆ ಮುರಿದಿದೆ. ವಿಷಾನಿಲವೂ ದೇಹ ಸೇರಿರುವುದರಿಂದ ಇನ್ನೂ ಮೂರು ದಿನ ಐಸಿಯುನಲ್ಲೇ ಇರಲಿದ್ದಾರೆ.

‘ನರೇಶ್‌ ದೊಡ್ಡ ವಿಜ್ಞಾನಿಯಾಗಬೇಕೆಂಬ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದವನು. ಐಐಎಸ್‌ಸಿ ಸಮೀಪದ ಪೇಯಿಂಗ್ ಗೆಸ್ಟ್ ನಲ್ಲಿ ನೆಲೆಸಿದ್ದ. 15 ದಿನಗಳ ಹಿಂದಷ್ಟೇ ಊರಿಗೆ ಬಂದು ಹೋಗಿದ್ದ. ದುರಂತ ಹೇಗೆ ಸಂಭವಿಸಿತು ಎಂದು ಯಾರೊಬ್ಬರಿಗೂ ಗೊತ್ತಿಲ್ಲ’ ಎಂದು ನರೇಶ್ ಸೋದರ ಮನು ಹೇಳಿದರು. ಅವರೊಟ್ಟಿಗೆ ಆಸ್ಪತ್ರೆ ಬಳಿ ಬಂದಿದ್ದ ಪೋಷಕರೂ ಮಗನನ್ನು ಕಾಣಲು ಆತಂಕದಿಂದಲೇ ಕಾಯುತ್ತ ನಿಂತಿದ್ದರು.

ಮತ್ತೊಬ್ಬ ಗಾಯಾಳು ಕಾರ್ತಿಕ್ ಮಂಗಳೂರಿನವರು. ತಂದೆ ನಿಧನದ ಬಳಿಕ ಬೆಂಗಳೂರಿಗೆ ಬಂದು ಕೋರಮಂಗಲದ ಪೇಯಿಂಗ್ ಗೆಸ್ಟ್‌ ನಲ್ಲಿ ನೆಲೆಸಿದ್ದರು. ‘ಕಾರ್ತಿಕ್‌ನ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಮಗ ಈ ಸ್ಥಿತಿಯಲ್ಲಿರುವ ವಿಚಾರ ಗೊತ್ತಾದರೆ ಅವರು ಸತ್ತೇ ಹೋಗುತ್ತಾರೆ. ಹೀಗಾಗಿ, ಅವರಿಗೆ ಹೇಳದೆ ನಾವೇ ಬಂದಿದ್ದೇವೆ’ ಎಂದು ಕಾರ್ತಿಕ್ ಚಿಕ್ಕಪ್ಪ ಹೇಳಿದರು.

ದೇಹದಲ್ಲಿ ಚೂರುಗಳು: ‘ಸ್ಫೋಟದ ತೀವ್ರತೆಗೆ ಸಿಲಿಂಡರ್‌ ಹಾಗೂ ಲ್ಯಾಬ್‌ನಲ್ಲಿದ್ದ ಪೀಠೋಪಕರಣಗಳು ಛಿದ್ರಗೊಂಡು ಅವುಗಳ ಚೂರುಗಳು ಸಂಶೋಧಕರ ಎದೆ, ಹೊಟ್ಟೆ ಹಾಗೂ ಕಾಲುಗಳನ್ನು ಸೇರಿದ್ದವು. ಶಸ್ತ್ರಚಿಕಿತ್ಸೆ ಮೂಲಕ ಅವುಗಳನ್ನು ಹೊರತೆಗೆದಿದ್ದೇವೆ. ಅತುಲ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ನಿಧಾನವಾಗಿ ಮಾತನಾಡುತ್ತಿದ್ದಾರೆ’ ಎಂದು ವೈದ್ಯರು ಹೇಳಿದರು.

‘ಕಬ್ಬಿಣದ ದೊಡ್ಡ ಚೂರೊಂದು ಕಾರ್ತಿಕ್ ಎದೆಗೆ ಚುಚ್ಚಿಕೊಂಡಿತ್ತು. ಅದು ಹೃದಯಕ್ಕೆ ತಾಕಿದ್ದರೆ ಜೀವಕ್ಕೇ ಅಪಾಯವಾಗುತ್ತಿತ್ತು. ಅದೃಷ್ಟವಶಾತ್ ಆ ರೀತಿ ಆಗಿಲ್ಲ’ ಎಂದರು.

‘ಕಿಡಿ ತಾಗಿ ಅನಾಹುತ’

ಜಲಜನಕ ಹಾಗೂ ಆಮ್ಲಜನಕ ತುಂಬಿದ್ದ ಸಿಲಿಂಡರ್‌ಗೆ ಬೆಂಕಿ ಕಿಡಿ ತಾಕಿದ್ದರಿಂದಲೇ ಅವಘಡ ಸಂಭವಿಸಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

‘ಎಫ್‌ಎಸ್‌ಎಲ್ ತಜ್ಞರು ಸಿಲಿಂಡರ್ ಸ್ಫೋಟಗೊಂಡಿರುವುದನ್ನು ಖಚಿತಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಸಿಲಿಂಡರ್‌ನ ಚೂರುಗಳು ದುರಂತದ ಸ್ಥಳದಲ್ಲಿ ಹಾಗೂ ಗಾಯಾಳುಗಳ ದೇಹದಲ್ಲಿ ಸಿಕ್ಕಿವೆ. ಸಂಶೋಧಕರು ಪ್ರಯೋಗಾರ್ಥ
ವಾಗಿ ಕೆಲ ರಾಸಾಯನಿಕ ಪರಿಕರಗಳನ್ನು ಜೋಡಿಸುತ್ತಿದ್ದಾಗ ಬೆಂಕಿ ಉತ್ಪತ್ತಿಯಾಗಿ ಕಿಡಿ ಹಾರಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ದುರಂತ ಸಂಬಂಧ ಐಐಎಸ್‌ಸಿಯ ಹಿರಿಯ ಸಂಶೋಧಕರು ಸಹ ಆಂತರಿಕ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ, ಐಐಎಸ್‌ಸಿ ಹಾಗೂ ಎಫ್‌ಎಸ್‌ಎಲ್ ಅಧಿಕಾರಿಗಳ ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಹೇಳಿದರು.

ಮಾಲೀಕರ ವಿರುದ್ಧ ಎಫ್‌ಐಆರ್

ದುರಂತ ಸಂಬಂಧ ಐಐಎಸ್‌ಸಿ ಭದ್ರತಾ ಸಲಹೆಗಾರ ಎಂ.ಆರ್.ಚಂದ್ರಶೇಖರ್ ದೂರು ಕೊಟ್ಟಿದ್ದು, ‘ಸೂಪರ್‌ವೇವ್’ ಕಂಪನಿ ಮಾಲೀಕರಾದ ಕೆ.ಪಿ.ಜೆ.ರೆಡ್ಡಿ ಹಾಗೂ ಜಿ.ಜಗದೀಶ್ ವಿರುದ್ಧ ಐಪಿಸಿ 338 ಹಾಗೂ 304ಎ (ಅಜಾಗರೂಕತೆಯಿಂದ ಜೀವಕ್ಕೆ ಕುತ್ತು ತರುವುದು) ಕಲಂಗಳಡಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಅವರಿಬ್ಬರನ್ನೂ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ.

ಎಂಜಿನಿಯರ್ ಮನೋಜ್‌ ಅಂತ್ಯಕ್ರಿಯೆ

ಮೈಸೂರು: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರಯೋಗಾಲಯದಲ್ಲಿ ಬುಧವಾರ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟ ಎಂಜಿನಿಯರ್ ಮನೋಜ್‌ಕುಮಾರ್ ಅಂತ್ಯಕ್ರಿಯೆ ನಗರದ ಲಲಿತಮಹಲ್ ಬಳಿಯ ಸ್ಮಶಾನದಲ್ಲಿ ಗುರುವಾರ ನೆರವೇರಿತು.

ಕೊಳ್ಳೇಗಾಲದ ಜೆಎಸ್ಎಸ್ ಕಾಲೇಜು ನಿವೃತ್ತ ಪ್ರಾಂಶುಪಾಲ ಕೆ.ಪ್ರಕಾಶ್ ಅವರ ಪುತ್ರ ಮನೋಜ್‌ ವರ್ಷದ ಹಿಂದೆಯಷ್ಟೇ ತಮ್ಮ ಸಹಪಾಠಿಯಾಗಿದ್ದ ಅನುಷಾ ಅವರನ್ನು ವಿವಾಹವಾಗಿದ್ದರು.

ಸುರಕ್ಷತೆ: ಸೆಕ್ಯುರಿಟಿ ಆಡಿಟಿಂಗ್‌ಗೆ ನಿರ್ಧಾರ

ಪ್ರಯೋಗಾಲಯದಲ್ಲಿ ಸ್ಫೋಟದ ಹಿನ್ನೆಲೆಯಲ್ಲಿ ಸಂಸ್ಥೆಯ ಇತರ ಪ್ರಯೋಗಾಲಯಗಳಲ್ಲೂ ಸುರಕ್ಷತೆ ಪರಿಶೀಲಿಸಲು ಸೆಕ್ಯುರಿಟಿ ಆಡಿಟ್‌ ನಡೆಸಲು ಭಾರತೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿ ನಿರ್ಧರಿಸಿದೆ.

ತತ್‌ಕ್ಷಣದಿಂದಲೇ ಎಲ್ಲ ಪ್ರಯೋಗಾಲಯಗಳಲ್ಲೂ ಸೂಕ್ತ ಸುರಕ್ಷತಾ ಕ್ರಮ ಇನ್ನಷ್ಟು ಬಿಗಿಗೊಳಿಸಲು ನಿರ್ಧರಿಸಿದೆ. 

‘ಸ್ಫೋಟಕ್ಕೆ ಕಾರಣ ಪತ್ತೆ ಮಾಡಲು ಭಾರತೀಯ ವಿಜ್ಞಾನ ಸಂಸ್ಥೆ ಆಂತರಿಕ ಸಮಿತಿಯನ್ನು ರಚಿಸಲು ನಿರ್ಧರಿಸಿದೆ. ಸಂಸ್ಥೆಯ ಹಲವು ಪ್ರಯೋಗಾಲಯಗಳಲ್ಲಿ ಹೈಡ್ರೋಜನ್‌ ಮತ್ತು ಇತರ ಬಗೆಯ ಅನಿಲಗಳನ್ನು ಬಳಸಲಾಗುತ್ತಿದೆ’ ಎಂದು ಐಐಎಸ್‌ಸಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ ಭದ್ರತಾ ವಿಭಾಗದ ಮುಖ್ಯಸ್ಥ ಚಂದ್ರಶೇಖರ್‌  ಘಟನೆಯ ಬಗ್ಗೆ ಮಾತನಾಡಿ, ‘ನಮ್ಮ ಕ್ಯಾಂಪಸ್‌ನಲ್ಲಿ ಸುರಕ್ಷತಾ ಕ್ರಮಗಳು ಅತ್ಯುತ್ತಮ ಮಟ್ಟದ್ದಾಗಿದೆ. ಈ ಹಿಂದೆ ಕ್ಯಾಂಪಸ್‌ನಲ್ಲಿ ಅಗ್ನಿ ಆಕಸ್ಮಿಕಗಳು ಸಂಭವಿಸಿದ್ದವು. ಆದರೆ ಇದೇ ಮೊದಲ ಬಾರಿಗೆ ಸಾವು ಸಂಭವಿಸಿದೆ’ ಎಂದರು.

**

ದೇಹದ ಪ್ರಮುಖ ಅಂಗಗಳಿಗೆ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ. ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಪೂರ್ಣ ಚೇತರಿಸಿಕೊಳ್ಳಲು ಇನ್ನೂ ಮೂರು ತಿಂಗಳು ಬೇಕಾಗಬಹುದು
- ಡಾ.ನರೇಶ್ ಶೆಟ್ಟಿ, ಅಧ್ಯಕ್ಷರು, ಎಂ.ಎಸ್.ರಾಮಯ್ಯ ಆಸ್ಪತ್ರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು