ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ ಅಣೆಕಟ್ಟು ಎತ್ತರ, ಕೇಂದ್ರ ಮಧ್ಯಪ್ರವೇಶಿಸಲಿ: ರಮೇಶ್ ಜಾರಕಿಹೊಳಿ ಮನವಿ

Last Updated 2 ಜುಲೈ 2020, 13:38 IST
ಅಕ್ಷರ ಗಾತ್ರ

ಕಲಬುರ್ಗಿ:‘ಮಹದಾಯಿ ಯೋಜನೆ ಅನುಷ್ಠಾನಗೊಳಿಸುವ ಮತ್ತು ಕೃಷ್ಣಾ ನೀರಿನ ಹಂಚಿಕೆ, ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶೀಘ್ರವೇ ಅಧಿಸೂಚನೆ ಹೊರಡಿಸಬೇಕು’ ಎಂದುಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮನವಿ ಮಾಡಿದರು.

ಅಫಜಲಪುರ ತಾಲ್ಲೂಕಿನ ಸೊನ್ನ ಬ್ಯಾರೇಜ್‌ಗೆ ಗುರುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಶೀಘ್ರವೇ ನವದೆಹಲಿಗೆ ತೆರಳಿ, ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗುವೆ’ ಎಂದರು.

‘ಮಹಾರಾಷ್ಟ್ರದ ಅಣೆಕಟ್ಟುಗಳ ಗೇಟು ತೆರೆದಾಗಲೆಲ್ಲ, ನೀರು ಹರಿದು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಪ್ರವಾಹ ರೂಪ ಪಡೆದುಕೊಳ್ಳುತ್ತದೆ. ಜನರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರದ ಜೊತೆ ಚರ್ಚಿಸಲಾಗುವುದು’ ಎಂದು ಹೇಳಿದರು.

‘ರಾಜ್ಯದ ವಿವಿಧೆಡೆ ಜಲಾಶಯಗಳ ಸ್ಥಿತಿಗತಿ ಹೇಗಿದೆ ಮತ್ತು ಯಾವುದೆಲ್ಲ ತುರ್ತು ಕಾಮಗಾರಿ ಆಗಬೇಕಿದೆ ಎಂಬದನ್ನು ಪರಿಶೀಲಿಸಲು ರಾಜ್ಯದ ವಿವಿಧೆಡೆ ಭೇಟಿ ನೀಡುತ್ತಿದ್ದೇನೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿದ ಬಳಿಕ ಜಲಾಶಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಕಂದಾಯ ಸಚಿವ ಆರ್.ಅಶೋಕ ಜನ್ಮದಿನಾಚರಣೆ ಸಂದರ್ಭದಲ್ಲಿ ಸಚಿವರಾದ ಸಿ.ಟಿ.ರವಿ ಮತ್ತು ಜಗದೀಶ ಶೆಟ್ಟರ್ ಗುಪ್ತ ಸಭೆ ನಡೆಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಜನ್ಮದಿನ ಆಚರಣೆಗಾಗಿ ಎಲ್ಲರೂ ಒಂದು ಕಡೆ ಸೇರಿದ್ದರೆ ಹೊರತು ಮತ್ತೇನೂ ವಿಶೇಷವಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ’ ಎಂದರು.

ಸಂಸದ ಡಾ. ಉಮೇಶ ಜಾಧವ, ಸುರಪುರ ಶಾಸಕ ರಾಜುಗೌಡ, ಮುಖಂಡ ಮಾಲೀಕಯ್ಯ ಗುತ್ತೇದಾರ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT