ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಥಿಕ ಕ್ವಾರಂಟೈನ್ 7 ದಿನಗಳಿಗೆ ಇಳಿಕೆ

ಹೊರರಾಜ್ಯದಿಂದ ಬಂದವರಿಗೂ ಅವಧಿ ಕಡಿಮೆ ಮಾಡಿದ ಸರ್ಕಾರ
Last Updated 23 ಮೇ 2020, 20:03 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಷ್ಟ್ರ ಸೇರಿದಂತೆ ಕೆಲವೊಂದು ರಾಜ್ಯಗಳಿಂದ ತವರೂರಿಗೆ ವಾಪಸ್‌ ಆದವರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆಯು 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಅವಧಿಯನ್ನು 7 ದಿನಗಳಿಗೆ ಇಳಿಕೆ ಮಾಡಿದೆ.

ಈ ಹಿಂದಿನ ನಿಯಮದ ಪ್ರಕಾರ ದೇಶದ ಯಾವುದೇ ಮೂಲೆಯಿಂದ ರಾಜ್ಯಕ್ಕೆ ಬಂದರೂ ಅವರನ್ನು ಕಡ್ಡಾಯವಾಗಿ 14 ದಿನಗಳು ಕ್ವಾರಂಟೈನ್‌ ಕೇಂದ್ರಗಳಲ್ಲಿ ದಾಖಲಿಸಿಕೊಳ್ಳಲಾಗುತ್ತಿತ್ತು. ಈ ಅವಧಿಯಲ್ಲಿ ಸೋಂಕು ಕಾಣಿಸಿಕೊಂಡಲ್ಲಿ ಅಲ್ಲಿಂದ ನೇರವಾಗಿ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗುತ್ತಿತ್ತು. ಸೋಂಕು ಇಲ್ಲವೆಂದು ಪರೀಕ್ಷಾ ವರದಿಯಿಂದ ದೃಢಪಟ್ಟಲ್ಲಿ ಮಾತ್ರ ಮನೆಗೆ ಕಳುಹಿಸಿ, 14 ದಿನಗಳು ನಿಗಾ ವ್ಯವಸ್ಥೆಗೆ ಒಳಪಡಿಸಲಾಗುತ್ತಿತ್ತು. ಈಗ ಕ್ವಾರಂಟೈನ್‌ ನಿಯಮ ಸಡಿಲಿಸಿದ ಪರಿಣಾಮ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಆತಂಕ ಶುರುವಾಗಿದೆ.

ಇನ್ನೊಂದೆಡೆ ಸೋಂಕು ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕ್ವಾರಂಟೈನ್‌ ಕೇಂದ್ರಗಳಲ್ಲಿ ಸ್ಥಳದ ಸಮಸ್ಯೆ ತಲೆದೋರಿದೆ. ಹೀಗಾಗಿ ಎಲ್ಲರನ್ನೂ 14 ದಿನಗಳು ಕ್ವಾರಂಟೈನ್‌ಗೆ ಒಳಪಡಿಸುವ ನಿಯಮವನ್ನು ಆರೋಗ್ಯ ಇಲಾಖೆ ಕೈಬಿಟ್ಟಿದೆ. ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳುನಾಡು, ರಾಜಸ್ಥಾನ ಹಾಗೂ ಮಧ್ಯಪ್ರದೇಶವನ್ನು ಅಧಿಕ ಅಪಾಯದ ರಾಜ್ಯಗಳು ಎಂದು ಗುರುತಿಸಲಾಗಿದ್ದು, ಅಲ್ಲಿಂದಬಂದವರನ್ನು ಮಾತ್ರ ಇನ್ನುಮುಂದೆ 7 ದಿನಗಳು ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರಿಸಲಾಗುತ್ತದೆ.

7 ದಿನಗಳ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಕೋವಿಡ್‌ ಪರೀಕ್ಷೆ ನಡೆಸಿ, ಸೋಂಕು ಇಲ್ಲ ಎನ್ನುವುದು ದೃಢಪಟ್ಟಲ್ಲಿ ಮನೆಗೆ ಕಳುಹಿಸಿ, ಮುಂದಿನ 7 ದಿನಗಳು ನಿಗಾ ವ್ಯವಸ್ಥೆಗೆ ಒಳಪಡಲು ಸೂಚಿಸಲಾಗುತ್ತದೆ.ಅಧಿಕ ಅಪಾಯವಲ್ಲದ ರಾಜ್ಯಗಳಿಂದ ಬಂದವರಲ್ಲಿ ಸೋಂಕು ಲಕ್ಷಣಗಳು ಇದ್ದಲ್ಲಿ ಮಾತ್ರ ಕ್ವಾರಂಟೈನ್‌ ಕೇಂದ್ರಗಳಿಗೆ ದಾಖಲಿಸಲಾಗುತ್ತದೆ. ಇಲ್ಲವಾದಲ್ಲಿ ಮನೆಯಲ್ಲಿಯೇ 14 ದಿನಗಳ ನಿಗಾ ವ್ಯವಸ್ಥೆಗೆ ಒಳಪಡಬಹುದಾಗಿದೆ.

ಕ್ವಾರಂಟೈನ್ ವಿನಾಯಿತಿ

* ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟವರು

* ಕೋವಿಡ್ ಪರೀಕ್ಷೆಯ ವರದಿ ಇದ್ದರೆ ವಾಣಿಜ್ಯೋದ್ಯಮಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT